ನಕಲಿ ಬಿತ್ತನೆ ಬೀಜ ಮಾರಾಟ: ಧರಣಿ
ಬಂಗಾರಪೇಟೆ: ನಕಲಿ ಬಿತ್ತನೆ ಬೀಜ ಮಾರಾಟ ಮಾಡಿ ರೈತರಿಗೆ ವಂಚಿಸಿದ್ದಾರೆಂದು ನೂರಾರು ರೈತರು ಪಟ್ಟಣದ ಖಾಸಗಿ ಬೀಜ ಮಳಿಗೆ ಮುಂದೆ ಸೋಮವಾರ ಧರಣಿ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿ ಎಲೆಮಲ್ಲಪ್ಪ ರಸ್ತೆಯಲ್ಲಿರುವ ಮಳಿಗೆಯಲ್ಲಿ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ನೆಲ್ಲಹಳ್ಳಿ ಮತ್ತು ಮಾತರಲ್ಲು ಗ್ರಾಮದ ರೈತರು ಇತ್ತೀಚೆಗೆ ಜೋಳದ ಬೀತ್ತನೆ ಬೀಜಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಅದನ್ನು ನಾಟಿ ಮಾಡಿದರೆ ತಿಂಗಳಾದರೂ ಮೊಳಕೆ ಸಹ ಬಂದಿಲ್ಲದಿರುವುದರಿಂದ ಆತಂಕಗೊಂಡಿರುವ ರೈತರು ಇದು ಕಳಪೆ ಮತ್ತು ನಕಲಿ ಬಿತ್ತನೆ ಬೀಜಗಳೆಂದು ಅರಿತು ಸೋಮವಾರ ದಿಢೀರನೇ ಮಳಿಗೆಗೆ ಬಂದು ಮಳಿಗೆ ಮಾಲೀಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ತಾಲೂಕು ರೈತ ಸಂಘದ ಪದಾಧಿಕಾರಿಗಳು ಸಾಥ್ ನೀಡಿದರು. ನಂತರ ಮಳಿಗೆ ಮಾಲೀಕರು ನಾವೂ ಸಹ ರೈತರಿಂದಲೇ ಬಿತ್ತನೆ ಬೀಜಗಳನ್ನು ಖರೀದಿ ಮಾಡಿದ್ದು, ನಿಮಗೆ ವಿತರಿಸಲಾಗಿದೆ. ಆದರೆ ನಮ್ಮಿಂದ ರೈತರಿಗೆ ನಷ್ಟವಾಗಿರುವುದರಿಂದ ಹಣವನ್ನು ಮರುಪಾವತಿ ಮಾಡುವುದಾಗಿ ಹೇಳಿ ರೈತರ ಮನವೊಲಿಸಿದರು.