ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ವಿಫಲ: ಗೋಪಾಲಗೌಡ
ಮಾಲೂರು: ಇಲ್ಲಿನ ಪುರಸಭೆಯು ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಗಳಿಂದ ಪಟ್ಟಣದ ಬಹುತೇಕ ಕಡೆಗಳಲ್ಲಿ ಕೊಳಚೆ ನೀರುಗಳು ರಸ್ತೆಗೆ ಹರಿದು ಬರುತ್ತಿವೆ. ಇದರಿಂದ ರಸ್ತೆಗಳು ತಿಪ್ಪೆಗಳಾಗಿ ಇನ್ನಿಲ್ಲದ ರೋಗಗಳ ಆಹ್ವಾನ ಸ್ಥಾನವಾಗುತ್ತಿವೆ ಎಂದು ಜನ ಜಾಗೃತಿ ವೇದಿಕೆ ಸಂಚಾಲಕ ತ್ಯಾವನಹಳ್ಳಿ ಡಾ. ಎಂ. ಗೋಪಾಲಗೌಡ ಆಪಾದಿಸಿದ್ದಾರೆ.
ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಬೆಂಗಳೂರಿಗೆ ಸಮೀಪದ ಮಾಲೂರು ಪಟ್ಟಣವು ಅತಿವೇಗದಲ್ಲಿ ಬೆಳೆಯುತ್ತಿದ್ದು, ಅಷ್ಟೇ ವೇಗದಲ್ಲಿ ನೂತನ ಬಡಾವಣೆಗಳಿಗೆ ಇಲ್ಲಿನ ಪುರಸಭೆ ಅನುಮತಿ ನೀಡುತ್ತಿದೆ. ಆದರೆ ಪುರಸಭೆಯು ಉತ್ತಮ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ವಿಫಲವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಅಪೂರ್ಣವಾಗಿ ನಿಂತಿರುವುದೇ ಪುರಸಭೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದಿದ್ದಾರೆ.
ಈ ಬಗ್ಗೆ ಪುರಸಭೆಗೆ ನೀಡಿರುವ ಹಲವು ಮನವಿಗಳು ಪ್ರಯೋಜನವಿಲ್ಲದಂತೆ ಆಗಿದೆ. ಶಾಸಕ ಮಂಜುನಾಥ್ ಗೌಡರು ಗಮನ ಹರಿಸಿ ಜಿಡ್ಡು ಹಿಡಿದಿರುವ ಇಲ್ಲಿನ ಪುರಸಭೆಗೆ ಮಾರ್ಗದರ್ಶನ ನೀಡುವ ಜತೆಯಲ್ಲಿ ಸರ್ಕಾರದಿಂದ ಅನುದಾನ ತಂದು ಪಟ್ಟಣವನ್ನು ಸರ್ವತೋಮುಖ ಅಭಿವೃದ್ಧಿ ಮಾಡಬೇಕೆಂದು ಮನವಿ ಮಾಡಿದ್ದಾರೆ.