ಸ್ವಾವಲಂಬಿ ಬದುಕಿಗೆ ಶಿಕ್ಷಣ ಅವಶ್ಯ: ವೆಂಕಟಮುನಿಯಪ್ಪ
ಕೋಲಾರ: ಸ್ವಾವಲಂಬಿ ಬದುಕು ರೂಪಿಸುವ ವೃತ್ತಿ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ವಿ. ವೆಂಕಟಮುನಿಯಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ವೃತ್ತಿ ಶಿಕ್ಷಕರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಅಂತರ್ಜಲ ಪಾತಾಳ ತಲುಪಿದೆ, ಕೃಷಿ ಹಿಂದುಳಿಯಲು ನೀರಿನ ಕೊರತೆಯೇ ಪ್ರಮುಖ ಕಾರಣವಾಗಿದೆ ಎಂದ ಅವರು, ಜಿಲ್ಲೆಯ ಜೀವನಾಡಿಯಾದ ರೇಷ್ಮೆ ಉದ್ಯಮದ ಜತೆಗೆ ಹೈನುಗಾರಿಕೆಯನ್ನು ಉಳಿಸಿ ಬೆಳೆಸಲು ಅಗತ್ಯವಾದ ಹೈನೋದ್ಯಮದ ತಾಂತ್ರಿಕ ಶಿಕ್ಷಣ ನೀಡಬೇಕಾಗಿದೆ ಎಂದರು.
ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ರೇಷ್ಮೆ, ತೋಟಗಾರಿಕೆ, ಟೈಲರಿಂಗ್, ವೆಲ್ಡರ್ ಮತ್ತಿತರ ವೃತ್ತಿಗಳಲ್ಲಿ ಪ್ರಾಥಮಿಕ ಅರಿವು ನೀಡುವುದರಿಂದ ಆ ಮಕ್ಕಳ ಮುಂದಿನ ಸ್ವಾವಲಂಬಿ ಬದುಕಿಗೆ ಅದು ನೆರವಾಗಲಿದೆ ಎಂದರು.
ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ವಿಷಯ ಪರೀಕ್ಷಕ ಶಿವಮಾದಯ್ಯ, ವೃತ್ತಿ ಶಿಕ್ಷಣದಲ್ಲಿ ಹೊಸ, ಹೊಸ ಆವಿಷ್ಕಾರಗಳ ಜತೆಗೆ ದೈನಂದಿಗೆ ಸಾಮಾಜಿಕ ಉಪಯುಕ್ತ ಉತ್ಪಾದನಾ ಕಾರ್ಯಗಳ ಅರಿವು ಶಿಕ್ಷಕರಿಗೆ ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಚೌಡರೆಡ್ಡಿ, ವೃತ್ತಿ ನೈಪುಣ್ಯತೆ, ಕೌಶಲ್ಯ ಮಕ್ಕಳಲ್ಲಿ ಮೂಡಿಸಿದಲ್ಲಿ ಅದು ಅವರ ಮುಂದಿನ ಜೀವನಕ್ಕೆ ಕೊಡುಗೆಯಾಗಲಿದೆ ಎಂದರು.
ಹಿರಿಯ ಶಿಕ್ಷಕ ಬಿ. ವೆಂಕಟೇಶ್, ಮಕ್ಕಳಿಗೆ ವೃತ್ತಿ ಮಾರ್ಗದರ್ಶನ ನೀಡುವ ವೃತ್ತಿ ಶಿಕ್ಷಕರು ಮತ್ತಷ್ಟು ಅಧ್ಯಯನಾಶೀಲರಾಗಿ ಮಕ್ಕಳಿಗೆ ಹೆಚ್ಚಿನ ವೃತ್ತಿಗಳ ಅರಿವು ಮೂಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರೇಷ್ಮೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಬೈರಪ್ಪ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ಸಬರಮತಿ ಶಾಲೆಯ ಹಿರಿಯ ವೃತ್ತಿ ಶಿಕ್ಷಕ ಅನಂತ ಪದ್ಮನಾಭ್, ಹಲ್ಲಿನ ಪುಡಿ, ಫೆನಾಯಿಲ್, ವಾಷಿಂಗ್ ಪೌಡರ್ ಮತ್ತಿತ್ತಿತರ ಸಾಮಾಜಿಕ ಉಪಯುಕ್ತ ವಸ್ತುಗಳ ತಯಾರಿಕೆ ಕುರಿತು, ಚಿಕ್ಕತಿರುಪತಿಯ ವಿಶ್ವೇಶ್ವರಯ್ಯ ಔಷಧಿ ಸಸ್ಯಗಳ ಕುರಿತಂತೆ ತಿಳಿಸಿಕೊಟ್ಟರು.
ಕಾರ್ಯಾಗಾರದಲ್ಲಿ ವಿಷಯ ಪರೀಕ್ಷಕರಾದ ವೆಂಕಟಸ್ವಾಮಿ, ರಾಜಣ್ಣ, ಮಲ್ಲಿಕಾರ್ಜುನಾಚಾರಿ, ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ ಬಾಬು, ಮಾಜಿ ಅಧ್ಯಕ್ಷ ಪಿ. ಕೃಷ್ಣಪ್ಪ, ಹಾಲಿ ಉಪಾಧ್ಯಕ್ಷ ಸುರೇಂದ್ರನಾಥ್, ಕಾರ್ಯದರ್ಶಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು. ಕೃಷ್ಣಪ್ಪ ಸ್ವಾಗತಿಸಿ, ಮಾರ್ಕಂಡೇಯ ನಿರೂಪಿಸಿ, ವಂದಿಸಿದರು.