ಶೀಘ್ರವೇ ಸರ್ಕಾರಿ ಕಾಲೇಜಿಗೆ ಬಯೋವುಟ್ರಿಕ್ ಯಂತ್ರ
ಕೋಲಾರ: ನಗರದ ಸರ್ಕಾರಿ ಬಾಲಕರ ಕಾಲೇಜಿಗೆ ಶೀಘ್ರವೇ ಬಯೋವುಟ್ರಿಕ್ ವ್ಯವಸ್ಥೆ ಜಾರಿಯಾಗಲಿದೆ. ಇದು ಕಳೆದ ತಿಂಗಳು ಬಾಲಕರ ಸರ್ಕಾರಿ ಕಾಲೇಜಿಗೆ ಲೋಕಾಯುಕ್ತ ನ್ಯಾಯಾಮೂರ್ತಿ ವೈ.ಭಾಸ್ಕರ್‌ರಾವ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಲ ಬೋಧಕ-ಬೋಧಕೇತರ ಸಿಬ್ಬಂದಿ ಹಾಜರಾತಿ ಪುಸಕ್ತದಲ್ಲಿ ಸಹಿ ಮಾಡದಿರುವ ಎಫೆಕ್ಟ್ ಎಂದು ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಆದರೆ, ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ, ಬಯೋವುಟ್ರಿಕ್ ಯೋಜನೆ ಕೇವಲ ನಮ್ಮ ಕಾಲೇಜಿಗೆ ಮಾತ್ರ ಜಾರಿ ಆಗುತ್ತಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಸೇರಿದ ಎಲ್ಲ ಕಾಲೇಜುಗಳಲ್ಲಿ ಸಿಬ್ಬಂದಿಯ ಹಾಜರಾತಿ ದೃಢೀಕರಿಸುವ ಉದ್ದೇಶದಿಂದ ಬಯೋವುಟ್ರಿಕ್ ಜಾರಿಗೆ ತರಲು ನಿರ್ಧರಿಸಿದ್ದು, ಒಳ್ಳೆಯ ಯೋಜನೆಯಾಗಿದೆ ಎನ್ನುತ್ತಾರೆ.
ಕಾಲೇಜಿನ ವಿದ್ಯಾರ್ಥಿಗಳು ಸಹ ಬೋಧಕ-ಬೋಧಕೇತರ ಸಿಬ್ಬಂದಿಯ ಹಾಜರಾತಿ ತಿಳಿಯಲು ಬಯೋವುಟ್ರಿಕ್ ವ್ಯವಸ್ಥೆ ಜಾರಿಗೆ ಬರುವುದನ್ನು ಸ್ವಾಗತಿಸಿದ್ದಾರೆ. ಇದೇ ರೀತಿ ವಿದ್ಯಾರ್ಥಿಗಳ ಹಾಜರಾತಿಗಾಗಿ ಸದರಿ ಯೋಜನೆ ಜಾರಿಗೆ ತರುವುದು ಸೂಕ್ತವೆನ್ನುತ್ತಿದ್ದಾರೆ.
ಕೋಲಾರ ಸರ್ಕಾರಿ ಬಾಲಕರ ಕಾಲೇಜು ಮಾತ್ರವಲ್ಲದೆ ಸರ್ಕಾರಿ ಮಹಿಳಾ ಕಾಲೇಜಿನಲ್ಲೂ ಈ ವ್ಯವಸ್ಥೆ ಜಾರಿಗೆ ಬರುವುದರಿಂದ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಇನ್ನು ಮುಂದೆ ತಮಗಿಷ್ಟ ಬಂದಂತೆ ಹಾಜರಾತಿ ಪುಸಕ್ತದಲ್ಲಿ ಸಹಿ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಪ್ರತಿ ದಿನ ಕಾಲೇಜು ವೇಳೆಯಲ್ಲಿ ಬೆಳಿಗ್ಗೆ ಮತ್ತು ಕಾಲೇಜು ಮುಗಿದ ಬಳಿಕ ಪ್ರತಿಯೊಬ್ಬ ಸಿಬ್ಬಂದಿ ಕಡ್ಡಾಯವಾಗಿ ಬೆರಳಚ್ಚು ಮೂಲಕ ಹಾಜರಾತಿ ದೃಢೀಕರಿಸದಿದ್ದರೆ ಅಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇರುವುದರಿಂದ ಸಿಬ್ಬಂದಿ ಇನ್ನು ಮುಂದೆ ಯಾವುದೇ ಸಬೂಬು ಹೇಳಲು ಬರುವುದಿಲ್ಲ.
ಸರ್ಕಾರಿ ಬಾಲಕರ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವಿವರಗಳನ್ನು ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆಗೆ ಕಳುಹಿಸಲಾಗಿದೆ. ಬಯೋವುಟ್ರಿಕ್ ಯಂತ್ರ ಖರೀದಿಗಾಗಿ 40 ಸಾವಿರ ಅನುದಾನ ಬಿಡುಗಡೆಯಾಗಿದೆ. ಇಲಾಖೆಯಿಂದ ಟೆಂಡರ್ ಪ್ರಕ್ರಿಯೆಗಾಗಿ ಅನುಮತಿ ಸಿಕ್ಕಿದ ನಂತರ ಯೋಜನೆ ಜಾರಿಯ ಪ್ರಕ್ರಿಯೆ ಆರಂಭವಾಗಲಿದೆ.
ಬಾಲಕರ ಕಾಲೇಜಿನಲ್ಲಿ ಪ್ರಸ್ತುತ 57 ಬೋಧಕ ಹಾಗೂ 21 ಬೋಧಕೇತರ ಸಿಬ್ಬಂದಿ, ಸರ್ಕಾರಿ ಮಹಿಳಾ ಕಾಲೇಜಿನಲ್ಲಿ 65 ಬೋಧಕ ಹಾಗೂ 21 ಮಂದಿ ಬೋಧಕೇತರರು ಹಾಗೂ ಅತಿಥಿ ಉಪನ್ಯಾಸಕರು ಇದ್ದು, ಇವರೆಲ್ಲ ಇನ್ನು ಮುಂದೆ ಬಯೋವುಟ್ರಿಕ್ ಮೂಲಕ ಹಾಜರಾತಿ ದೃಢೀಕರಿಸಬೇಕಾಗುತ್ತದೆ.
ರಾಜ್ಯದಲ್ಲಿ ಬೆಂಗಳೂರು ವಿವಿ, ಕರ್ನಾಟಕ ವಿವಿ, ಕುವೆಂಪು, ಮಂಗಳೂರು, ಗುಲ್ಬರ್ಗ ಹಾಗೂ ಮೈಸೂರು ವಿವಿಗೆ ಸೇರಿದ 481ಕ್ಕೂ ಹೆಚ್ಚು ಪದವಿ ಕಾಲೇಜುಗಳಿದ್ದು ಸರ್ಕಾರ ಕೇವಲ ಕೆಲವು ಕಾಲೇಜುಗಳಿಗೆ ಮಾತ್ರ ಈ ಯೋಜನೆ ಅಳವಡಿಸುತ್ತದೆಯೇ ಇಲ್ಲವೇ ಎಲ್ಲ ಕಾಲೇಜುಗಳಲ್ಲಿ ವ್ಯವಸ್ಥೆ ಜಾರಿ ಮಾಡಿ ಕಾಲೇಜುಗಳಲ್ಲಿ ಹಾಜರಾತಿ ಶಿಸ್ತು ಮೂಡಿಸುವುದೇ ಎಂಬುದು ಕುತೂಹಲ ಮೂಡಿಸಿದೆ.
ಕೋಲಾರ ಬಾಲಕರ ಕಾಲೇಜಿಗೆ ಲೋಕಾಯುಕ್ತರ ಭೇಟಿಯ ನಂತರ ಸಾಕಷ್ಟು ಸುಧಾರಣೆ ಕಾಣುತ್ತಿದೆ. 1800 ಮಂದಿ ವಿದ್ಯಾರ್ಥಿಗಳ ಪೈಕಿ ಬಹುತೇಕರು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಖಾಲಿ ಖಾಲಿಯಾಗಿ ಕಾಣುತ್ತಿದ್ದ ತರಗತಿಗಳಲ್ಲಿ ಪ್ರವಚನದ ಕಲರವ ಕೇಳುವಂತಾಗಿದೆ.
ಅತಿಥಿ ಉಪನ್ಯಾಸಕರಿಗೆ ತಾಪತ್ರಯ; ಕಾಯಂ ಬೋಧಕ-ಬೋಧಕೇತರರೇ ಬಯೋವುಟ್ರಿಕ್ ಪದ್ಧತಿ ಜಾರಿಗೆ ಬಂದರೆ ಹೇಗಪ್ಪ ಕಾಲೇಜಿನಲ್ಲಿ ದಿನವಿಡಿ ಕಾಲ ಕಳೆಯೋದು ಎಂದು ಯೋಚಿಸುವಂತಾಗಿರುವಾಗ ಸರ್ಕಾರ ನೀಡುವ 8ರಿಂದ 10 ಸಾವಿರ ಸಂಭಾವನೆ ಪಡೆಯುವ ಅತಿಥಿ ಉಪನ್ಯಾಸಕರಿಗೆ ಇದರಿಂದ ತೊಂದರೆ ಆಗಲಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಾಳ ಮುನಿಯಪ್ಪ 'ಕನ್ನಡಪ್ರಭ'ದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ವಾರದಲ್ಲಿ ಮೂರು ದಿನ ಕಡ್ಡಾಯವಾಗಿ 8 ಗಂಟೆಗಳ ಕಾಲಾವಧಿ ಬೋಧನೆ ಮಾಡಬೇಕಾಗಿದೆ. ತಿಂಗಳಿಗೆ ಕನಿಷ್ಠ 32 ಗಂಟೆ ಪಾಠ ಮಾಡಿದರೂ ಸರ್ಕಾರ ನೀಡುವ ಸಂಭಾವನೆ ಅತ್ಯಂತ ಕಡಿಮೆ. ನಮಗೆ ನಿಗದಿ ಮಾಡುವ ಬೋಧನಾ ಕಾಲಾವಧಿಯ ನಂತರ ಬೇರೆ ಕಡೆ ಕೆಲಸ ಮಾಡುವುದಕ್ಕೆ ಅವಕಾಶವಿಲ್ಲ. ಸರ್ಕಾರ ಬಯೋವುಟ್ರಿಕ್ ವ್ಯವಸ್ಥೆ ಜಾರಿ ಮಾಡುವುದರಿಂದ ಅತಿಥಿ ಉಪನ್ಯಾಸಕರಿಗೆ ಖಂಡಿತ ತೊಂದರೆ ಆಗುತ್ತದೆ ಎಂದು ತಿಳಿಸಿದ್ದಾರೆ.