ಜಿ.ಪಂ. ಹಂಗಾಮಿ ಅಧ್ಯಕ್ಷರಿಂದ ಅಭಿವೃದ್ಧಿ ಮಂತ್ರ
ಕೋಲಾರ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಹಂಗಾಮಿ ವ್ಯವಸ್ಥೆ ಮಾಡಿರುವುದರಿಂದ ಬಯಸದೆ ಬಂದಿರುವ ಅಲ್ಪ ಕಾಲಾವಧಿಯ ಅಧಿಕಾರವನ್ನು ಜಿಲ್ಲೆಯ ಜನರ ಸೇವೆಗೆ ಮೀಸಲಿಡುವುದಾಗಿ ಜಿ.ಪಂ. ಹಂಗಾಮಿ ಅಧ್ಯಕ್ಷ ಜಿ.ಕೆ. ನಾಗರಾಜ್ ತಿಳಿಸಿದರು.
ನಗರದ ಜಿ.ಪಂ. ಅಧ್ಯಕ್ಷರ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನೀಡಿರುವ ರಾಜಿನಾಮೆ ಅಂಗೀಕಾರವಾಗಿರುವುದರಿಂದ ರಾಜ್ಯ ಸರ್ಕಾರ ಪಂಚಾಯತ್ ರಾಜ್ ಕಲಂ ಅಡಿ ಹಾಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷನಾಗಿರುವ ನನ್ನನ್ನು ಮಂದಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಯ್ಕೆ ಆಗುವವರೆಗೂ ಜಿ.ಪಂ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದು, ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಹೇಳಿದರು.
ಗ್ರಾಮೀಣ ಪ್ರದೇಶ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆ ನೀಡುತ್ತೇನೆ, ತಾವು ಕಳೆದ ಮೂರು ವರ್ಷದಲ್ಲಿ ಗೌನಿಪಲ್ಲಿ ಗ್ರಾ.ಪಂ. ಸದಸ್ಯರಾಗಿ, ನಂತರ ರಾಯಲ್ಪಾಡು ಕ್ಷೇತ್ರದಿಂದ ಜಿ.ಪಂ. ಸದಸ್ಯನ್ನಾಗಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಈಗ ಜಿ.ಪಂ. ಅಧ್ಯಕ್ಷರಾಗಿ ಅಧಿಕಾರ ಸಿಕ್ಕಿರುವುದು ಸಂತೋಷ ತಂದಿದ್ದು, ಅದೃಷ್ಟದಿಂದ ಸಿಕ್ಕಿರುವ ಅಧಿಕಾರವನ್ನು ಜನತೆಯ ಸೇವೆಗೆ ಮೂಡುಪಾಗಿಡುವುದಾಗಿ ತಿಳಿಸಿದರು.
ನೀರಿಗಾಗಿ 100 ಕೋಟಿ ಬೇಡಿಕೆ: ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ 2013-14ನೇ ಸಾಲಿನ ಗ್ರಾಮೀಣ ನೀರು ಸರಬರಾಜು ಯೋಜನೆ ಅಡಿಯಲ್ಲಿ 100 ಕೋಟಿ ರು.ಗಳ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದು, ಇದರಲ್ಲಿ ಈಗಾಗಲೇ 19 ಕೋಟಿ ರು. ಬಿಡುಗಡೆ ಮಾಡಲಾಗಿದ್ದು ಈ ಪೈಕಿ 5 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದರು.
ನಾಳೆಯಿಂದಲೇ ಜಿಲ್ಲೆಯ ಪ್ರವಾಸ ಕೈಗೊಂಡು ಗ್ರಾಮೀಣ ಜನತೆಯ ಸಮಸ್ಯೆಗೆ ಸ್ಪಂದಿಸುತ್ತೇನೆ, ವಿದ್ಯಾರ್ಥಿ ನಿಲಯಗಳ ಸುಧಾರಣೆ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಕಡೆ ಗಮನ ಹರಿಸುವುದಾಗಿ ತಿಳಿಸಿದರು.
ತಾವು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆವಾಗದೆ ಇದಿದ್ದರೆ ಇಂದು ಜಿ.ಪಂ. ಅಧ್ಯಕ್ಷರಾಗಿ ಆಯ್ಕೆಯಾಗುವ ಅವಕಾಶ ನನಗೆ ಲಭಿಸುತ್ತಿರಲಿಲ್ಲ ಎಂದು ಹೇಳಿದರು.
70 ಹಳ್ಳಿಗಳಲ್ಲಿ ಶುದ್ಧ ನೀರು ಘಟಕ: ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಇಇ ದೇವರಾಜ್ ಮಾತನಾಡಿ, ಜಿಲ್ಲೆಯಲ್ಲಿ ಫ್ಲೋರೈಟ್ ನೀರಿನ ಸಮಸ್ಯೆ ಇರುವುದರಿಂದ ಸರ್ಕಾರ ಜಿಲ್ಲೆಗೆ 70 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಜೂರು ಮಾಡಿದೆ ಎಂದರು.
ಶುದ್ಧ ನೀರು ಘಟಕಗಳನ್ನು ಪಡೆಯುವಲ್ಲಿ ಬಂಗಾರಪೇಟೆ ತಾಲೂಕು ಸಿಂಹ ಪಾಲು ಹೊಂದಿದೆ, ಇನ್ನುಳಿದಂತೆ ಕೋಲಾರ 11, ಮಾಲೂರು ಮತ್ತು ಶ್ರೀನಿವಾಸಪುರ ತಲಾ 8 , ಮುಳಬಾಗಿಲು ತಾಲೂಕಿಗೆ 15 ಘಟಕಗಳು ಮಂಜೂರಾಗಿದ್ದು, ಇದರಿಂದ 1.04,146 ಗ್ರಾಮೀಣ ಜನರಿಗೆ ದಿನಕ್ಕೆ 1.35 ಲಕ್ಷ ಲೀಟರ್ ಶುದ್ಧ ನೀರು ಕೊಡಬಹುದಾಗಿದ್ದು ಇದಕ್ಕೆ 531.50 ಲಕ್ಷ ರು.ಗಳು ಖರ್ಚು ಆಗಲಿದೆ ಎಂದರು.
70 ಹಳ್ಳಿಗಳಲ್ಲಿ ಸ್ಥಾಪಿಸಲಾಗುವ ಶುದ್ಧ ನೀರು ಘಟಕದಿಂದ ಒಂದು ಲೀಟರ್ ನೀರಿಗೆ 10 ಪೈಸೆ ವಸೂಲಿ ಮಾಡಲಾಗುವುದು, ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಕೆಲವು ಕಡೆ ಯಶಸ್ವಿಯಾಗಿ ಘಟಕಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಕೋಲಾರ ಜಿಲ್ಲೆಯ 116 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, 116 ಟ್ಯಾಂಕರ್ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದ ಅವರು, ಕೋಲಾರ ತಾಲೂಕಿನಲ್ಲಿ 22, ಮಾಲೂರು 48, ಬಂಗಾರಪೇಟೆ-26, ಮುಳಬಾಗಲು 15 ಮತ್ತು ಶ್ರೀನಿವಾಸಪುರ ತಾಲೂಕಿನ 25 ಗ್ರಾಮಗಳಿಗೆ 5 ಟ್ಯಾಂಕರ್ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.