ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಣ್ಣ ಪ್ರಯತ್ನಗಳಿಂದಲೇ ಬದಲಾವಣೆ ಸಾಧ್ಯ

Vishwanath S
Updated On : 21 Aug 2013, 12:59 pm

ಕ.ಪ್ರ.ವಾರ್ತೆ , ಕೋಲಾರ , ಆ.20
ಜಗತ್ತಿನ ಅತ್ಯಂತ ಚಿಕ್ಕ ಪಕ್ಷಿಯಾದ ಹಮ್ಮಿಂಗ್ ಬರ್ಡ್ ಗುಣಗಳನ್ನು ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಸುಖ-ಶಾಂತಿ, ನೆಮ್ಮದಿ ಕಾಣಲು ಸಾಧ್ಯವೆಂದು ನಿರ್ಗಮಿತ ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಜಿಲ್ಲಾ ಪತ್ರಕರ್ತರ ಸಂಘ, ವಿವೇಕಾನಂದ ಯುವ ವಿದ್ಯಾರ್ಥಿ ವೇದಿಕೆಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯರಲ್ಲಿ ಅನೇಕರು ನಾವೇ ಶ್ರೇಷ್ಠವೆಂದು ಭಾವಿಸಿರುತ್ತಾರೆ. ಎಲ್ಲವೂ ನನ್ನಿಂದಲೇ ಎಂಬ ಭಾವನೆ ಹೊಂದಿರುತ್ತಾರೆ. ಆದರೆ, ಸಕಲ ಜೀವರಾಶಿಗಳಲ್ಲಿ ನಮಗಿಂತ ಶ್ರೇಷ್ಠವಾದವರು ಇರುತ್ತಾರೆಂಬುದಕ್ಕೆ ಹಮ್ಮಿಂಗ್ ಬರ್ಡ್ ಸಾಕ್ಷಿ ಎಂದರು.
ಹಮ್ಮಿಂಗ್ ಬರ್ಡ್ ಕಥೆ: ನಾನು ಕೋಲಾರ್ಙಕ್ಕೆ ಜಿಲ್ಲಾಧಿಕಾರಿಯಾಗಿ ಬಂದ ನಂತರ ಜನತೆಯ ಜೀವನ ಅರಿತು ಎಲ್ಲರ ಸಹಕಾರದಿಂದ ಕೈಲಾದಷ್ಟು ಮಟ್ಟಿಗೆ ಸಮಸ್ಯೆಗಳನ್ನು ನಿವಾರಣೆ ಮಾಡಲು ಯತ್ನಿಸಿದ್ದೇನೆ. ಕಲ್ಯಾಣಿಗಳ ಪುನಶ್ಚೇತನಕ್ಕೆ ಕಾರ್ಯಕ್ರಮ ರೂಪಿಸಿದಾಗ ಅನೇಕರು ಇದು ಸಾಧ್ಯವೇ, ಯೋಜನೆ ಫಲಿಸಿತೇ ಎಂದು ಅನುಮಾನ ವ್ಯಕ್ತಪಡಿಸಿದ್ದರು.
   ಆದರೆ ನಾನು ಹಮ್ಮಿಂಗ್ ಬರ್ಡ್‌ನ ರೀತಿಯಲ್ಲಿ ಕಲ್ಯಾಣಿಗಳ ಕಲ್ಯಾಣಕ್ಕಾಗಿ ಸಣ್ಣ ಪ್ರಯತ್ನ ಮಾಡಿದ್ದು, ನೂತನ ಜಿಲ್ಲಾದಿಕಾರಿ ಡಿ.ಕೆ. ರವಿ ಅವರು ಕಲ್ಯಾಣಿಗಳ ಅಭಿವೃದ್ಧಿ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.
ಹಮ್ಮಿಂಗ್ ಬರ್ಡ್ ಆಕಾಶದಲ್ಲಿ ಸುತ್ತಾಡುವಾಗ ಎಲ್ಲೋ ಒಂದು ಕಡೆ ಬೆಂಕಿ ಕಾಣಿಸುತ್ತದೆ, ಮನುಷ್ಯರು ಮನಸ್ಸು ಮಾಡಿದಲ್ಲಿ ಬೆಂಕಿಯನ್ನು ನಂದಿಸಬಹುದಾಗಿತ್ತು. ಆದರೆ ಅಲ್ಲಿದ್ದ ಜನರು ತಮಾಷೆ ನೋಡುತ್ತಿದ್ದಾಗ ಹಮ್ಮಿಂಗ್ ಬರ್ಡ್ ಎಲ್ಲಿಂದಲೂ ತನ್ನ ಬಾಯಲ್ಲಿ ನೀರು ತುಂಬಿಕೊಂಡು ಬಂದು ಬೆಂಕಿಯನ್ನು ಆರಿಸಲು ಯತ್ನಿಸುತ್ತದೆ. ಚಿಕ್ಕ ಪಕ್ಷಿಗೆ ಬೆಂಕಿ ಆರಿಸಬೇಕೆಂಬ ಪ್ರಜ್ಞೆ ಇರುವಾಗ ಮನುಷ್ಯರಾದ ನಮಗೇಕೆ ಇರಬಾರದು ಎಂದು ಹಮ್ಮಿಂಗ್ ಬರ್ಡ್‌ನ ಕತೆಯನ್ನು ಹೇಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಭಿಕರ ಮನ ಕರಗುವಂತೆ ಮಾಡಿದರು. ಅಲ್ಲದೇ ಸಣ್ಣ ಪ್ರಯತ್ನಗಳಿಂದ ಬದಲಾವಣೆ ಸಾಧ್ಯವೆಂದು ಅರ್ಥೈಸಿದರು. ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಂಡಾಗ ಮಾತ್ರ ಅಭಿವೃದ್ಧಿ ಕೆಲಸವನ್ನು ಮಾಡಲು ಸಾಧ್ಯವೆಂದರು.
ಸಹಕಾರ ಅಗತ್ಯ: ನೂತನ ಜಿಲ್ಲಾಧಿಕಾರಿ ಡಿ.ಕೆ. ರವಿ ಮಾತನಾಡಿ, ಮನಷ್ಯತ್ವಕ್ಕೆ ಧಕ್ಕೆ ಬರದಂತೆ ಯಾವುದೇ ಕೆಲಸವನ್ನಾಗಲೀ ಪ್ರಾಮಾಣಿಕತೆಯಿಂದ ಮಾಡಿದಾಗ ಮಾತ್ರ ಯಶಸ್ಸು ಸಿಗಲಿದೆ. ಯಾವುದೇ ಒಬ್ಬ ವ್ಯಕ್ತಿಯಿಂದ ಸಮಾಜವನ್ನು ಕಟ್ಟಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ ಎಂದ ಅವರು, ಇದಕ್ಕೆ ಎಲ್ಲಾ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
  ನಿರ್ಗಮಿತ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್. ಭಗವಾನ್ ದಾಸ್ ಮಾತನಾಡಿ, ಕಾನೂನುತ್ಮಾಕ ವಿಷಯಗಳು ಬಂದಾಗ ತಾವು ಪತ್ರಕರ್ತರ ಜತೆ ಚರ್ಚೆ ಮಾಡಿ ಹಲವಾರು ಸಮಸ್ಯೆಗಳನ್ನು ಜಿಲ್ಲೆಯಲ್ಲಿ ಬಗೆಹರಿಸಿರುವುದಾಗಿ ಹೇಳಿದರು.
ಪತ್ರಕರ್ತ ಸೇವೆ ಅನನ್ಯ: ಜಿಪಂ ಕಾರ್ಯನಿರ್ವಹಣಾಧಿಕಾರಿ ಜುಲ್ಪಿಖಾರ್ ಉಲ್ಲಾ ಮಾತನಾಡಿ, ತಾವು ಎಷ್ಟೇ ಹೇಳಿದರೂ ಅಧಿಕಾರಿಗಳು ಮಾಡದೆ ಇರುವ ಕೆಲಸವನ್ನು ಪತ್ರಕರ್ತರ ಬರವಣಿಗೆಯ ಮೂಲಕ ಮಾಡಿಸಲು ತಮಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ನಿರ್ಗಮಿತ ಜಿಲ್ಲಾಧಿಕಾರಿಗಳ ಬಗ್ಗೆ ಮಾತನಾಡಿದರು. ಹಿರಿಯ ಪತ್ರಕರ್ತ ಕೆ. ಪ್ರಹ್ಲಾದರಾವ್, ನರಸಿಂಹಮೂರ್ತಿ, ಸಿ.ಜಿ. ಮುರಳಿ ಸಿ.ಎಲ್. ಶ್ರೀನಿವಾಸಲು, ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ.ನಾಗರಾಜ್, ಅಬ್ಬಣ್ಣಿ ಶಂಕರ್ ಮಾತನಾಡಿದರು.
ಜಿಲ್ಲಾ ಎಸ್ಪಿ ಡಾ. ರಾಮ್‌ನಿವಾಸ್ ಪೇಟ್ ಇದ್ದರು. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ನಿರೂಪಿಸಿದರು. ರಾಜ್ಯ ಕಾರ್ಯಕಾರಿ ಸದಸ್ಯ ವಾಸುದೇವ ಹೊಳ್ಳ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement