ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಿ; ಪ್ರತಿಭಟನೆ

Vishwanath S
Updated On : 21 Aug 2013, 12:58 pm

ಕ.ಪ್ರ.ವಾರ್ತೆ , ಕೋಲಾರ , ಆ.20
ಜಿಲ್ಲೆಯು ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿದೆ. ಈ ವರ್ಷವೂ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಹಾಗೂ ಕುಡಿಯುವ ನೀರಿಗೂ ಸಮಸ್ಯೆ ಆಗಿರುವ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ನೀರಾವರಿ ಮೂಲಗಳಿಲ್ಲದ ಈ ಜಿಲ್ಲೆಯಲ್ಲಿ ಬಹುತೇಕ ರೈತರು ಮಳೆಯನ್ನೇ ಅವಲಂಬಿಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಜುಲೈ ತಿಂಗಳ ಅಂತ್ಯಕ್ಕೆ ಶೇ.80ರಷ್ಟು ಬಿತ್ತನೆ ಆಗಬೇಕಾಗಿತ್ತು. ಆದರೆ ಈ ವರ್ಷ ಶೇ.30ರಷ್ಟು ಸಹ ಬಿತ್ತನೆ ಆಗಿಲ್ಲ. ಮಳೆ ಇಲ್ಲದೇ ಬಿತ್ತನೆ ಆಗಿರುವ ಬೆಳೆಗಳು ಸಹ ಒಣಗುತ್ತಿರುವುದರಿಂದ ಸರ್ಕಾರ ಜಿಲ್ಲೆಯ ನೆರವಿಗೆ ಬರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ: ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿರುವ ಜನ ಜಾನುವಾರುಗಳ ಮೇವಿನ ಮತ್ತು ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಎದುರಿಸುತ್ತಿದ್ದಾರೆ. ಇಡೀ ರಾಜ್ಯದ ಜಲಾಶಯಗಳು ತುಂಬಿದ್ದರೂ ವಿದ್ಯುತ್‌ನ ಕೊರತೆ ಉಂಟಾಗಿದೆ. ದುಡಿಯುವ ರೈತ ಕೂಲಿಕಾರರಿಗೆ ಕೆಲಸವಿಲ್ಲದೇ ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಬತ್ತಿ ಹೋಗಿ ಕೃಷಿ ರಂಗ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಕೆಪಿಆರ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಬಯ್ಯಾರೆಡ್ಡಿ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಯಾವುದೇ ಅಡ್ಡಿ ಆತಂಕವಿಲ್ಲದೇ ರಾಜಾರೋಷವಾಗಿ ನಡೆಯುತ್ತಿದೆ. ಕೆರೆ ಕುಂಟೆಗಳನ್ನು ಬಗೆದು ಮರಳು ಪಿಲ್ಟರ್ ಮಾಡಲಾಗುತ್ತಿದೆ. ಇದರಿಂದ ಕೆರೆಗಳು ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತಿರುವುದಲ್ಲದೆ, ಮಳೆಯ ನೀರನ್ನು ಸಂಗ್ರಹಿಸುವ ಶಕ್ತಿ ಕಳೆದುಕೊಂಡು ಅಂತರ್ಜಲ ಮತ್ತಷ್ಟು ಪಾತಾಳಕ್ಕೆ ಕುಸಿಯುತ್ತಿರುವುದರಿಂದ ಅಕ್ರಮ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿದರು.
ಬೇಡಿಕೆಗಳು: ಕೋಲಾರ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು, ಮಳೆ ಇಲ್ಲದೇ ಬೆಳೆ ನಷ್ಟವಾಗಿರುವ ಕಡೆ ಪರಿಹಾರವಾಗಿ ಒಣ ಬೇಸಾಯದಲ್ಲಿ ಒಂದು ಎಕರೆಗೆ 10 ಸಾವಿರ, ತೋಟದ ಬೆಳೆಗೆ ಒಂದು ಎಕರೆಗೆ 25 ಸಾವಿರ ನೀಡಬೇಕು, ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಬೇಕು ಮತ್ತು ಜಿಲ್ಲೆಯ ಜೀವನಾಡಿ ಕೆರೆಗಳನ್ನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ವಿದ್ಯುತ್ ಸಮಸ್ಯೆ ನಿವಾರಣೆ, ಕಳೆದ ನಾಲ್ಕು ವರ್ಷಗಳಿಂದ ಒಣ ಮೇವಿನ ಸಂಗ್ರಹಣೆ ಇಲ್ಲದೇ ಜಾನುವಾರುಗಳಿಗೆ ಮೇವಿನ ಸಮಸ್ಯೆ ತೀವ್ರವಾಗಿರುವುದರಿಂದ ಹಾಲಿನ ಸೊಸೈಟಿ ಮತ್ತು ಗ್ರಾಪಂ.ಗಳ ಮೂಲಕ ಉಚಿತವಾಗಿ ಮೇವನ್ನು ಪೂರೈಸಬೇಕೆಂದು ಬೇಡಿಕೆ ಮಂಡಿಸಲಾಯಿತು.
ಸಾಲ ಮನ್ನಾ ಮಾಡಿ: ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬೇಕು ಮತ್ತು ಕೆಲಸಕ್ಕಾಗಿ ಅರ್ಜಿ ಹಾಕಿದ ಕೂಡಲೇ ಕೆಲಸ ಕೊಡಬೇಕು. ರಾಜ್ಯ ಸರ್ಕಾರ ಈ ವರ್ಷದಲ್ಲಿ ಮೂರು ಲಕ್ಷ ಮನೆ ಕೊಡಲು ತೀರ್ಮಾನಿಸಿದೆ. ಫಲಾನುಭವಿಗಳಿಗೆ ಮನೆ ಕಟ್ಟಲು ನಿವೇಶನಗಳು ಇಲ್ಲ. ಹಾಗಾಗಿ ಮನೆಗಾಗಿ ನಿವೇಶನಗಳನ್ನು ವಿತರಿಸಬೇಕು. ಮನೆಗಳ ನಿವೇಶನಕ್ಕಾಗಿ ಭೂಮಿ ಖರೀದಿ ಮಾಡುವ ಕೆಲಸ ಸರ್ಕಾರವೇ ಮಾಡಬೇಕು.
ಹಿಂದೆ ಬಗರ್‌ಹುಕ್ಕುಂ ಸಾಗುವಳಿ ಸಕ್ರಮಕ್ಕಾಗಿ ಸಾವಿರಾರು ರೈತರು ಅರ್ಜಿ ಸಲ್ಲಿಸಿದ್ದು, ಇದರಲ್ಲಿ ವಜಾ ಆಗಿರುವ ಎಲ್ಲಾ ಅರ್ಜಿಗಳನ್ನು ಪುನರ್ ಪರಿಶೀಲನೆ ಮಾಡಬೇಕು ಮತ್ತು ಹೊಸಬರಿಗೆ ಅರ್ಜಿ ಹಾಕಿಕೊಳ್ಳಲು ಸರ್ಕಾರ ಅವಕಾಶ ಕೊಡಬೇಕು. ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ದೀರ್ಘಾವಧಿ ಸಾಲಗಳನ್ನು ಬರಗಾಲದ ಸಂದರ್ಭದಲ್ಲಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಲಾಯಿತು.
ಉದ್ಯೋಗ ನೀಡಿ: ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಮೇರೆಗೆ ಉದ್ಯೋಗಾವಕಾಶ ನೀಡಬೇಕು. ಶಾಶ್ವತ ಬರಗಾಲ ಎದುರಿಸುತ್ತಿರುವ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕೆಂದು ಜಿಲ್ಲಾಧಿಕಾರಿಗೆ ನೀಡಿರುವ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಬಯ್ಯಾರೆಡ್ಡಿ, ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ, ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ಉಪಾಧ್ಯಕ್ಷ ಟಿ. ಕೃಷ್ಣೇಗೌಡ, ಮುಖಂಡರಾದ ಪಿ.ಆರ್. ನವೀನ್‌ಕುಮಾರ್, ಟಿ. ಕೃಷ್ಣೇಗೌಡ, ಗಂಗಮ್ಮ, ಕುರ್ಕಿ ದೇವರಾಜ್, ಎಸ್. ರಮೇಶ್, ಮುಖಂಡರಾದ ಪಿ. ಶ್ರೀನಿವಾಸ್, ವಿ. ನಾರಾಯಣರೆಡ್ಡಿ, ಗಂಗಮ್ಮ, ಕುರ್ಕಿ ದೇವರಾಜ್, ಎಸ್. ರಮೇಶ್, ಆನಂದ್, ವೀರಪ್ಪ ರೆಡ್ಡಿ, ಪಿ.ಎನ್. ನವೀನ್‌ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement