ಮಳೆಗೆ ಬರವಾದರೂ ಬೀಜ, ಗೊಬ್ಬರಕ್ಕಿಲ್ಲ ಕೊರತೆ
ಕ.ಪ್ರ.ವಾರ್ತೆ , ಕೋಲಾರ , ಆ.19
ತಾಲೂಕಿನಲ್ಲಿ ಮಳೆಗೆ ಕೊರತೆಯಿದ್ದರೂ ಬಿತ್ತನೆ ಬೀಜ ಮತ್ತು ವಿವಿಧ ಗೊಬ್ಬರಗಳಿಗೆ ಯಾವುದೇ ರೀತಿಯಲ್ಲೂ ಕೊರತೆ ಉಂಟಾಗದಂತೆ ದಾಸ್ತಾನು ಮಾಡಲಾಗಿದೆ ಎಂದು ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯಿತ್ರಿ ತಿಳಿಸಿದರು.
ಕೋಲಾರ ತಾಪಂನಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ತಮ್ಮ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿ, ತಾಲೂಕಿನ ಒಟ್ಟು ಬಿತ್ತನೆ ಪ್ರದೇಶ 19100 ಹೆಕ್ಟೇರ್. ಆ ಪೈಕಿ 13421 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ಮುಗಿದಿದೆ. ಮಳೆ ಕೊರತೆಯಿಂದ ಈವರೆಗೆ ಶೇ.65-70 ಬಿತ್ತನೆಯಾಗಿದ್ದು, ಬೆಳೆಗಳು ಉಳಿಯಬೇಕಾದರೆ ಮಳೆ ಅತ್ಯಗತ್ಯವೆಂದರು.
ತಾಲೂಕಿನಲ್ಲಿ 1931 ಮೆಟ್ರಿಕ್ ಟನ್ ಬಿತ್ತನೆ ಬೀಜ ದಾಸ್ತಾನು ಮಾಡಿ, ಆ ಪೈಕಿ 664 ಮೆ.ಟನ್ ಖರ್ಚು ಮಾಡಲಾಗಿದೆ. ಗೊಬ್ಬರಗಳಿಗೂ ಕೊರತೆಯಾಗದ ಹಾಗೆ ನೋಡಿಕೊಳ್ಳಲಾಗಿದೆ. ಈ ತಿಂಗಳ ಅಂತ್ಯದವರೆಗೆ ಬಿತ್ತನೆ ಕಾರ್ಯ ನಡೆಸಲು ಅವಕಾಶವಿದ್ದು, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆಂದರು.
ಕೃಷಿಗಾಗಿ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದ ರೈತರಿಗೆ ಬೆಳೆ ವಿಮೆ ಜಾರಿಯಲ್ಲಿದ್ದು ಸಾಲ ಪಡೆಯುವರೂ ಆ.31ರೊಳಗೆ ಬೆಳೆ ವಿಮೆ ಮಾಡಿಸಬಹುದು. ಪ್ರತಿಯೊಂದೂ ಬೆಳೆಗೆ ಒಂದೊಂದು ರೀತಿಯಲ್ಲಿ ವಿಮೆ ಸೌಲಭ್ಯವಿದೆ ಎಂದರು.
ಸಂಸ್ಕರಣಾ ಘಟಕಕ್ಕೆ ಆರ್ಥಿಕ ಸಹಾಯ: ರಾಜ್ಯ ಸರ್ಕಾರ ಕೃಷಿ ಯಂತ್ರಗಳ ಹಾಗೂ ಸಂಸ್ಕರಣಾ ಘಟಕಗಳಿಗಾಗಿ ಆರ್ಥಿಕ ಸಹಾಯ ನೀಡಲು ಅನುದಾನ ಬಿಡುಗಡೆ ಮಾಡಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಅನುದಾನ ನೀಡಲಾಗುತ್ತದೆ. ಅರ್ಜಿಗಳನ್ನು ಆಹ್ವಾನಿಸಲು ಸರ್ಕಾರದಿಂದ ಮಾರ್ಗಸೂಚಿ ಬಂದ ಕೂಡಲೇ ಪ್ರಕಟಣೆ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಪ್ರಮುಖ ಬೆಳೆಯಾದ ರಾಗಿಯನ್ನು ಈವರೆಗೆ 10615 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ತೊಗರಿ 755 ಹೆ., ಅವರೆ 985, ನೆಲಗಡಲೆ 235 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು ಮಳೆ ಕೊರತೆಯಿಂದ ನೆಲಗಡಲೆ ಕಡಿಮೆ ಇಳುವರಿ ನೀಡುವ ಸಾಧ್ಯತೆ ಇದೆ ಎಂದರು.
ಉಪ ಶಿರ್ಷಿಕೆ ಹಣ ಮಾರ್ಗ ಸೂಚಿ ಪ್ರಕಾರ ಬಳಕೆ: ತಾಪಂ ಲೆಕ್ಕಾಧಿಕಾರಿ ಪ್ರಕಾಶ್ ರಾವ್ ಮಾತನಾಡಿ, ಸರ್ಕಾರದಿಂದ ಬಿಡುಗಡೆ ವಿವಿಧ ಇಲಾಖೆಗಳಿಗೆ ಮಾಡಿರುವ ಉಪ ಶೀರ್ಷಿಕೆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ. ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳು ಉಪ ಶೀರ್ಷಿಕೆ ಹಣವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಖರ್ಚು ಮಾಡಿ ವರದಿ ಸಲ್ಲಿಸಬೇಕೆಂದರು.
ಉಪ ಶೀರ್ಷಿಕೆ ಅನುದಾನದ ಖರ್ಚುಗಳನ್ನು ಆನ್ಲೈನ್ಮೂಲಕ ದಾಖಲಿಸಬೇಕಾಗುತ್ತದೆ. ಇದು ಪಾರದರ್ಶಕವಾಗಿಬೇಕು. ಲೋಪ ಕಂಡು ಬಂದಲ್ಲಿ ಲೆಕ್ಕ ಮಹಾಪಾಲಕರು ಅಕ್ಷೇಪ ವ್ಯಕ್ತಪಡಿಸುವುದರಿಂದ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಉಪ ಶೀರ್ಷಿಕೆಯ ಖರ್ಚು ವೆಚ್ಚಗಳ ಕಡೆ ಆಯಾ ಇಲಾಖೆಗಳ ಬಡವಾಡೆ ಅಧಿಕಾರಿಗಳು ನಿಗಾ ವಹಿಸಿ ಕೆಲಸ ಮಾಡುವಂತೆ ಸಲಹೆ ನೀಡಿದರು.
ಅಧಿಕಾರಿಗಳು ಗೈರು: ತಾಪಂ ಕೆಡಿಪಿ ಸಭೆಗೆ ಅನೇಕ ಅಧಿಕಾರಿಗಳು ಗೈರು ಹಾಜರಾಗಿದ್ದರು. ಕೆಲವು ಅಧಿಕಾರಿಗಳು ತಮ್ಮ ಇಲಾಖೆಯ ಚರ್ಚೆ ನಂತರ ನಿರ್ಗಮಿಸಿದ್ದರಿಂದ ಸಭೆ ಖಾಲಿ ಹೊಡೆಯುತ್ತಿತ್ತು. ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾರಾಯಣಮುರ್ತಿ ವಹಿಸಿದ್ದರು. ಉಪಾಧ್ಯಕ್ಷೆ ಸರಸ್ವತಿ ಮುನಿಕೃಷ್ಣ ಹಾಗೂ ಇಒ ಪರವಾಗಿ ತಾಪಂ ಸಹಾಯಕ ನಿರ್ದೇಶಕ ಎಸ್.ಪಿ.ಚನ್ನಬಸವಯಣ್ಣ ಇದ್ದರು. ನಿರ್ಮಲ ಭಾರತ ಯೋಜನೆಯ ತಾಪಂ ಸಮನ್ವಯಾಧಿಕಾರಿ ಜಿ.ಶ್ರೀನಿವಾಸ್, ಕೈಗಾರಿಕೆ ಇಲಾಖೆಯ ರವೀಂದ್ರ, ಆರೋಗ್ಯ ಇಲಾಖೆಯ ಡಾ.ಲಲಿತಾ ಸಭೆಯಲ್ಲಿ ಭಾಗವಹಿಸಿದ್ದರು.