ಮಳೆ ಬಂದ್ರೆ ಬೆಳೆ, ಇಲ್ಲವಾದಲ್ಲಿ ಗುಳೆ
ಗುಡಿಬಂಡೆ: ಹೆಸರಿಗೆ ಮಾತ್ರ ತಾಲೂಕು ಕೇಂದ್ರ ಎನಿಸಿಕೊಂಡಿರುವ ಗುಡಿಬಂಡೆ ಹಲವಾರು ಮೂಲ ಸೌಕರ್ಯಗಳಿಂದ ವಂಚಿತವಾಗಿರುವುದು ಕಣ್ಣಿಗೆ ರಾಚುತ್ತದೆ.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಈ ಪ್ರದೇಶ ಸಮಗ್ರ ಅಭಿವೃದ್ಧಿ ಹೊಂದಲು ಇಲ್ಲಿಯ ಜನತೆ ಇನ್ನೆಷ್ಟು ವರ್ಷಗಳು ಕಾಯಬೇಕೊ ಗೊತ್ತಿಲ್ಲ. ಭೌಗೋಳಿಕವಾಗಿ ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿರುವ ಈ ಭಾಗದ ಜನತೆಗೆ ಕೃಷಿ ಮಾಡಲು ಸೂಕ್ತ ಭೂಮಿಯಿಲ್ಲ. ಇರುವ ಅಲ್ಪ-ಸ್ವಲ್ಪ ಭೂಮಿಯಲ್ಲಿ ಬೆಳೆ ಬೆಳೆಯಲು ಯಾವುದೇ ಶಾಶ್ವತ ನೀರಾವರಿ ಸೌಲಭ್ಯವೂ ಇಲ್ಲ. ಮಳೆ ಬಂದರೆ ಬೆಳೆ. ಇಲ್ಲವಾದರೆ ಗುಳೆ ಎಂಬಂತಾಗಿದೆ ಇಲ್ಲಿಯ ಜನರ ಪಾಡು.
ಪಟ್ಟಣದ ಗೋಳು ಕೇಳೋರ್ಯಾರು?: ಇನ್ನು ಪಟ್ಟಣ ಮತ್ತು ಗ್ರಾಮಗಳಲ್ಲಿ ಮೂಲ ಸೌಕರ್ಯಗ ಬಗ್ಗೆ ಮಾತನಾಡದಿರುವುದೇ ಲೇಸು. ಏಕೆಂದರೆ ತಾಲೂಕು ಕೇಂದ್ರವಾದ ಇಲ್ಲಿ ಸಾರ್ವಜನಿಕರಿಗಾಗಿ ಕನಿಷ್ಠ ಶೌಚಾಲಯ ಹಾಗೂ ಬಸ್ ತಂಗುದಾಣದ ವ್ಯವಸ್ಥೆಯೂ ಇಲ್ಲ.
ಪಟ್ಟಣದ ಹೃದಯ ಭಾಗದಲ್ಲಿ ಹಾದುಹೋಗಿರುವ ಮುಖ್ಯರಸ್ತೆ ಬಹಳ ಕಿರಿದಾಗಿದ್ದು, ವಾಹನಗಳ ಮತ್ತು ಸಾರ್ವಜನಿಕರ ಸಂಚಾರಕ್ಕೆ ಹರಸಾಹಸಪಡಬೇಕು. ಅಡ್ಡಾದಿಡ್ಡಿ ನಿಲುಗಡೆಯಾಗುವ ವಾಹನಗಳು, ಬಿಡಾಡಿ ದನ ಮತ್ತು ಮತ್ತು ನಾಯಿಗಳ ಒಡಾಟದಿಂದ ರಸ್ತೆಯಲ್ಲಿ ಸಣ್ಣಪಟ್ಟ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ. ಪಾದಚಾರಿಗಳು, ಶಾಲಾಮಕ್ಕಳು, ವೃದ್ಧರ ಸಂಕಟ ಹೇಳತೀರದು. ಈ ಬಗ್ಗೆ ಹಲವಾರು ಬಾರಿ ವಿವಿಧ ರೀತಿಯಲ್ಲಿ ಸಂಬಂಧಪಟ್ಟವರ ಗಮನ ಸೆಳೆದರೂ ಇತ್ತ ಗಮನ ನೀಡಿದವರು ಮಾತ್ರ ಯಾರೂ ಇಲ್ಲ. ತಾಲೂಕಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಎಲ್ಲ ಸಮಸ್ಯೆಗಳ ಬಗ್ಗೆ ಅರಿವಿದ್ದರೂ 'ಜಾಣ ಕಿವುಡು' ಪ್ರದರ್ಶಿಸುತ್ತಿದ್ದು, ಜಡಭರತರಂತೆ ವರ್ತಿಸುತ್ತಿರುವುದು ಖೇದದ ಸಂಗತಿ.
ಅಭಿವೃದ್ಧಿ ಹೆಸರಲ್ಲಿ ಬೇಡವಾದ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರ ಹಣವನ್ನು ಜೇಬಿಗಿಳಿಸುವ ಪರಿಹಾಠವನ್ನು ಬಿಟ್ಟು ಅಧಿಕಾರಿಗಳು ಜನತೆಯ ಬೇಕು ಬೇಡಗಳಿಗೆ ಸ್ಪಂದಿಸಿ ಕಾರ್ಯನಿಷ್ಠೆ ಹಾಗೂ ಬದ್ಥತೆ ತೋರಲಿ ಎಂಬುದು ಸಾರ್ವಜನಿಕರ ಒತ್ತಾಯ.