ಚಿನ್ನದ ಗಣಿ ಕಾರ್ಮಿಕ ಕುಟುಂಬಕ್ಕೆ ವೇತನ ವಿತರಣೆ
ಕೆಜಿಎಫ್: ಕೆಜಿಎಫ್‌ನಲ್ಲಿ ಚಿನ್ನದ ಗಣಿಯನ್ನು ಮುಚ್ಚಿದ ನಂತರ ಕಾರ್ಮಿಕರು ಹಾಗೂ ಕಾರ್ಮಿಕ ಕುಟುಂಬ ವರ್ಗದವರು ಕೆಲಸವಿಲ್ಲದೆ ಸಂಕಷ್ಟದ ಜೀವನ ನಡೆಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಣ್ಣ ಕೈಗಾರಿಕಾ ತರಬೇತಿ ಯೋಜನೆಯಡಿ ವಿವಿಧ ರೀತಿಯ ತರಬೇತಿ ನೀಡುತ್ತಿರುವುದನ್ನು ಕಾರ್ಮಿಕರ ಕುಟುಂಬ ವರ್ಗದವರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಸಣ್ಣ ಕೈಗಾರಿಕಾ ಸಮಿತಿಯ ಅಧ್ಯಕ್ಷ ಕುಮಾರ್ ತಿಳಿಸಿದರು.
ಗ್ಲೋಬಲ್ ಗೋಲ್ಡ್ ಮೈನ್ಸ್ ಕಾರ್ಮಿಕ ಸಂಘದ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಕಾರ್ಮಿಕ ಕುಟುಂಬ ವರ್ಗದವರಿಗೆ ಮಾಸಿಕ ವೇತನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರದ ಸಣ್ಣ ಕೈಗಾರಿಕಾ ಸಮಿತಿ ವತಿಯಿಂದ ಪ್ರತಿ ವರ್ಷ ಕಾರ್ಮಿಕ ಕುಟುಂಬಗಳಿಗೆ ಕಂಪ್ಯೂಟರ್, ಹೊಲಿಗೆ, ಬಟ್ಟೆಗಳು ನೇಯುವುದು ಸೇರಿದಂತೆ ಇತರೆ ವಿವಿಧ ರೀತಿಯ ತರಬೇತಿಗಳನ್ನು ನೀಡಿ ಅವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಗ್ಲೋಬಲ್ ಗೋಲ್ಡ್ ಮೈನ್ಸ್ ಕಾರ್ಮಿಕರ ಸಂಘದ ಅಧ್ಯಕ್ಷ ವಿ. ಲೂಯಿಸ್ ಹಾಗೂ ನಗರಸಭೆ ಸದಸ್ಯ ರಮೇಶ್ ಜೈನ್ ಮಾತನಾಡಿ, ಕೇಂದ್ರ ಸರ್ಕಾರದ ಮೂಲಕ ನೀಡುತ್ತಿರುವ ಈ ತರಬೇತಿಯಲ್ಲಿ ನಗರದ ಬಿಜಿಎಂಎಲ್ ಕಾರ್ಮಿಕರು ಹಾಗೂ ಕಾರ್ಮಿಕ ಕುಟುಂಬಗಳ ಸದಸ್ಯರು ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ಮಾಸಿಕ ವೇತನ 1800 ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ತಮ್ಮ ಮುಂದಿನ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.
ತರಬೇತಿಯಲ್ಲಿ ಪಾಲ್ಗೊಂಡಿದ್ದ ಸುಮಾರು 300 ಮಂದಿ ಫಲಾನುಭವಿಗಳಿಗೆ ಮಾಸಿಕ ವೇತನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಹಾಲಿ ನಗರಸಭೆ ಸದಸ್ಯರಾದ ಕೆ.ಸಿ. ಮುರಳಿ, ದಾಸ್‌ಚಿನ್ನ ಸವರಿ, ಮುಖಂಡರಾದ ಪುರುಷೋತ್ತಮ್ ಸೇರಿದಂತೆ ಸಂಘದ ಇತರೇ ಮುಖಂಡರು, ಪದಾಧಿಕಾರಿಗಳು, ಕಾರ್ಮಿಕ ಕುಟುಂಬ ವರ್ಗದವರು ಮಹಿಳೆಯರು ಭಾಗವಹಿಸಿದ್ದರು.