ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶೋಷಿತರ ಪರ ಸಿಎಂ ಸಿದ್ದರಾಮಯ್ಯ ನಿರ್ಧಾರ

Vishwanath S
Updated On : 21 Aug 2013, 12:58 pm

ಕನ್ನಡಪ್ರಭ ವಾರ್ತೆ , ಕೋಲಾರ , ಆ.20
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ನಂತರ ಶೋಷಿತ ಸಮುದಾಯದ ಪರ ಇತಿಹಾಸ ಪುಟಗಳಲ್ಲಿ ದಾಖಲು ಮಾಡಬಹುದಾದಂತಹ ಉತ್ತಮ ನಿರ್ಧಾರಗಳನ್ನು ಕೈಗೊಂಡಿದ್ದಾರೆಂದು ಶಾಸಕ ಆರ್. ವರ್ತೂರ್ ಪ್ರಕಾಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ದಿವಂಗತ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 98ನೇ ಹುಟ್ಟುಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಸಮಾಧಾನ: ಶೋಷಿತರ ಪರವಾಗಿ ತೆಗೆದುಕೊಂಡಿರುವ ಸಾಲ ಮನ್ನಾ ಯೋಜನೆ ಸಿದ್ದರಾಮಯ್ಯನವರ 100 ದಿನಗಳ ಆಡಳಿತದ ದಿನಗಳಲ್ಲಿ ನೀಡಿರುವ ಉತ್ತಮ ಕೊಡುಗೆ ಆಗಿದೆ ಎಂದು ಅಭಿಪ್ರಾಯಪಟ್ಟರು.
ಸಿದ್ದರಾಯಯ್ಯನವರು ದೇವರಾಜ ಅರಸು ಮಾದರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅರಸು ಅವರ ಸಾಮಾಜಿಕ ನ್ಯಾಯದ ಮೂಲಕ ಸ್ಫೂರ್ತಿ, ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಬಣ್ಣಿಸಿದರು.
ಈ ವರ್ಷ ಶೈಕ್ಷಣಿಕ ರಂಗದಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸುತ್ತಿದ್ದು, ಶೀಘ್ರವೇ ಈ ಯೋಜನೆಗಳು ಚಾಲ್ತಿಗೆ ಬರಲಿದೆ ಎಂದ ಶಾಸಕರು, ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ಜಿಲ್ಲಾ ಆಡಳಿತ ದೊಡ್ಡ ಪ್ರಮಾಣದಲ್ಲಿ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಜಾತಿ ಬಲ ಬೇಕು: ನಗರದಲ್ಲಿ ನಿರ್ಮಾಣವಾಗುತ್ತಿರುವ ಅರಸು ಭವನ ಬೇಗನೆ ಮುಗಿಯಬೇಕು, ಅರಸು ಭವನದಲ್ಲೇ ಕಾರ್ಯಕ್ರಮಗಳು ನಡೆಯಬೇಕೆಂದು ಕಳೆದ ವರ್ಷವೇ ಹೇಳಿದ್ದೆ. ಶಾಸಕರ ನಿಧಿಯಿಂದ ಅನುದಾನ ಪಡೆದು ನೆನೆಗುದಿಗೆ ಬಿದ್ದಿರುವ ಭವನ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಾತಿ ಬಲ ಇಲ್ಲದಿದ್ದಾಗ ಕಾರ್ಯಕ್ರಮಗಳು ಕುಂಠಿತವಾಗುತ್ತದೆ. ಕನಕ ಜಯಂತಿ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗೆ ಸಾವಿರಾರು ಜನ ಸೇರುತ್ತಾರೆ. ಅರಸು ಅವರು ಯಾವುದೇ ಒಂದು ವರ್ಗಕ್ಕೆ ಸೇರಿಲ್ಲವಾದರೂ ಹಿಂದುಳಿದ ವರ್ಗಗಳ ನಾಯಕರು. ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಋಣ ತೀರಿಸಬೇಕು ಎಂದರು.
ಆಚರಣೆ ಅವ್ಯವಸ್ಥಿತ: ದೇವರಾಜ ಅರಸು ಕುರಿತು ಶ್ರೀನಿವಾಸಪುರದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೆಂಕಟರೆಡ್ಡಿ ಉಪನ್ಯಾಸದಲ್ಲಿ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಯ ನೆನಪು ಮಾಡಿಕೊಳ್ಳುವುದು ಇಂದಿನ ಅಗತ್ಯತೆಯಿದೆ. ಆದರೆ ವ್ಯವಸ್ಥೆಯಲ್ಲಿನ ಲೋಪದಿಂದ ಜನ್ಮ ದಿನಾಚರಣೆಯು ಅವ್ಯವಸ್ಥಿತವಾಗಿ ನಡೆಯುತ್ತಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಧ್ವನಿ ಕಳೆದುಕೊಂಡ ಶೋಷಿತರಿಗೆ ಧ್ವನಿ ತಂದುಕೊಟ್ಟ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ  ನಿಜವಾದ ಅಸ್ತಿತ್ವ ತಿಳಿದ ವ್ಯಕ್ತಿ ಅರಸು. ಅವರ ವ್ಯಕ್ತಿತ್ವ ಅಪರೂಪವಾದುದು. ಇಂದಿನ ನಾಯಕರಲ್ಲಿ ವಿರಳ. ಜಿಡ್ಡುಗಟ್ಟಿದ ವ್ಯವಸ್ಥೆಗೆ ಹೊಸ ಭೂಮಿಕೆ ತಂದವರು ಅರಸು ಅವರು ಎಂದು ಬಣ್ಣಿಸಿದರು.
ಅಪರೂಪದ ನಾಯಕ: ಜಿಪಂ ಹಂಗಾಮಿ ಅಧ್ಯಕ್ಷ ನಾಗರಾಜ್ ಮಾತನಾಡಿ, ದಿ. ಡಿ. ದೇವರಾಜ ಅರಸು ಅವರು ಅಪರೂಪದ ನಾಯಕ. ಅವರ ಆದರ್ಶಗಳನ್ನು ಪಾಲಿಸಿದಾಗ ಸಮಾಜ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಹೇಳಿದರು.
ಜಿಪಂ ಸದಸ್ಯರಾದ ಮಂಗಮ್ಮ ಮುನಿಸ್ವಾಮಿ, ಮಂಜುಳಾ ವೆಂಕಟೇಶ್, ಅ.ಮು. ಲಕ್ಷ್ಮೀನಾರಾಯಣ್, ನಾರಾಯಣರೆಡ್‌ಡಿ, ತಾ.ಪಂ. ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಸರಸ್ವತಿ, ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ, ಜಿಪಂ ಸಿಇಒ ಜುಲ್ಫೀಖಾರ್ ಉಲ್ಲಾ, ಉಪ ವಿಭಾಗಾಧಿಕಾರಿ ಆಯಿಷಾ ಪರ್ವೀನ್, ವಿವಿಧ ಸಮುದಾಯದ ಮುಖಂಡರಾದ ಗೋಕುಲ್ ನಾರಾಯಣಸ್ವಾಮಿ, ಬೆಸ್ತರ ಮುನಿವೆಂಕಟಪ್ಪ, ಉದಯಕುಮಾರ್, ಪಲ್ಗುಣ, ಎಸ್. ಮಂಜುನಾಥ್, ಕೆ.ವಿ. ಶ್ರೀನಿವಾಸ್, ರಾಜೇಶ್‌ಸಿಂಗ್, ವಿಜಯ್, ಶಂಕರ ಕೊಂಡೆ, ರಾಜಾರಾವ್, ವಿ. ಮಂಜುನಾಥ್, ನೀಲಕಂಠಪ್ಪ ಇದ್ದರು.
ಬಿಸಿಎಂ ಹಾಸ್ಟೆಲ್‌ನಲ್ಲಿದ್ದು ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರನ್ನು ಪುರಸ್ಕರಿಸಲಾಯಿತು. ಬಿಸಿಎಂ ಅಧಿಕಾರಿ ಎನ್. ರಂಗಯ್ಯ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement