ಜಿಲ್ಲಾಡಳಿತ; ಮೇಜರ್ ಸರ್ಜರಿಗೆ ಇದು ಸಕಾಲ
ಕನ್ನಡಪ್ರಭ ವಾರ್ತೆ, ಕೋಲಾರ, ಆ.25
ಹಾದಿ ತಪ್ಪಿರುವ ಜಿಲ್ಲಾ ಆಡಳಿತಕ್ಕೆ ಮೇಜರ್ ಸರ್ಜರಿಗೆ ಇದು ಸಕಾಲ.
ಹೌದು. ಕಳೆದ ಎರಡು ತಿಂಗಳಿಂದ ಜಿಲ್ಲಾಧಿಕಾರಿ ಇಲ್ಲದೆ ಆಡಳಿತ ವ್ಯವಸ್ಥೆ ಹಾದಿ ತಪ್ಪಿತ್ತು. ಜಿಲ್ಲೆಯ ಆಡಳಿತ ವ್ಯವಸ್ಥೆ ಯಜಮಾನ ಇಲ್ಲದ ಮನೆಯಂತಾಗಿತ್ತು.
ಜಿಲ್ಲೆಗೆ ಅಧಿಕಾರಿಯಾಗಿ ಬರುವುದಕ್ಕೆ ಹಿಂದೇಟು ಹಾಕುವ ವಾತಾವಣ, ಧೈರ್ಯ ಮಾಡಿ ಬಂದರೂ ಅಸಹಕಾರ, ರಾಜಕಾರಣ ಇನ್ನಿತರ ಕಾರಣಗಳಿಂದ ಅಧಿಕಾರಿಗಳು ಕೋಲಾರದ ಕಡೆ ಮುಖ ಮಾಡುವುದಕ್ಕೂ ಆಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಆಡಳಿತ ವ್ಯವಸ್ಥೆ ಸುಧಾರಣೆ ಮಾಡುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿತ್ತು.
ಮನವಿ ಸ್ವೀಕಾರವೇ ಕೆಲಸ: ಡಾ. ಡಿ.ಎಸ್. ವಿಶ್ವನಾಥ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಇನ್ನು ಎರಡು ತಿಂಗಳಲ್ಲಿ ನಿವೃತ್ತಿ ಹೊಂದುವ ಶಿವಸ್ವಾಮಿ ಎಂಬುವವರನ್ನು ವರ್ಗಾವಣೆ ಮಾಡಲಾಗಿತ್ತಾದರೂ ಸದರಿ ಅಧಿಕಾರಿ ಅಧಿಕಾರದಿಂದ ನಿರ್ಗಮಿಸುವ ಕಡೆ ಘಳಿಗೆಯಲ್ಲಿ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡವೆಂದು ಬೆಂಗಳೂರಿನಲ್ಲೇ ಉಳಿದಿದ್ದಾರೆ. ಅದರಿಂದ ಸರ್ಕಾರಕ್ಕೆ ಕೋಲಾರ ಜಿಲ್ಲೆಗೆ ಯಾರನ್ನು ಜಿಲ್ಲಾಧಿಕಾರಿಯನ್ನಾಗಿ ಮಾಡಬೇಕೆಂದು ತೋಚದೆ ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶಿವಸ್ವಾಮಿ ವರ್ಗಾವಣೆ ರದ್ದು ಆದ ನಂತರ ಡಾ. ಡಿ.ಎಸ್. ವಿಶ್ವನಾಥ್ ಮುಂದುವರೆಯುತ್ತಾರೆ ಎಂದೇ ಪ್ರತಿಯೊಬ್ಬರು ಭಾವಿಸಿದ್ದರು. ಆದರೆ ಕಳೆದ ಆ.19ಕ್ಕೆ ಡಿ.ಕೆ. ರವಿ ಹೊಸ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ನೂತನ ಜಿಲ್ಲಾಧಿಕಾರಿಗಳಿಗೆ ವಿವಿಧ ಸಂಘ- ಸಂಸ್ಥೆಗಳಿಂದ ಮನವಿ ಪತ್ರ ಸ್ವೀಕರಿಸುವುದು ದೊಡ್ಡ ಕೆಲಸವಾಗಿರುವುದರಿಂದ ಜಿಲ್ಲೆಯ ಆಡಳಿತ ವ್ಯವಸ್ಥೆಗೆ ಸರ್ಜರಿ ಮಾಡುವುದಕ್ಕೆ ಸಮಯ ಸಿಗದಂತಾಗಿತ್ತು.
ವಿಶೇಷ ಗಮನ ಅಗತ್ಯ: ಒಂದು ವಾರಗಳ ಕಾಲ ಕಚೇರಿಯಲ್ಲಿ ಕುಳಿತು ಸಂಘಟನೆಗಳಿಂದ ಸಲ್ಲಿಕೆಯಾಗುವ ಮನವಿ ಪತ್ರಗಳನ್ನು ವಿಲೇವಾರಿ ಮಾಡಿರುವುದಲ್ಲದೆ, ಜಿಲ್ಲೆಯ ಪ್ರಗತಿ ತಿಳಿದು ತ್ವಗಿತಗತಿಯಲ್ಲಿ ಅಭಿವೃದ್ಧಿ ಕೆಲಸಗಳು ಕೈಗೊಳ್ಳುವ ಸಂಬಂಧ ಆ.26ರಂದು ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳ ಸಭೆಯನ್ನು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿರುವುದು ಜನತೆಯಲ್ಲಿ ಕೊಂಚ ವಿಶ್ವಾಸ ಮೂಡುವುದಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ದಲಿತರು ಇದ್ದು, ಇವರ ಏಳಿಗೆಗಾಗಿ ಇರುವ ಸಮಾಜ ಕಲ್ಯಾಣ ಇಲಾಖೆ ಸಮರ್ಥ ಅಧಿಕಾರಿ ಇಲ್ಲದೆ ಸೊರಗುತ್ತಿರುವುದರಿಂದ ಪ್ರತಿನಿತ್ಯ ಇಲಾಖೆಯ ವಿರುದ್ಧ ಒಂದಲ್ಲ ಒಂದು ಆರೋಪ, ಟೀಕೆ-ಟಿಪ್ಪಣಿಗಳು ಸ್ಫೋಟವಾಗುತ್ತಿರುವುದರಿಂದ ನೂತನ ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಗೆ ಕಾಯಕಲ್ಪ ನೀಡುವುದಕ್ಕೆ ವಿಶೇಷ ಗಮನ ನೀಡಬೇಕಾಗಿದೆ.
ದಂಧೆಗೆ ಕಡಿವಾಣ ಹಾಕಿ: ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ ಸಾಕಷ್ಟು ಅನುದಾನ ನೀಡಿದ್ದರೂ ಗೊಂದಲ, ಪ್ರತಿಭಟನೆಗಳು ನಿವಾರಣೆ ಆಗುತ್ತಿಲ್ಲ, ನೀರಿನ ಕೊರತೆಯನ್ನು ನೆಪ ಮಾಡಿಕೊಂಡು ಬೋರ್ವೆಲ್ ಎಂಬ ಭೂತ ತೋರಿಸಿ ತೋರಿಸಿ ಹಣವನ್ನು ವ್ಯಯ ಮಾಡಲಾಗುತ್ತಿದೆಯಾದರೂ ಜನತೆಗೆ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಅನೇಕ ಕಡೆ ನೀರಿನ ಲೆಕ್ಕ ಪಕ್ಕಾ ಇಲ್ಲದೆ ಬಿಲ್ ಬಾಕಿ ಪಾವತಿ ವಿಚಾರದಲ್ಲಿ ಗೊಂದಲಗಳು ಉಂಟಾಗಿದೆ. ಟ್ಯಾಂಕರ್ ನೀರಿನ ಹಾವಳಿ ಹೆಚ್ಚಾಗಿದೆ, ಸರ್ಕಾರಿಂದ ಕೊರೆಸುವ ಕೊಳವೆ ಬಾವಿಗಳಿಗೆ ಅಳವಡಿಸಿರುವ ಮೋಟಾರ್ ಪಂಪುಗಳು ಒಂದು ತಿಂಗಳು ಸಹ ಬಾಳಿಕೆಗೆ ಬರದೆ ಹಾಳಾಗಿದೆ. ಕೆಲ ಕಡೆ ಜನತೆಗಾಗಿ ಹಾಕಿಸಿರುವ ಕೊಳವೆ ಬಾವಿಗಳಿಂದ ಖಾಸಗಿಯವರು ನೀರು ಶೇಖರಣೆ ಮಾಡಿ ಸೇವೆಯ ಹೆಸರಿನಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿದ್ದು ಜಿಲ್ಲಾಧಿಕಾರಿಗಳು ಈ ದಂಧೆಗೆ ಶಾಶ್ವತ ಕಡಿವಾಣ ಹಾಕುವ ಮೂಲಕ ನೀರಿನ ರಗಳೆ ತಪ್ಪಿಸಬೇಕಾಗಿದೆ.
ಈ ಕಡೆ ಗಮನ ಹರಿಸಿ: ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಆಶಾಕಿರಣವಾಗಬೇಕಾದ ಕ್ರೀಡಾ ಮತ್ತು ಯುವಜನ ಇಲಾಖೆಗೆ ಶಕ್ತಿ ತುಂಬುವುದು, ಸರ್ಕಾರದಿಂದ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧ ಬೇಗನೆ ಮುಗಿಸಲು, ಹಣಕಾಸಿನ ತೊಂದರೆಯಿಂದ ಸ್ಥಗಿತವಾಗಿರುವ ಅರಸು ಭವನ ಮತ್ತು ಒಳಾಂಗಣ ಕ್ರೀಡಾಂಗಣಕ್ಕೆ ಆರ್ಥಿಕ ಸಂಪನ್ಮೂಲ ಕ್ರೊಢಿಕರಿಸಲು, ವಿವಾದಕ್ಕೆ ಸಿಕ್ಕಿ ನನೆಗುದಿಗೆ ಬಿದ್ದಿರುವ ಸುವರ್ಣ ಕನ್ನಡ ಭವನ ನಿರ್ಮಾಣಕ್ಕೆ ಕ್ರಮ, ವಿವಿಧ ಶಾಲಾ-ಕಾಲೇಜುಗಳಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಯ ಕೊರತೆ ನಿವಾರಣೆ, ಮೂಲ ಸೌಕರ್ಯ, ಪ್ರವಾಸೋದ್ಯಮ ಅಭಿವೃದ್ಧಿ, ಕೋಲಾರ ನಗರದಲ್ಲಿ ಹಾಳಾಗಿರುವ ರಸ್ತೆಗಳಿಗೆ ಕಾಯಕಲ್ಪ, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ, ವಸತಿ ಯೋಜನೆಯ ಪ್ರಗತಿ, ಭೂ ರಹಿತರಿಗೆ ಭೂಮಿ ಹಂಚಿಕೆಯ ಕಡೆ ಗಮನ ನೀಡಬೇಕಾಗಿದೆ.
ಜಿಲ್ಲಾ ಮಟ್ಟದ ಪ್ರತಿಯೊಬ್ಬ ಅಧಿಕಾರಿ ಕೇಂದ್ರ ಸ್ಥಾನದಲ್ಲಿ ಇರುವಂತೆ ಮಾಡುವುದು, ಪಡಿತರ ವ್ಯವಸ್ಥೆಯಲ್ಲಿ ಲೋಪವಾಗದಂತೆ ಇಲಾಖೆಯನ್ನು ಸದೃಢಗೊಳಿಸುವುದು, ಸರ್ಕಾರದಿಂದ ಮಂಜೂರಾಗಿರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಗಿಸುವುದು, ಜಿಲ್ಲಾ ಆಸ್ಪತ್ರೆ, ನಾಡ ಕಚೇರಿ, ಮಾಜಪೇಯಿ ಜನಸ್ನೇಹಿ ಕೇಂದ್ರಗಳಿಗೆ ಶಕ್ತಿ ತುಂಬಿ ಜನತೆ ಅನಗತ್ಯವಾಗಿ ತಮ್ಮ ಕೆಲಸಗಳಿಗಾಗಿ ಅಲೆಯುವುದನ್ನು ತಪ್ಪಿಸಬೇಕು, ಸಾಮಾಜಿಕ ಭದ್ರತೆಯಡಿ ಸಿಗುವ ಸವಲತ್ತುಗಳನ್ನು ಫಲಾನುಭವಿಗಳಿಗೆ ಸಕಾಲಕ್ಕೆ ತಲುಪುವಂತೆ ಮಾಡುವುದು, ಕೈಗಾರಿಕೆಗಳ ಅಭಿವೃದ್ಧಿ, ಉದ್ಯೋಗ ಸೇರಿದಂತೆ ಹತ್ತಾರು ಕಾರ್ಯಕ್ರಮಗಳು ಆಗಬೇಕರಾಗಿದ್ದು ನೂತನ ಜಿಲ್ಲಾಧಿಕಾರಿಗಳು ಆ.26ರಂದು ಅಧಿಕಾರಿಗಳ ಪರಿಚಯದ ಜೊತೆಗೆ ಆಡಳಿತದ ವೇಗ ಹೆಚ್ಚಿಸುವುದಕ್ಕೆ ಮೇಜರ್ ಸರ್ಜರಿ ಮಾಡದಿದ್ದರೆ ಜಿಲ್ಲೆಯ ಪ್ರಗತಿ ಇನ್ನಷ್ಟು ಕುಸಿತವಾಗಬಹುದು.
ಹಾಸ್ಟೆಲ್ ಸಮಸ್ಯೆಗಳಿಗೆ ಮುಕ್ತಿ?
ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಕರೆಗಳು ಇವೆ, ರಾಜ ಕಾಲುವೆ, ಕಲ್ಯಾಣಿಗಳು ಕಾಣೆಯಾಗಿವೆ. ಈ ಹಿಂದಿನ ಜಿಲ್ಲಾಧಿಕಾರಿಗಳ ಅವಧಿಯಲ್ಲಿ ಒಂದಿಷ್ಟು ಕಲ್ಯಾಣಿಗಳ ಕಲ್ಯಾಣವಾಗಿದ್ದರೂ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇದ್ದು, ಕಲ್ಯಾಣಿಗಳ ಕಲ್ಯಾಣದ ಜೊತೆಗೆ ಕೆರೆಗಳ ಒತ್ತುವರಿ ತೆರವು ಮಾಡಿಸಲು ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಅಂತರ್ಜಲ ಸಮಸ್ಯೆ ನಿವಾರಣೆಗೆ ವಿಶೇಷ ಒತ್ತು ನೀಡಬೇಕಾಗಿದೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಸೇರಿದ ಹಾಸ್ಟೆಲ್ಗಳು ವಿದ್ಯಾರ್ಥಿಗಳ ಪಾಲಿಗೆ ನರಕದ ಮನೆಯಾಗಿದೆ, ಬಲಾಢ್ಯ ಗುತ್ತಿಗೆದಾರರಿಗೆ ಸ್ವರ್ಗವಾಗಿದೆ. ಹಾಸ್ಟೆಲ್ಗಳಲ್ಲಿ ಬಯೋವುಟ್ರಿಕ್ ವ್ಯವಸ್ಥೆ ಜಾರಿಗೆ ತರುವ ಮೂಲಕ ಹಾಗೂ ಕಳಪೆ ಆಹಾರ, ಇನ್ನಿತರ ಮೂಲ ಸೌಕರ್ಯಗಳನ್ನು ಪಾರದರ್ಶಕ ನಿಯಮಕ್ಕೆ ಅನುಗುಣವಾಗಿ ಸರಬರಾಜು ಮಾಡುವ ಪ್ರಕ್ರಿಯೆ ಆರಂಭಕ್ಕೆ ನೂತನ ಜಿಲ್ಲಾಧಿಕಾರಿ ಮುನ್ನುಡಿ ಬರೆಯುವ ಮೂಲಕ ಹಾಸ್ಟೆಲ್ ಸಮಸ್ಯೆಗಳಿಗೆ ಮುಕ್ತಿ ಕಾಣಿಸಬೇಕಾಗಿದೆ.
-ಪಾ.ಶ್ರೀ. ಅನಂತರಾಮ್