ನಾಡ ಕಚೇರಿಯಲ್ಲಿ ಪಿಂಚಣಿ ಸೌಲಭ್ಯ: ಆಯಿಷಾ
ಮುಳಬಾಗಲು: ಫಲಾನುಭವಿಗಳಿಗೆ ನಾಡ ಕಚೇರಿಯಲ್ಲಿಯೇ ಪಿಂಚಣಿ ಸೌಲಭ್ಯ ಒದಗಿಸುವುದರ ಮೂಲಕ ಫಲಾನುಭವಿಗಳು ಕಚೇರಿಗಳಿಗೆ ಅಲಿಯುವುದು ತಪ್ಪಲು ಸರ್ಕಾರ ಇಂತಹ ನಿರ್ಣಯಕ್ಕೆ ಬಂದಿದೆ ಎಂದು ಕೋಲಾರ ಉಪ ವಿಭಾಗಾಧಿಕಾರಿ ಆಯಿಷಾ ಪರ್ವೀನ್ ನುಡಿದರು. ತಾಲೂಕಿನ ಬೈರಕೂರು ಗ್ರಾಮದ ನಾಡ ಕಚೇರಿಯಲ್ಲಿ ಸೋಮವಾರ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಕೇಂದ್ರ ಸ್ಧಾನದಲ್ಲಿದ್ದು, ಕಾರ್ಯ ನಿರ್ವಹಿಸಬೇಕು. ಅರ್ಹ ಫಲಾನುಭವಿಗಳು ನಾಡ ಕಚೇರಿಯಲ್ಲಿ ನಿಗದಿತ ಫಾರಂ ಪಡೆದು ಸ್ಧಳದಲ್ಲಿಯೇ ಸಾಮಾಜಿಕ ಭದ್ರತೆ ಆದೇಶ ಪತ್ರಗಳನ್ನು ಪಡೆಯಬಹುದಾಗಿದೆ ಎಂದರು.
ಸಂಧ್ಯಾ ಸುರಕ್ಷಾ- 88, ಅಂಗವಿಕಲರ 26 ಮತ್ತು ವಿಧವಾ ವೇತನದ 46 ಆದೇಶ ಪತ್ರಗಳನ್ನು ವಿತರಿಸಿದರು. ಸ್ಧಳದಲ್ಲಿಯೇ ಒಂದು ಅಂಗವಿಕಲರ ಮತ್ತು ಎರಡು ಸಂಧ್ಯಾ ಸುರಕ್ಷಾ ಯೋಜನೆಯ ಆದೇಶ ಪತ್ರಗಳನ್ನು ವಿತರಿಸಲಾಯಿತು. ತಹಸೀಲ್ದಾರ್ ಡಿ.ವಿ. ರಾಮಮೂರ್ತಿ, ಬೈರಕೂರು ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಲಕ್ಷ್ಮಿನಾರಾಯಣಾಚಾರಿ, ಕಂದಾಯ ನಿರೀಕ್ಷಕ ವೆಂಕಟೇಶ್, ಕೃಷ್ಣಪ್ಪ. ಎನ್.ವಿ. ನಾಗರಾಜರಾವ್, ನರೇಶ್ ಇದ್ದರು.