ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪರವಾನಗಿ ಇಲ್ಲದ ಕೀಟನಾಶಕಗಳ ದಾಸ್ತಾನು: ದೂರು

Vishwanath S
Updated On : 20 Aug 2013, 12:56 pm

ಕನ್ನಡಪ್ರಭವಾರ್ತೆ, ಕೋಲಾರ, ಆ.19
ನಗರದ ಕಾರಂಜಿಕಟ್ಟೆಯ ಮನೆಯೊಂದರ ಮೇಲೆ ರೈತಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ದಾಳಿ ನಡೆಸಿ, ಪರವಾನಗಿ ಇಲ್ಲದೆ ದಾಸ್ತಾನು ಮಾಡಿದ್ದ ಕೀಟನಾಶಕಗಳನ್ನು ತಾಲೂಕು ಕೃಷಿ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಸೋಮವಾರ ನಡೆದಿದೆ.
ನಗರದ ಕಾರಂಜಿಕಟ್ಟೆಯ 7ನೇ ಅಡ್ಡ ರಸ್ತೆಯ ಮನೆಯೊಂದರಲ್ಲಿ ಆಂಧ್ರ ಮೂಲದ ವ್ಯಕ್ತಿಗಳು ಸಬರಿ ಆಗ್ರೋ ಬಯೋಟಿಕ್ ಹೆಸರಿನಲ್ಲಿ ಕೃಷಿಗೆ ಅಗತ್ಯವಾದ ಕೀಟನಾಶಕ ಔಷಧಿಗಳನ್ನು ಪರವಾನಗಿ ಇಲ್ಲದೆ ಮಾರುತ್ತಿದ್ದರು. ಈ ಮಾಹಿತಿ ಪಡೆದ ರೈತ ಸಂಘದ ಕಾರ್ಯಕರ್ತರು ದಾಳಿ ನಡೆಸಿ ಕೃಷಿ ಅಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ದೂರು ನೀಡಿದರು.
ಮನೆಯ ಕೋಣೆಯೊಂದರಲ್ಲಿ ದಾಸ್ತಾನು ಮಾಡಿದ್ದ ವಿವಿಧ ಹೆಸರಿನ ಕೀಟನಾಶಕಗಳು ಪತ್ತೆಯಾಗಿದ್ದು, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಗಾಯಿತ್ರಿ ಸ್ಥಳದಲ್ಲಿಯೇ ಪಂಚನಾಮೆ ನಡೆಸಿ ಅವುಗಳನ್ನು ವಶಕ್ಕೆ ಪಡೆದರು.
ಆಂಧ್ರಪ್ರದೇಶದ ನಾಗೇಶ್, ಪ್ರಕಾಶ್ ಮತ್ತು ರವಿ ಎಂಬವರು ಈ ಔಷಧಿಗಳನ್ನು ರೈತರಿಗೆ ನೇರವಾಗಿ ನೀಡದೆ ತಾಲೂಕಿನ ಕ್ರಿಮಿನಾಶಕ ಅಂಗಡಿಗಳಿಗೆ ಪೂರೈಸಿ ಮಾರುತ್ತಿದ್ದಾರೆ ಎಂದು ರೈತ ಸಂಘದ ಮುಖಂಡ ಶ್ರೀನಿವಾಸಗೌಡ ಆರೋಪಿಸಿದರು.
ನಕಲಿ ಔಷಧಿ: ಸಬರಿ ಆಗ್ರೋ ಬಯೋಟಿಕ್ ಹೆಸರಿನಲ್ಲಿರುವ ಈ ಕೃಷಿ ಔಷಧಿಗಳು ಸಂಪೂರ್ಣ ನಕಲಿಯಾಗಿದ್ದು, ಇವುಗಳನ್ನು ಮಾರಲು ಕೃಷಿ ಇಲಾಖೆಯಿಂದ ಯಾವುದೇ ಪರವಾನಗಿಯನ್ನೂ ಪಡೆದುಕೊಂಡಿಲ್ಲ ಎಂದು ಆರೋಪಿಸಿದರು.
ಈ ಕ್ರಿಮಿನಾಶಕಗಳಿಗೆ ದಾಸ್ತಾನು ಹಾಗೂ ಮಾರಾಟಕ್ಕೆ ಕೃಷಿ ಇಲಾಖೆಯಿಂದ ಪರವಾನಗಿ ಪಡೆದಿಲ್ಲ ಎಂಬುದನ್ನು ಗಾಯಿತ್ರಿ ಸ್ಪಷ್ಟಪಡಿಸಿದರು. ಇವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಲೇಬಲ್ ಕಾಯ್ದೆ ಪ್ರಕಾರ ಬಾಟಲ್ ಮೇಲೆ ನಮೂದಿಸಿರುವ ಪದಾರ್ಥಗಳು ಒಳಗಿದೆಯೋ, ಇಲ್ಲವೋ ಎಂಬುದನ್ನು ದೃಢೀಕರಿಸಿಕೊಂಡು ನಂತರ ಮಾರುತ್ತಿದ್ದ ವ್ಯಕ್ತಿಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.
ದಾಳಿ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ನಾರಾಯಣಗೌಡ, ತಾಲೂಕು ಅಧ್ಯಕ್ಷ ಮುನೇಗೌಡ, ಶಿವಾರೆಡ್ಡಿ, ಕೃಷ್ಣ, ಉದಯ, ನಾಗರಾಜ್ ಗೌಡ ಮತ್ತು ಅಪರಾಧ ವಿಭಾಗದ ಅಧಿಕಾರಿ ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement