ಬಸವರಾಜ ಕಟ್ಟಿಮನಿ ಸಾಹಿತ್ಯ ಲೋಕದ ಅವಧೂತ
ಕ.ಪ್ರ.ವಾರ್ತೆ , ಕೋಲಾರ , ಆ.23
ಹಳ್ಳಿಗಾಡಿನಲ್ಲಿ ಅರಳಿದ ಸಾಹಿತಿ ಬಸವರಾಜ ಕಟ್ಟಿಮನಿ ಸಾಹಿತ್ಯ ಲೋಕದ ಅವಧೂತರಾಗಿದ್ದರು ಎಂದು ವರ್ತೂರು ಸರ್ಕಾರಿ ಪಿ.ಯು ಕಾಲೇಜಿನ ಕನ್ನಡ ಉಪನ್ಯಾಸಕ ಎಚ್.ಎಸ್.ಸತ್ಯನಾರಾಯಣ ಅಭಿಮತ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಬಾಲಕರ ಕಾಲೇಜಿನ ಪಿಜಿ ಬ್ಲಾಕಿನಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿಯ ಬಸವರಾಜ ಕಟ್ಟಿಮನಿ ಟ್ರಸ್ಟ್ ಹಾಗೂ ಕೋಲಾರದ ಸರ್ಕಾರಿ ಬಾಲಕರ ಕಾಲೇಜಿನ ನುಡಿ ಮಂಟಪ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವರಾಜ ಕಟ್ಟಿಮನಿ ಬದುಕು-ಬರಹ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರ ಆಶಯದಂತೆ ತಮ್ಮ ಊರಾದ ಮಲಂಮರಡಿ ಗ್ರಾಮದಲ್ಲಿ ನೆಲೆಸಿ ಸುಮಾರು 20ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ ಶ್ರೇಷ್ಠ ಸಾಹಿತಿ ಬಸವರಾಜ ಕಟ್ಟೀಮನಿ, ಬಡವರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದ ಸಂವೇದನಾಶೀಲರಾಗಿದ್ದರು ಎಂದು ಬಣ್ಣಿಸಿದರು.
1940ರಲ್ಲಿ ಅಂದರೆ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಕಟ್ಟಿಮನಿ ಜೈಲಿನಲ್ಲಿ ಇದ್ದುಕೊಂಡೇ ಅನೇಕ ಕೃತಿಗಳನ್ನು ರಚಿಸಿದರು. 1950ರಲ್ಲಿ ಇವರು ಬರೆದ ಮಾಡಿ ಮಡಿದವರು ಕೃತಿ ಶ್ರೇಷ್ಠ ಸಾಹಿತ್ಯವಾಗಿತ್ತಾದರೂ ಇದಕ್ಕೆ ಯಾವುದೇ ಪ್ರಶಸ್ತಿ ಸಿಗದಿರುವುದು ದುರ್ದೈವ ಎಂದು ಹೇಳಿದರು.
ಸಾಧನೆಗೆ ತಾಯಿ ಪ್ರೇರಣೆ: ಶಿವರಾಮ ಕಾರಂತ, ಎಸ್.ಎಲ್.ಬೈರಪ್ಪ ಅವರಂತೆ ಕಟ್ಟಿಮನಿ ಸಹ ನಿರಂತರವಾಗಿ ಕಾದಂಬರಿಗಳನ್ನು ಬರೆದ ಸಾಹಿತಿಯಾಗಿದ್ದಾರೆ. ತಾಯಿ ಬಾಳವ್ವರ ಪ್ರೇರಣೆಯಿಂದ ಇವರು ಸಾಹಿತ್ಯ ಲೋಕದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆಂದು ತಿಳಿಸಿದರು.
ಬಸವರಾಜ ಕಟ್ಟಿಮನಿಯವರು ನಿಷ್ಠುರವಾದಿಯಾಗಿದ್ದರು. ಏನೇ ಲೋಪ ಕಂಡರೂ ಅದನ್ನು ಧೈರ್ಯವಾಗಿ ಹೇಳುತ್ತಿದ್ದರು. ತಾವೇ ಬರೆದ ಕೃತಿಗಳನ್ನು ತಾವೇ ವಿಮರ್ಶೆಗೆ ಒಳಪಡಿಸಿಕೊಂಡ ಅಪರೂಪದ ಸಾಹಿತಿಯಾಗಿದ್ದ ಇವರು, ಕತ್ತಿ ಮಸೆಯುವ ವ್ಯಕ್ತಿ ಎಂದು ಕೆಲವರು ಟೀಕೆ ಮಾಡಿದ್ದರಾದರೂ ಇವರ ಪರಂಪರೆಯನ್ನು ಮಾತ್ರ ವಿರೋಧಿಗಳು ಮೆಚ್ಚದೆ ಇರಲಿಲ್ಲವೆಂದು ನುಡಿದರು.
ರಾಜಕೀಯದಲ್ಲೂ ಹೆಸರು ಮಾಡಿದ್ದ ಕಟ್ಟಿಮನಿ ಒಮ್ಮೆ ಶಾಸಕರಾಗಿದ್ದರು. ಆಡಳಿತ ಪಕ್ಷದಲ್ಲಿ ಇದ್ದುಕೊಂಡು ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುತ್ತಿದ್ದರು. ಹಾಗಾಗಿ ಇವರನ್ನು ವಿರೋಧಿಗಳು ಎರಡನೇ ಬಾರಿಗೆ ಶಾಸಕರಾಗುವುದಕ್ಕೆ ಅವಕಾಶ ನೀಡಲಿಲ್ಲವೆಂದು ಹೇಳಿದರು.
ಕಟ್ಟಿಮನಿಯವರ ಕಥೆಗಳ ಕುರಿತು ಕೊಡಗು ಜಿಲ್ಲೆಯ ಕೂಡಗಿ ಸರ್ಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಪ್ರಕಾಶ್ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ ಆಶಯ ಭಾಷಣ ಮಾಡಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋಲಾರ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿ ಪ್ರಸ್ತುತ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ವರ್ಗಾವಣೆಗೊಂಡಿರುವ ರುದ್ರೇಶ್ ಬಿ.ಅದರಂಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಉಪನ್ಯಾಸಕ ಎಂ.ಶ್ರೀನಿವಾಸಮೂರ್ತಿ ನಿರೂಪಿಸಿ, ಸಂಗೀತ ಸ್ವಾಗತಿಸಿ, ಸಿ.ಎ.ರಮೇಶ್ ವಂದಿಸಿದರು. ಸಂವಾದದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪಾಲ್ಗೊಂಡು ಬವಸರಾಜ ಕಟ್ಟಿಮನಿ ಕೃತಿಗಳ ಬಗ್ಗೆ ತಿಳಿದುಕೊಂಡರು.