ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ಥಳೀಯ ಆಡಳಿತ ಸದಸ್ಯರಿಗೆ ಪ್ರಾಬಲ್ಯ ಭೀತಿ

Vishwanath S
Updated On : 26 Aug 2013, 12:39 pm

ಕ.ಪ್ರ.ವಾರ್ತೆ ,  ಚಿಕ್ಕಬಳ್ಳಾಪುರ ,  ಆ. 25
ರಾಜ್ಯ ಸರ್ಕಾರ ಸ್ಥಳೀಯ ಆಡಳಿತ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ್ದು, ತಾವು ಚುನಾವಣೆಯಲ್ಲಿ ಆಯ್ಕೆಯಾಗಿ ನಾಲ್ಕೈದು ತಿಂಗಳು ಕಳೆಯುತ್ತ ಬಂದಿದ್ದರೂ ಸಹ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಇನ್ನೂ ಮುಹೂರ್ತ ಕೂಡಿ ಬರಲಿಲ್ಲ ಎಂದು ಕುತೂಹಲದಿಂದ ಕಾದು ನೋಡುತ್ತಿದ್ದ ಸದಸ್ಯರಲ್ಲಿ ಇದೀಗ ತಳಮಳ ಉಂಟಾಗಿದೆ. ರಾಜಕೀಯ ವಿದ್ಯಮಾನಗಳು ಗರಿಗೆದರಿ ಮೀಸಲಾತಿ ಪಟ್ಟಿಗೆ ಅನುಗುಣವಾಗಿ ನಾನಾ ರೀತಿಯಲ್ಲಿ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದು ತೀವ್ರ ಪೈಪೋಟಿಯ ನಡುವೆ ಸದಸ್ಯರು ಆಯ್ಕೆಯಾಗಿದ್ದಾರಾದರೂ ವಿಧಾನಸಭಾ ಮತ್ತು ಉಪ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಮೀಸಲಾತಿ ಪಟ್ಟಿ ಘೋಷಣೆ ವಿಳಂಬವಾಯಿತು.
ಇದೀಗ ಮೀಸಲಾತಿ ಪಟ್ಟಿ ಪ್ರಕಟವಾಗಿರುವುದರಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಲು ರಾಜಕೀಯ ಕಸರತ್ತುಗಳನ್ನು ಆಕಾಂಕ್ಷಿ ಸದಸ್ಯರು ಶುರುವಿಟ್ಟುಕೊಂಡಿದ್ದಾರೆ. ಇದಕ್ಕಾಗಿ ತಮ್ಮ ತಮ್ಮ ಪಕ್ಷಗಳಲ್ಲಿನ ಪ್ರಭಾವಿ ಮುಖಂಡರುಗಳ ಮೇಲೆ ಒತ್ತಡವನ್ನು ಹೇರುತ್ತ ಸುಲಲಿತವಾಗಿ ಆಯ್ಕೆಯಾಗಲು ಹೊರಟಿರುವುದಲ್ಲದೇ ತಮ್ಮ ಪರ ಬೆಂಬಲವಾಗಿ  ಹೆಚ್ಚಿನ ಸದಸ್ಯರನ್ನು ಸೆಳೆದುಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ನಡುವೆ ಆಯಾ ಕ್ಷೇತ್ರಗಳ ಶಾಸಕರುಗಳು ಸಹ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಗಾದಿ ಮೇಲೆ ತಮ್ಮ ಬೆಂಬಲಿಗ ಸದಸ್ಯರನ್ನು ಕೂರಿಸಿ ತಮ್ಮ ಪ್ರಾಬಲ್ಯವನ್ನು ಸಾಧಿಸುವ ಕಡೆಗೆ ಗಮನಹರಿಸಿದ್ದಾರೆ.
ಮೀಸಲಾತಿ ಪಟ್ಟಿ: ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2 ನಗರಸಭೆ, 2 ಪುರಸಭೆ, 1 ಪಟ್ಟಣ ಪಂಚಾಯಿತಿ ಇದೆ. ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ( ಬಿಸಿಬಿ) ಮತ್ತು ಉಪಾಧ್ಯಕ್ಷ ಸಾನ ಬಿಸಿಎ(ಮಹಿಳೆ), ಚಿಂತಾಮಣಿ ನಗರಸಭೆ(ಬಿಸಿಎ) ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿ(ಮಹಿಳೆ), ಬಾಗೇಪಲ್ಲಿ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎ(ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಗೌರಿಬಿದನೂರು ಪುರಸಭೆ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಗುಡಿಬಂಡೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಬಿಸಿಎ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಚಿಕ್ಕಬಳ್ಳಾಪುರ ನಗರಸಭೆ: ಅಭಿವೃದ್ಧಿಯಲ್ಲಿ ಹಿನ್ನಡೆಯನ್ನು ಕಾಣುತ್ತ ಕೇವಲ ವಿವಾದಗಳಿಗೆ ಹೆಸರುವಾಸಿಯಾಗಿರುವ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರಸಭೆಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ನಾನಾ ರೀತಿಯಲ್ಲಿ ರಾಜಕಾರಣದ ಸರ್ಕಸ್ ನಡೆಯುವುದು ಮಾಮೂಲಿ ವಿಷಯ. ಮೀಸಲಾತಿ ಪಟ್ಟಿಯ ಅನ್ವಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಬಹುದಾದ ಸದಸ್ಯರನ್ನು ಗುರುತಿಸಿ, ಕೆಲಕಾಲ ಬೆಂಬಲವನ್ನು ನೀಡುವುದು, ಹಾಗೆಯೇ ಮತ್ತೆ ಅವರನ್ನು ಕೆಳಗಿಳಿಸುವಂತಹ ಕೆಲಸ ನಡೆದುಕೊಂಡು ಬಂದಿದ್ದು ಸರಿಯಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಯ ಮೇಲೆ ಕೂರುವವರಿಗೆ ಕೆಲಸ ಮಾಡಲು ಬಿಡುವುದಿಲ್ಲ. ಇದರಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಗಮನ ಸೆಳೆದುಕೊಂಡು ಬರುತ್ತಿದ್ದು, ಈ ಬಾರಿಯು ಸಹ ಕುತೂಹಲಕ್ಕೆ ಕಾರಣವಾಗಿದೆ. ಪರಸ್ಪರ ಕಾಲೆಳೆಯುವ ಸದಸ್ಯರ ತಂತ್ರಗಾರಿಕೆಗಳಿಗೆ ಪ್ರತಿತಂತ್ರವನ್ನು ಅನುಸರಿಸಿ ಗಾದಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಾರು ಯಶಸ್ವಿಯಾಗುತ್ತಾರೆ ಎಂಬ ಪ್ರಶ್ನೆ ಮೂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement