ದೇಶ ಸೇವೆಗೆ ವಿದ್ಯಾರ್ಥಿಗಳು ಮುಂದಾಗಲಿ: ಹರಿನಾಥ್
ಕೆಜಿಎಫ್: ಭಾರತ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿ ನಿರಂತರವಾಗಿ ನಮ್ಮ ಸೈನಿಕರನ್ನು ಹತ್ಯೆ ಮಾಡುತ್ತಿರುವ ದ್ರೋಹಿಗಳನ್ನು ಮಟ್ಟಹಾಕಿ ಭಾರತವನ್ನು ರಕ್ಷಿಸಲು ಇಂದಿನ ವಿದ್ಯಾರ್ಥಿಗಳು ಸೇನೆಗೆ ಸೇರುವ ಅಗತ್ಯವಿದೆ ಎಂದು ಎನ್‌ಸಿಸಿ ಕಮಾಂಡೆಂಟ್ ಅಧಿಕಾರಿ ಹರಿನಾಥ್ ಅವರು ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಎನ್‌ಸಿಸಿ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಶಿಸ್ತು ಮತ್ತು ಒಳ್ಳೆಯ ನಡತೆಯಿಂದ ತಮ್ಮ ಸುತ್ತಮುತ್ತಲಿನ ಪರಿಸರ ಮತ್ತು ತಮ್ಮ ಮುಂದಿನ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಕೆಜಿಎಫ್‌ನಲ್ಲಿ ಕೇವಲ ಒಂದು ಎನ್‌ಸಿಸಿ ಘಟಕ ಮಾತ್ರವಿದ್ದು, ಇಂದು ಹಲವಾರು ಘಟಕಗಳು ಸ್ಥಾಪನೆಯಾಗಿದೆ. ಇದರಿಂದ ದೇಶಕ್ಕೆ ಶಕ್ತಿಯನ್ನು ತುಂಬುವಂತಾಗಿದೆ. ಭಾರತದ ಗಡಿ ಭಾಗದಲ್ಲಿ ನಮ್ಮ ಸೈನಿಕರನ್ನು ಹತ್ಯೆ ಮಾಡುತ್ತಿರುವ ಪಾಕಿಸ್ತಾನ ಸೇರಿದಂತೆ ಇತರೇ ಹೊರ ದೇಶದ ಸೈನಿಕರು ಹಾಗೂ ಭಯೋತ್ಪಾದರನ್ನು ಬೇರು ಸಮೇತ ಮಟ್ಟಹಾಕಲು ಇಂದಿನ ವಿದ್ಯಾರ್ಥಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಸಿಸಿ ಹಾಗೂ ಸೇನೆಯಲ್ಲಿ ಸೇರುವುದರಿಂದ ಈ ದೇಶದ ರಕ್ಷಣೆ ಜೊತೆಗೆ ತಮ್ಮ ಮುಂದಿನ ಜೀವನದ ಗುರಿಯನ್ನು ಸಾಧಿಸಲು ಸಹಕಾರಿಯಾಗಲಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಮುನಿಯಪ್ಪ ಮಾತನಾಡಿ, ಸರ್ಕಾರಿ ಕಾಲೇಜಿನಲ್ಲಿ ಯಾವುದೇ ಸೌಲಭ್ಯವಿಲ್ಲದ ಕಾರಣ ಕಳೆದ 5 ವರ್ಷಗಳಿಂದ ಎನ್‌ಸಿಸಿ ಘಟಕವನ್ನು ಸ್ಥಾಪಿಸಲು ನಿರಾಕರಿಸಲಾಗಿತ್ತು. ಆದರೆ ಬಡ ಕುಟುಂಬ ವರ್ಗದ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಓದುತ್ತಿರುವ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಇದೀಗ ಸರ್ಕಾರಿ ಕಾಲೇಜಿನಲ್ಲಿ ಎನ್‌ಸಿಸಿ ಘಟಕವನ್ನು ಸ್ಥಾಪಿಸಲಾಗಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್‌ಸಿಸಿ ಅಧಿಕಾರಿಗಳಾದ ಬಾಬು, ಗೋಪಾಲ್, ವಿನಾಯಗಮ್, ಶಿಕ್ಷಕರಾದ ಶಿವಕುಮಾರ್ ಸೇರಿದಂತೆ ಕಾಲೇಜಿನ ಇತರೆ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.