ಜನ ಪ್ರತಿನಿಧಿಗಳ ಸಮಾವೇಶ ಶೀಘ್ರ
ಕೋಲಾರ: ನರೇಗಾ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಒಳಗೊಂಡ ಸಮಾವೇಶವನ್ನು ಶೀಘ್ರವೇ ಹಮ್ಮಿಕೊಂಡು ಉದ್ಯೋಗ ಮಿತ್ರ ಹಾಗೂ ಕಾಯಕ ಬಂಧು ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುವುದೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜುಲ್ಫಿಖಾರ್ ಉಲ್ಲಾ ತಿಳಿಸಿದರು. ಜಿ.ಪಂ.ನಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು 2013-14ನೇ ಸಾಲಿನಿಂದ ನಮ್ಮ ಹೊಲ-ನಮ್ಮ ದಾರಿ ಕಾರ್ಯಕ್ರಮವನ್ನು ಗ್ರಾಮೀಣ ಸರ್ವ ಋತು ಸಂಪರ್ಕ ಕಾಮಗಾರಿಯಡಿ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ ಎಂದರು. ಈ ಸಾಲಿನಲ್ಲಿ ಆಯವ್ಯಯದಲ್ಲಿ ಘೋಷಿಸಿದಂತೆ ನಮ್ಮ ಹೊಲ-ನಮ್ಮ ದಾರಿ ಕಾರ್ಯಕ್ರಮವನ್ನು ಉದ್ಯೋಗ ಖಾತ್ರಿಯಡಿ ಕೈಗೊಳ್ಳಲಾಗುತ್ತಿದೆ ಎಂದರು.
ವೈಯಕ್ತಿಕ ಫಲಾನುಭವಿಗಳಿಗೆ ಆದ್ಯತೆ: ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಕೋಲಾರ ಜಿಲ್ಲೆ ತೀರಾ ಹಿಂದುಳಿದಿದೆ. ಯೋಜನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ತೋಟಗಾರಿಕೆ ಜಲಾನಯನ ಇತ್ಯಾದಿ ಕಾಮಗಾರಿಗಳನ್ನು ಎಸ್ಸಿ ಎಸ್ಟಿ, ಸಣ್ಣ ಮತ್ತು ಅತೀ ಸಣ್ಣ ರೈತರು, ಇತರೆ ಅರ್ಹ ವೈಯಕ್ತಿಕ ಫಲಾನುಭವಿಗಳ ಜಮೀನುಗಳಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ನುಡಿದರು.
ಕೆರೆ ಪುನಶ್ಚೇತನ: ಜಿಲ್ಲೆಯಲ್ಲಿ 2 ಸಾವಿರ ಕೆರೆಗಳಿದೆ. ಸರ್ಕಾರದ ಆದೇಶದಂತೆ 156 ಗ್ರಾ.ಪಂಗೆ ಒಂದು ಕೆರೆ ಹಾಗೂ ಒಂದು ಕಲ್ಯಾಣಿ ಹಾಗೂ ಕುಂಟೆಯನ್ನು ಅಭಿವೃದ್ಧಿಗೊಳಿಸಲು ಉದ್ದೇಶಿಸಿದ್ದು, ಗ್ರಾಮ ಸಭೆಗಳಲ್ಲಿ ಅನುಮೋದನೆ ಪಡೆದು ಆ. 2ರಂದು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಭಜನಾ ಮಂಟಪ ಉದ್ಘಾಟನೆ
ಚಿಂತಾಮಣಿ: ತಾಲೂಕಿನ ಪುರಾಣ ಪ್ರಸಿದ್ಧ ಯಾತ್ರಾಸ್ಥಳ ಆಲಂಬಗಿರಿ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯ ಆವರಣದಲ್ಲಿ ಸುವ್ಯವಸ್ಥಿತ ಭಜನಾ ಮಂಟಪವನ್ನು ಕೈವಾರ ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಡಾ. ಎಂ.ಆರ್.ಜಯರಾಂರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಸರ್ವರೂ ಭಜನೆ ಮೂಲಕ ಭಗವಂತನ ಸಾಕ್ಷಾತ್ಕಾರ ಪಡೆಯಬಹುದು ಎಂದು ಕೈವಾರ ಯೋಗಿ ನಾರೇಯಣ ತಾತಯ್ಯನವರು ಹೇಳಿದ್ದಾರೆ. ತಾತಯ್ಯನವರು ನಾಲ್ಕು ಯುಗಗಳಲ್ಲಿಯೂ ಪರಮಾತ್ಮನ ನಾಮಸ್ಮರಣೆಯೇ ಶ್ರೇಷ್ಠ ಎಂದಿದ್ದಾರೆ. ಅದರಂತೆ ಕೈವಾರ ಯೋಗಿನಾರೇಯಣ ಯೋಗೀಂದ್ರರ ತತ್ವ, ಸಂದೇಶಗಳನ್ನು ಅನುಷ್ಠಾನ ಮಾಡಿಕೊಂಡು ಹೋಗುವುದೇ ನಮ್ಮ ಕಾರ್ಯ ಎಂದರು.
ಈ ಭಜನಾ ಮಂಟಪದಲ್ಲಿ ಪ್ರತಿನಿತ್ಯ ಸಂಜೆ 5 ರಿಂದ 6 ಗಂಟೆಯವರೆಗೆ ನಿರಂತರವಾಗಿ ಭಜನೆ, ನಾಮ ಸಂಕೀರ್ತನೆ ಏರ್ಪಡಿಸಲಾಗುತ್ತದೆ. ಭಕ್ತರು ಇದರ ಸದುಪಯೋಗವನ್ನು ಪಡೆಯಬೇಕು ಎಂದರು.
ವಿದ್ಯಾರ್ಥಿಗಳಿಗೆ ಕಾನೂನು ಜಾಗೃತಿ
ಗುಡಿಬಂಡೆ: ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ಪೊಲೀಸ್ ಇಲಾಖೆ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ, ವಾಹಿನಿ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ 2 ದಿನಗಳ ಕಾನೂನು ಸಾಕ್ಷರತಾ ರಥದ ಹಾಗೂ ಜನತಾ ನ್ಯಾಯಾಲಯ ಕಾರ್ಯಕ್ರಮ ಅಂಗವಾಗಿ ಕಾಲೇಜು ವಿದ್ಯಾ ರ್ಥಿಗಳಿಗೆ ಕಾನೂನು ಜಾಗೃತಿ ಎಂಬ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜೆ.ಎಂ.ಎಫ್.ಸಿ ನ್ಯಾಯಾಲಯದ ಕೆ.ವಿ. ಮಧುಸೂಧನ್ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಹಪಾಠಿಗಳಿಗೆ ರ್ಯಾಗಿಂಗ್ ಮಾಡುವುದು, ಮಾನಸಿಕ ದೈಹಿಕ ಕಿರುಕುಳ ನೀಡುವುದು ಅಪರಾಧವಾಗಿದ್ದು, ಭಾರತೀಯ ದಂಡ ಸಂಹಿತೆಯಡಿ ಅಪರಾಧಗಳಾಗಿದ್ದು, ಇಂತಹ ಅಪರಾಧಗಳಿಂದ ದೂರ ಉಳಿದಿ ಸೆರಮನೆ ಸೇರದೆ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಹೆಮ್ಮೆಯಿಂದ ಬಾಳಬೇಕೆಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಉನ್ನತಿ ವಿಶ್ವನಾಥ್ ಕಾಲೇಜು ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿದರು. 2007ರಲ್ಲಿ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಗಿದ್ದು, ಯಾವುದೇ ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ದೂರು ಸಲ್ಲಿಸಬಹುದೆಂದರು. ಕಾರ್ಯಾಗಾರದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಶಿವಕುಮಾರ್ , ವಕೀಲರ ಸಂಘದ ಅಧ್ಯಕ್ಷ ರಾಮನಾಥರೆಡ್ಡಿ, ವಕೀಲ ಗೋವಿಂದಪ್ಪ, ಕಾಲೇಜಿನ ಪ್ರಾಂಶುಪಾಲ ಎಲ್. ವಿಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಯೋಧ್ಯೆ ಪ್ರವೇಶ ನಿಷೇಧ ಖಂಡಿಸಿ ಪ್ರತಿಭಟನೆ
ಕೋಲಾರ: ಉತ್ತರ ಪ್ರದೇಶ ಸರ್ಕಾರವು ವಿಶ್ವ ಹಿಂದೂ ಪರಿಷತ್ತಿನ ಚೌರಾಸಿ ಕೋಸಿ ಪರಿಕ್ರಮ ಯಾತ್ರೆ ನಿಷೇಧಿಸಿರುವುದನ್ನು ಖಂಡಿಸಿ ನಗರದಲ್ಲಿ ಸೋಮವಾರ ಬಜರಂಗ ದಳದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ಕಾರಿ ಬಸ್ ನಿಲ್ದಾಣ ವೃತ್ತದಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ನ ಹತ್ತಾರು ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಘೋಷಣೆ ಕುಗಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ಈ ದೇಶದ ಬಹುಸಂಖ್ಯಾತ ಹಿಂದುಗಳ ಒತ್ತಾಸೆಯಾಗಿದೆ. ಉತ್ತರ ಪ್ರದೇಶ ಸರ್ಕಾರ ಹಿಂದೂ ಪರ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡಿದಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಜರಂಗ ದಳದ ಜಿಲ್ಲಾ ಸಂಚಾಲಕ ಬಾಬು, ಮುಖಂಡರಾದ ಬಾಲಾಜಿ, ಅಪ್ಪಿ, ಡಾ.ಶಿವಣ್ಣ, ಮುಕುಂದ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ,ಓಂಪ್ರಕಾಶ್, ರಾಮಚಂದ್ರಪ್ಪ,ತಿಮ್ಮರಾಯಪ್ಪ ಇನ್ನಿತರರು ಇದ್ದರು.