ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಸ್ಪತ್ರೆ ಪುನರಾರಂಭಕ್ಕೆ ಕಾರಮಂಗಲ ಗ್ರಾಮಸ್ಥರ ಆಗ್ರಹ

Vishwanath S
Updated On : 27 Aug 2013, 12:50 pm

ಬಂಗಾರಪೇಟೆ: ಕಳೆದ 5 ದಶಕಗಳಿಂದ ಕಾರಮಂಗಲ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಹಾಗೂ ಸಿಬ್ಬಂದಿ ಬಾರದೆ ಬಾಗಿಲು ಹಾಕಿರುವುದರಿಂದ ಆರೋಗ್ಯ ಕೇಂದ್ರ ಸುತ್ತಲು ಅನೈರ್ಮಲ್ಯ ತಾಂಡವವಾಡುತ್ತಿದೆ. ಕೂಡಲೇ ಮುಚ್ಚಿರುವ ಆರೋಗ್ಯ ಕೇಂದ್ರ ಮತ್ತೆ ಆರಂಭಿಸಬೇಕೆಂದು ಗ್ರಾಮಸ್ಥರು ಶಾಸಕ ನಾರಾಯಣಸ್ವಾಮಿಯ ಗಮನ ಸೆಳೆದರು.
ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರ ಸ್ಥಳದಲ್ಲೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಪರಿಹರಿಸಲು ಕೈಗೊಂಡಿರುವ ಗ್ರಾಮಸಭೆ ಸೋಮವಾರ ಹುಲಿಬೆಲೆ, ಐನೋರಹೊಸಹಳ್ಳಿ ಮತ್ತು ಸೂಲಿಕುಂಟೆ ಪಂಚಾಯ್ತಿಗಳಲ್ಲಿ ನಡೆಯಿತು.
ಈ ವೇಳೆ ಐನೋರಹೊಸಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಕಾರಮಂಗಲ ಗ್ರಾಮದಲ್ಲಿ ಸುಮಾರು 50 ವರ್ಷಗಳ ಹಿಂದೆ ಈ ಪ್ರದೇಶದ ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ಆರಂಭಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೆಲ ವರ್ಷಗಳಿಂದ ಮುಚ್ಚಲಾಗಿದೆ. ಇದರಿಂದಾಗಿ ಆರೋಗ್ಯ ಕೇಂದ್ರದಲ್ಲಿ ಗಿಡಗಂಟೆಗಳು ಬೆಳೆದು ಕಾಡು ಪ್ರದೇಶದಂತಹ ವಾತಾವರಣ ನಿರ್ಮಾಣವಾಗಿದೆ. ಗ್ರಾಮಸ್ಥರ ಆರೋಗ್ಯ ಕೈಕೊಟ್ಟರೆ ಪಟ್ಟಣ ಪ್ರದೇಶಕ್ಕೆ ನೂರಾರು ರು. ವೆಚ್ಚ ಮಾಡಿಕೊಂಡು ಹೋಗುವಂತಹ ದುಸ್ಥಿತಿ ಬಂದಿದೆ. ಮುಚ್ಚಿರುವ ಕೇಂದ್ರವನ್ನು ಸ್ವಚ್ಛಗೊಳಿಸಿ ಕಾಯಂ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಿ ಜನರ ಆರೋಗ್ಯ ರಕ್ಷಣೆ ಮಾಡಬೇಕೆಂದು ಗ್ರಾಮಸ್ಥರು ಶಾಸಕರ ಗಮನ ಸೆಳೆದರು.
ಶಾಸಕರು ಮಾಡಿದ ಮೂರು ಗ್ರಾಮಸಭೆಗಳಲ್ಲಿಯೂ ಕುಡಿಯುವ ನೀರು, ರಸ್ತೆ, ಪಿಂಚಣಿ, ಆಶ್ರಯ ಮನೆಗಳು ಮತ್ತು ಪಡಿತರ ಕಾರ್ಡುಗಳದ್ದೇ ಹೆಚ್ಚಿನ ಸಮಸ್ಯೆಗಳು ಕೇಳಿ ಬಂದವು. ಕೆಲವು ಕಡೆ ಸಮೃದ್ಧವಾಗಿ ನೀರಿದ್ದರೂ ವಾಟರ್ ಮ್ಯಾನ್ ರಾಜಕೀಯದಿಂದ ನೀರು ಪೋಲಾಗುತ್ತಿದೆ. ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ. ಇನ್ನು ಕೆಲವು ಕಡೆ ಖಾಸಗಿ ಬೋರ್ ಮಾಲೀಕರಿಂದ ಪಂಚಾಯ್ತಿಯವರು ನೀರು ಖರೀದಿ ಮಾಡಿದ್ದರೂ ಮಾಲಿಕರಿಗೆ ಹಣ ಪಾವತಿ ಮಾಡದ ಕಾರಣ ಅವರೂ ನೀರು ಪೂರೈಕೆ ಸ್ಥಗಿತಗೊಳಿಸಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಹೊಸ ಕೊಳವೆ ಬಾವಿ ಕೊರೆಸಿದರೂ ಬೆಸ್ಕಾಂ ಇಲಾಖೆ ಸಮಯಕ್ಕೆ ವಿದ್ಯುತ್ ಸಂಪರ್ಕ ಒದಗಿಸದ ಕಾರಣ ನೀರಿನ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ ಎಂದು ಗ್ರಾಮಸ್ಥರು ಕ್ಷೇತ್ರದ ದೊರೆ ಮುಂದೆ ಮೊರೆಯಿಟ್ಟರು.
ಗ್ರಾಮಸ್ಥರ ಎಲ್ಲ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಗ್ರಾಮಸಭೆಯ ಉದ್ದೇಶ ನಿಮ್ಮ ಸಮಸ್ಯೆಗಳನ್ನು ಹತ್ತಿರದಿಂದ ತಿಳಿದುಕೊಂಡು ತ್ವರಿತವಾಗಿ ಬಗೆಹರಿಸಲು ಎಲ್ಲ ಇಲಾಖೆ ಅಧಿಕಾರಿಗಳನ್ನು ಕರೆ ತಂದಿರುವೆ. ನಿಮ್ಮ ಸಮಸ್ಯೆಗಳನ್ನು ವಾರದೊಳಗೆ ಬಗೆಹರಿಸಲಿದ್ದಾರೆ ಎಂದು ಹೇಳಿ ಗ್ರಾಮಸ್ಥರಲ್ಲಿ ಆಶಾಭಾವನೆ ಮೂಡಿಸಿದರು. ಈ ಹಿಂದಿನ ಶಾಸಕರ ಅವಧಿಯಲ್ಲಿ ಆಡಳಿತ ಅವ್ಯವಸ್ಥೆಯಿಂದ ಕೂಡಿದ್ದು ಅದನ್ನು ಸರಿಪಡಿಸಲು ಕಾಲಾವಕಾಶ ಬೇಕಾಗಿದ್ದು ಹಂತ ಹಂತವಾಗಿ ತಾಲೂಕು ಆಡಳಿತವನ್ನು ಬದಲಾಯಿಸಿ ಜನರಿಗೆ ಆಡಳಿತ ಹತ್ತಿರವಾಗುವಂತೆ ಮಾಡುವೆ ಎಂದರು. ಸಭೆಯಲ್ಲಿ ತಾಪಂ ಅಧ್ಯಕ್ಷ ರೇಣುಕಾ, ಉಪಾಧ್ಯಕ್ಷ ಸಂಪಂಗಿರೆಡ್ಡಿ, ಬ್ಲಾಕ್ ಅಧ್ಯಕ್ಷರಾದ ಮಂಜುನಾಥ್, ಪಾರ್ಥಸಾರಥಿ, ಮುಖಂಡರಾದ ಕೆ.ಸಿ.ಗೋಪಾಲ್, ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement