ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗೊಂದಲದ ಗೂಡಾದ ಕಾರ್ಯಾಗಾರ

Vishwanath S
Updated On : 22 Aug 2013, 12:40 pm

ಚಿಕ್ಕಬಳ್ಳಾಪುರ: ನಗರವನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ ಹಿನ್ನಡೆ ಕಾಣುತ್ತಿರುವ ಚಿಕ್ಕಬಳ್ಳಾಪುರ ನಗರಸಭೆ, ವಿವಾದ, ಸದಾ ಗಲಾಟೆ ಗದ್ದಲಗಳಿಂದಲೇ ಕೂಡಿರುತ್ತದೆ.
ಚರ್ಚೆ ನಡೆಯಬೇಕಾದ ಸಮಯದಲ್ಲಿ ಗಲಾಟೆ, ರಂಪಾಟ ನಡೆದು ಕಾಲಹರಣ ಮಾಡಲಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಜಿಲ್ಲಾ ಕೇಂದ್ರವಾಗಿರುವ ಚಿಕ್ಕಬಳ್ಳಾಪುರ ನಗರದಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿ, ನಿರ್ವಹಣೆ ಮತ್ತು ಉಪಯೋಗದ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಮಂಗಳವಾರ ಆಯೋಜಿಸಿದ್ದ ಮಹತ್ವದ ಕಾರ್ಯಾಗಾರ ಅಧಿಕಾರಿಗಳು ಮತ್ತು ಸದಸ್ಯರ ನಡುವಿನ ಗಲಾಟೆಯಿಂದ ಆರಂಭದಲ್ಲಿಯೇ ಸ್ಥಗಿತಗೊಂಡಿತು.
ನಗರಸಭಾ ಕಚೇರಿಯಲ್ಲಿ ಮಂಗಳವಾರ ಒಳಚರಂಡಿ ಕಾಮಗಾರಿ ಕುರಿತು ಚರ್ಚಿಸುವ ಕುರಿತು ಕಾರ್ಯಾಗಾರ ಕೈಗೊಳ್ಳಲಾಗಿತ್ತು. ಶಾಸಕ ಡಾ.ಕೆ.ಸುಧಾಕರ್ ಮತ್ತು ಅಧಿಕಾರಿಗಳು ಆಗಮಿಸಿ ಕಾರ್ಯಕ್ರಮ ಪ್ರಾರಂಭಿಸಬೇಕೆನ್ನುವಷ್ಟರಲ್ಲಿ ಕೆಲ ಸದಸ್ಯರು, ಕಾರ್ಯಕ್ರಮದ ಬಗ್ಗೆ ಸರಿಯಾಗಿ ಮಾಹಿತಿ ನೀಡದಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಮರ್ಪಕ ಮಾಹಿತಿ ನೀಡಿಲ್ಲ: ನಗರಸಭಾ ಸದಸ್ಯ ಮಹಾಕಾಳಿ ಬಾಬು ಮಾತನಾಡಿ, ನಗರಸಭೆಯಲ್ಲಿ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನ ಖಾಲಿ ಇರುವುದರಿಂದ ಅವರು ನಿರ್ಲಕ್ಷ್ಯ ಧೋರಣೆ ತಳೆಯುತ್ತಿದ್ದಾರೆ. ಮಂಗಳವಾರ ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ನಮಗೆ ಸಮರ್ಪಕವಾದ ಮಾಹಿತಿಯನ್ನೇ ನೀಡಿಲ್ಲ.
 ಕೆಲವರು ಸ್ವಯಂ ವಿಚಾರ ತಿಳಿದುಕೊಂಡು ಇಲ್ಲಿಗೆ ಬಂದಿದ್ದಾರೆ. ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೇ ಕಾರ್ಯಕ್ರಮವನ್ನು ಏತಕ್ಕೆ ನಡೆಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಇತರೆ ಸದಸ್ಯರು ಧ್ವನಿಗೂಡಿಸಿ, ಪೌರಾಯುಕ್ತರು ಸೇರಿದಂತೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಪ್ರಸ್ತುತ ಕಾರ್ಯಕ್ರಮ ರದ್ದುಪಡಿಸಬೇಕು, ಸದಸ್ಯರನ್ನು ನಿರ್ಲಕ್ಷ್ಯದಿಂದ ಕಾಣುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕ ಕೆ.ಸುಧಾಕರ್ ಮಾತನಾಡಿ, ಸದಸ್ಯರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಇನ್ನು ಮುಂದೆ ಹೀಗೆ ವರ್ತಿಸದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.  ನಂತರ ಕಾರ್ಯಕ್ರಮವನ್ನು ಪ್ರಾರಂಭಿಸಲು ಮುಂದಾದಾಗ ಕೆಲ ಸದಸ್ಯರು ಅವಕಾಶ ನೀಡಲಿಲ್ಲ. ಈ ನಡುವೆ ಶಾಸಕರ ಬಣದ ಸದಸ್ಯರು ಮತ್ತು ಕೆಲ ಸದಸ್ಯರ ನಡುವೆ ಭಿನ್ನಾಭಿಪ್ರಾಯದ ಹೇಳಿಕೆಗಳು ಕೇಳಿ ಬಂದು, ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೊನೆಗೆ ಶಾಸಕ ಕೆ.ಸುಧಾಕರ್ ಕಾರ್ಯಕ್ರಮವನ್ನು ಮುಂದೂಡುವಂತೆ ಸೂಚನೆ ನೀಡಿ ಹೊರ ನಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement