ಪದವಿ ಕಾಲೇಜುಗಳಿಗೆ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಕೋಲಾರ: ಜಿಲ್ಲೆಯ ಪದವಿ ಕಾಲೇಜುಗಳಿಗೆ ಮೂಲ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ವಿದ್ಯಾರ್ಥಿ ಒಕ್ಕೂಟ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ವಿದ್ಯಾರ್ಥಿ ಘಟಕದ ರಾಜ್ಯ ಸಂಚಾಲಕ ಹೂಹಳ್ಳಿ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಸಲ್ಲುವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಸೇರಿದ್ದರೂ ಯೋಗ್ಯವಾದ ಕೊಠಡಿಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ಕೊರತೆ ಇರುವುದರಿಂದ ಸರ್ಕಾರ ಕೂಡಲೇ ಸಮಸ್ಯೆ ನಿವಾರಣೆ ಮಾಡಬೇಕೆಂದು ಆಗ್ರಹಿಸಿದರು.
ಹೊಸ ಕಟ್ಟಡ ಒದಗಿಸಿ: ಮಹಿಳಾ ಉಪನ್ಯಾಸಕರಿಗೆ ವಿಶ್ರಾಂತಿ ಕೊಠಡಿ ಮತ್ತು ಶೌಚಾಯಲಗಳಿಲ್ಲ. ಇದೇ ರೀತಿಯ ಸಮಸ್ಯೆ ಜಿಲ್ಲೆ ಬಹುತೇಕ ಪದವಿ ಕಾಲೇಜುಗಳಲ್ಲಿ ಇರುವುದರಿಂದ ಶೈಕ್ಷಣಿಕ ಪ್ರಗತಿ ಕುಸಿಯುವಂತಾಗಿದೆ ಎಂದ ಅವರು, ಈ ಕಾರಣದಿಂದಾಗಿಯೇ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳು ಸೇರದೆ ಖಾಸಗಿ ಕಾಲೇಜುಗಳಿಗೆ ಹೋಗುವಂತಾಗಿದೆ ಎಂದು ದೂರಿದರು.
ಜಿಲ್ಲೆಯ ಕೇಂದ್ರ ಸ್ಥಾನವಾದ ಸರ್ಕಾರಿ ಬಾಲಕರ ಪದವಿ ಕಾಲೇಜುಗಳಿಗೆ ಕುಡಿಯುವ ನೀರು, ಶೌಚಾಲಯ, ಸಮರ್ಪಕವಾದ ವಿದ್ಯುತ್, ಗ್ರಂಥಾಲಯ, ಕ್ರೀಡಾ ಸಾಮಾಗ್ರಿಗಳು, ಕೊಠಡಿಗಳ ದುರಸ್ತಿ, ಗೋಡೆಗಳಿಗೆ ಸುಣ್ಣ, ಬಣ್ಣ, ವಿಜ್ಞಾನದ ಪ್ರಯೋಗಾಲಯ, ಹೊಸ ಕಟ್ಟಡಗಳನ್ನು ಒದಗಿಸಿಕೊಡಬೇಕು ಎಂದು ವಿದ್ಯಾರ್ಥಿಗಳ ಪರವಾಗಿ ಒತ್ತಾಯಿಸಿದರು.
ಉಪನ್ಯಾಸಕರ ವರ್ಗಾವಣೆ ಬೇಡ: ಜಿಲ್ಲೆಯ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಬಿಬಿಎಂ ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ 1 ಸಾವಿರ ಹಣವನ್ನು ವಾಪಸ್ ನೀಡಬೇಕು, ಬಾಲಕರ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಷ್ಠಾವಂತ ಉಪನ್ಯಾಸಕರನ್ನು ವರ್ಗಾವಣೆ ಮಾಡದೇ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಹಿತದೃಷ್ಟಿಯಿಂದ ಅದೇ ಕಾಲೇಜಿನಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ನಾರಾಯಣಗೌಡ, ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಮುಖಂಡರಾದ ಗೌರೀಶ್, ಸೂಗಟೂರು ಸುದರ್ಶನ್, ಪುರುಷೋತ್ತಮ್, ಮಡೇರಹಳ್ಳಿ ರವಿ, ಕಾರ್ತೀಕ್, ಪ್ರತಾಪ್, ಚೇತನ್, ಆರುಣ್, ಕುಮಾರ್ ಇದ್ದರು.