ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಯುಕ್ತ ಮಹೇಂದ್ರ ಕುಮಾರ್ ಅಮಾನತಿಗೆ ಖಂಡನೆ

Vishwanath S
Updated On : 24 Aug 2013, 1:13 am

ಕ.ಪ್ರ.ವಾರ್ತೆ ,  ಕೋಲಾರ ,  ಆ.23
ನಗರಸಭೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಮಹೇಂದ್ರ ಕುಮಾರ್ ಅವರನ್ನು ಉದ್ದೇಶ ಪೂರ್ವಕವಾಗಿ ಅಮಾನತು ಮಾಡಿರುವುದಲ್ಲದೆ ಅಟ್ರಾಸಿಟಿ ಕೇಸ್ ಹಾಕಿಸಿರುವುದರ ಹಿಂದೆ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮ್ಮದ್ ಅವರ ಕೈವಾಡವಿದೆ ಎಂದು ನಗರಸಭೆಯ ಹಾಲಿ ಸದಸ್ಯ ಮುರಳಿಗೌಡ ಹಾಗೂ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್ ಆರೋಪಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಇವರಿಬ್ಬರು, ನಗರಸಭೆಯಲ್ಲಿನ ಅವ್ಯವಹಾರಗಳಿಗೆ ಕಡಿವಾಣ, ಟೆಂಡರ್ ಆಗದೆ ಉಳಿದಿದ್ದ ಕೋಟ್ಯಂತರ ರುಪಾಯಿಗಳ ಕೆಲಸಕ್ಕೆ ಟೆಂಡರ್ ಕರೆದು ಮಹೇಂದ್ರಕುಮಾರ್ ನಗರದಲ್ಲಿನ ಮೂಲ ಸಮಸ್ಯೆಗಳಾದ ನೀರು, ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದರು. ಇದನ್ನು ಸಹಿಸಲಾಗದೆ ಚೆಕ್ ನೀಡಿದ ಪ್ರಕರಣದಲ್ಲಿ ಸಿಕ್ಕಿಸಿ ಅಮಾನತು ಮಾಡಿಸಿರುವುದಲ್ಲದೆ ಅಟ್ರಾಸಿಟಿ ಕೇಸು ಹಾಕಿಸಿರುವುದು ಈ ನಾಯಕರ ಅಸಲಿ ಬಣ್ಣ ಬಯಲು ಮಾಡಿದೆ ಎಂದು ದೂರಿದ್ದಾರೆ.
ಖಂಡನಾರ್ಹ: ಮಹೇಂದ್ರ ಕುಮಾರ್ ನಗರದಲ್ಲಿನ ಅನೇಕ ಫುಟ್‌ಪಾತ್ ಅಂಗಡಿಗಳನ್ನು ಜನತೆಯ ಒತ್ತಾಯದ ಮೇರೆಗೆ ತೆರವು ಮಾಡಿಸಿದ್ದಾರೆ. ಜನತೆಯ ಬಗ್ಗೆ ಕಾಳಜಿಯಿಟ್ಟು ಕೆಲಸ ಮಾಡಿದ್ದಾರೆ. ಒಮ್ಮೆಯೂ ಕೋಲಾರ ನಗರಸಭೆ ಬಗ್ಗೆ ತಲೆಕೆಡಿಸಿಕೊಳ್ಳದ ಈ ಇಬ್ಬರು ನಗರದ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಕಿಂಚಿತ್ತೂ ಕಾಳಜಿಯಿಲ್ಲದಿದ್ದರೂ ದಕ್ಷ ಅಧಿಕಾರಿಯ ಅಮಾನತು ವಿಚಾರದಲ್ಲಿ ಕಾಳಜಿ ತೋರಿರುವುದು ಖಂಡನಾರ್ಹ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದುವರೆಗೂ ಜಿಲ್ಲೆಯಲ್ಲಿ ನಡೆದಿರುವ ಕೋಟ್ಯಂತರ ರುಪಾಯಿ ಹಗರಣಗಳ ಬಗ್ಗೆ ಈ ಹಿಂದೆ ಎಂದೂ ಪತ್ರ ಬರೆದು ಕ್ರಮ ಕೈಗೊಳ್ಳಿ ಎಂದು ಕೇಳದ ಕೇಂದ್ರ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರು ಕೇವಲ ಒಬ್ಬ ಆಯುಕ್ತರ ವಿಚಾರದಲ್ಲಿ ಖುದ್ದಾಗಿ ಹೋಗಿ ದೂರು ನೀಡಿ ಅಮಾನತು ಮಾಡಿರುವುದರ ಹಿಂದೆ ಭೂಮಾಫಿಯಾ ಮತ್ತು ಅಕ್ರಮ ಕಟ್ಟಡ ಹಾಗೂ ಫುಟ್‌ಪಾತ್ ತೆರವಿಗೆ ದಿಟ್ಟ ಕ್ರಮ ಕೈಗೊಂಡ ಆಯುಕ್ತರ ಮೇಲೆ ಸೇಡು ತೀರಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿನ ಅನೇಕ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಮರ್ಥ ಅಧಿಕಾರಿಯನ್ನು ಹಾಕುವ ಬದಲು ಅಧಿಕಾರಿಗಳನ್ನು ಅಮಾನತು ಮಾಡುವುದು ಕೇಂದ್ರ ಸಚಿವರ ಕಾಳಜಿ ತೋರಿಸುತ್ತದೆ. ಇಂತಹ ಘಟನೆಗಳಿಂದ ಕಚೇರಿಗಳಿಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಾರೆ. ಇದರಿಂದ ಕೋಲಾರ ಅನಾಥ ಸ್ಥಿತಿಯಲ್ಲಿರಲು ಕಾರಣವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement