ತಹಸೀಲ್ದಾರ್ ಕಚೇರಿಗೆ ರೈತರ ಮುತ್ತಿಗೆ
ಚಿಂತಾಮಣಿ: ಮಾರ್ವೆ ಮೀನು(ಆಫ್ರಿಕನ್ ಕ್ಯಾಟ್ ಫಿಶ್) ಸಾಕಾಣಿಕೆ ನಿಲ್ಲಿಸಲು ತಾಲೂಕು ದಂಡಾಧಿಕಾರಿಗಳು ನೋಟಿಸ್ ನೀಡಿರುವ ಬಗ್ಗೆ ಚಿನ್ನಸಂದ್ರ ಗ್ರಾಮದ ಸುತ್ತಮುತ್ತಲಿನ ರೈತರು ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ರಾತ್ರಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದರು.
ತಾಲೂಕಿನ ಚಿನ್ನಸಂದ್ರ ಗ್ರಾಮದ ಸುತ್ತಮುತ್ತಲಿನಲ್ಲಿ ಮಾರ್ವೆ ಮೀನು(ಆಫ್ರಿಕನ್ ಕ್ಯಾಟ್ ಫಿಶ್) ಸಾಕಾಣಿಕೆಯನ್ನು ಕೂಡಲೇ ನಿಲ್ಲಿಸಲು ಹಾಗೂ ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ಆಡಳಿತ ಎಲ್ಲಾ ಮಾರ್ವೆ ಮೀನು ಸಾಕಾಣಿಕೆದಾರರಿಗೆ ನೋಟಿಸ್ ಜಾರಿ ಮಾಡಿರುವುದರಿಂದ ಮಂಗಳವಾರ ರಾತ್ರಿ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ತಾಲೂಕು ದಂಡಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಕನಿಷ್ಠ 6 ತಿಂಗಳು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದರು.
ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಸುಲ್ತಾನ್ ಷರೀಫ್ ಮಾತನಾಡಿ, ಮೀನು ಸಾಕಾಣಿಕೆ ಕಸುಬನ್ನು ಮಾಡಿಕೊಂಡು ಜೀವನ ನಡೆಸುತ್ತಿರುವ ಬಡ ಕುಂಟುಂಬಗಳು ಕಾನೂನು ನೀತಿ, ನಿಯಮಗಳ ಬಗ್ಗೆ ತಿಳಿಯದೆ ಕೋಟ್ಯಂತರ ರುಪಾಯಿ ಬಂಡವಾಳ ಹಾಕಿರುವುದರಿಂದ ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡರೆ ಕುಟುಂಬಗಳು ಬೀದಿಪಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ತಪ್ಪಿಸಲು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್, ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದರು.
ಗ್ರಾಮಸ್ಥರಾದ ಕೃಷ್ಣಪ್ಪ, ಚಾಂದ್ಪಾಷಾ, ನಾರಾಯಣಪ್ಪ, ವೆಂಕಟೇಶ್, ಸಿದ್ದಿಕ್, ಉಸ್ಮಾನ್ ಖಾನ್, ನೂರುಲ್ಲಾ, ಸಿದ್ದಿಕ್ ಪಾಷಾ, ಅನ್ಸರ್, ರವಿ, ಮನ್ಸೂರ್, ನಾಗರಾಜ್, ನಾಗಪ್ಪ, ಶಿವ, ಅಮಾನುಲ್ಲಾ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.