ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಚಿಂತಾಮಣಿ: ಗಡಿಭಾಗದ ಗ್ರಾಮೀಣ ಪ್ರದೇಶದಲ್ಲಿನ ಪ್ರಾಥಮಿಕ ಶಾಲಾ ದಿನಗಳನ್ನು ಸ್ಮರಿಸುತ್ತಾ ಹಳೆ ವಿದ್ಯಾರ್ಥಿಗಳು ಸೇರಿ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಸನ್ಮಾನಿಸಿದರು. ತಾಲೂಕಿನ ಗಡಿಭಾಗದ ಬಾಗೇಪಲ್ಲಿ ವ್ಯಾಪ್ತಿಗೆ ಸೇರಿದ ಚಾಕವೇಲು ಗ್ರಾಮದ ಶ್ರೀ ಮಾರುತಿ ಪ್ರಾಥಮಿಕ ಪಾಠಶಾಲೆಯಲ್ಲಿ ಓದಿದ ಪಟ್ಟಣದ ಗುಪ್ತ ಮಾಹಿತಿ ಇಲಾಖೆಯ ಕೆ.ವಿ.ಸುರೇಶ್ ಹಾಗೂ ಹಳೆ ಸ್ನೇಹಿತರು ಸೇರಿ ಈಗಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ, ಬ್ಯಾಗ್, ಕೈಗಡಿಯಾರ ಮತ್ತು ನೆನಪಿನ ಕಾಣಿಕೆ ನೀಡಿ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ನಂತರ ಮಾತನಾಡಿದ ಕೆ.ವಿ.ಸುರೇಶ್ 1985-86ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ಹಳೆ ವಿದ್ಯಾರ್ಥಿಯಾದ ನಾನು ಸಾರ್ಕಾರಿ ನೌಕರಿಯಲ್ಲಿದ್ದು ತನ್ನ ಕೈಯಲ್ಲಾದ ಸೇವೆಯನ್ನು ಮಾಡುತ್ತಿರುವುದಾಗಿ ತಿಳಿಸಿದರು. ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ 10 ವಿದ್ಯಾರ್ಥಿಗಳು ಹಾಗೂ ಬೇರೆ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 10 ಜನರು ಒಟ್ಟು 20 ಜನ ವಿದ್ಯಾರ್ಥಿಗಳಿಗೆ ಪ್ರತಿಭೆಯನ್ನು ಮೆಚ್ಚಿ ಸನ್ಮಾನಿಸುತ್ತಿರುವುದಾಗಿ ತಿಳಿಸಿದರು. ಎಸ್.ಆರ್.ಶ್ರೀನಾಥ್, ಎಸ್.ಕೆ.ಬಾಷಾಸಾಬ್, ಕೆ.ವಿ.ಸುರೇಶ್, ರಮೇಶ್ರೆಡ್ಡಿ, ಚಲಪತಿ, ಶಿವಶಂಕರರೆಡ್ಡಿ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕ ಪ್ರವೀಣ್ ಪಟೇಲ್ ಸೇರಿದಂತೆ ಇತರರಿದ್ದರು.