ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್ಕಾರದ 'ನೂರು ದಿನ, ನೂರಾರು ನಿರ್ಣಯ' ಬಿಡುಗಡೆ

Vishwanath S
Updated On : 27 Aug 2013, 12:49 pm

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು ನೂರು ದಿನಗಳು ಕಳೆದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಸಚಿವ ದಿನೇಶ್ ಗುಂಡೂರಾವ್‌ರವರು ಸರ್ಕಾರ ಸಾಧನೆಯ ನೂರು ದಿನ, ನೂರಾರು ನಿರ್ಣಯ ಕಿರುಹೊತ್ತಗೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಿಡುಗಡೆ ಮಾಡಿದರು.  
ರಾಜ್ಯದಲ್ಲಿ ಆಡಳಿತಕ್ಕೆ ಬರುವ ಮುಂಚೆ ಜನರಿಗೆ ಭರವಸೆ ನೀಡಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತದ ಜತೆಗೆ ಮಹತ್ವಾಕಾಂಕ್ಷೆ ಯೋಜನೆಗಳನ್ನು ಘೋಷಣೆ ಮಾಡಿ ಜಾರಿಗೆ ತರುವ ಮೂಲಕ ಜನಪರ ಸರ್ಕಾರ ಎನಿಸಿಕೊಂಡಿದೆ ಎಂದರು.
ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಕಡುಬಡವರಿಗಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು ರಾಜ್ಯದ 98 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಕೆ.ಜಿಗೆ 1 ರು. ನಂತೆ 30 ಕೆ.ಜಿ ಅಕ್ಕಿಯನ್ನು ವಿತರಿಸುತ್ತಿರುವುದು ಮೆಚ್ಚುವಂತಹ ವಿಷಯ. ಪ್ರಸ್ತುತ ಬೇರೆ ರಾಜ್ಯಗಳಿಂದ ಅಕ್ಕಿಯನ್ನು ಖರೀದಿಸಿ ವಿತರಣೆ ಮಾಡುತ್ತಿದ್ದು ಹೆಚ್ಚಿಗೆ ರಾಗಿ, ಜೋಳವನ್ನು ಬೆಳೆಯುವ ಇಲ್ಲಿನ ರೈತರಿಗೆ ಲಾಭ ಸಿಗುವಂತಾಗಲು ಮುಂದಿನ ದಿನಗಳಲ್ಲಿ ಪಡಿತರ ಪದಾರ್ಥವಾಗಿ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಜನರಿಗೆ ಜೋಳ ಮತ್ತು ರಾಗಿಯನ್ನು, ದಕ್ಷಿಣ ಕನ್ನಡದ ಭಾಗದವರಿಗೆ ಕುಚಲಕ್ಕಿಯನ್ನು ನೀಡಲು ನಿರ್ಧರಿಸಲಾಗಿದೆ. ರಾಗಿ, ಜೋಳ ಬೆಳೆಯನ್ನು ಬೆಳೆಯಲು ಪ್ರೋತ್ಸಾಹ ನೀಡಿ, ಸರ್ಕಾರ ಕೊಂಡುಕೊಳ್ಳಲಿದೆ ಎಂದರು.
ಋಣ ಮುಕ್ತ ಭಾಗ್ಯ ಯೋಜನೆಯಡಿ ದೇವರಾಜು ಅರಸು, ಅಂಬೇಡ್ಕರ್ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ಸಾಲ ಪಡೆದಿದ್ದ 10.26 ಲಕ್ಷ ಫಲಾನುಭವಿಗಳ ಸಾಲ, 20 ಲಕ್ಷ ಭಾಗ್ಯ ಜ್ಯೋತಿ ಫಲಾನುಭವಿಗಳ ವಿದ್ಯುತ್ ಬಿಲ್ ಬಾಕಿ 268 ಕೋಟಿ ಮನ್ನಾ ಮಾಡಲಾಗಿದೆ. ಪ್ರಮುಖವಾಗಿ ಹಾಲು ಉತ್ಪಾದಿಸುವ ರೈತರಿಗೆ 2 ರುಗಳಿಂದ 4 ರುಗಳಿಗೆ ಪ್ರೋತ್ಸಾಹ ಧನವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ನೆನಪಿಗಾಗಿ ಸಾಮರ್ಥ್ಯ ತರಬೇತಿ ಕೇಂದ್ರ ನಿರ್ಮಾಣಕ್ಕಾಗಿ ಚಿಕ್ಕಬಳ್ಳಾಪುರ ತಾಲೂಕಿನ ಅಂಗಟ್ಟ ಗ್ರಾಮದಲ್ಲಿ 10 ಎಕರೆ ಜಮೀನನ್ನು ಮತ್ತು ಜಿಲ್ಲಾ ಕೇಂದ್ರದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ 2.15 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ 824.64 ಲಕ್ಷ ಅನುದಾನ ಮಂಜೂರಾಗಿದ್ದು 446 ಲಕ್ಷ ರು. ಬಿಡುಗಡೆಯಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳ ವಸತಿ ಗೃಹಗಳಿಗೆ 5 ಕೋಟಿ ಟೆಂಡರ್‌ಗೆ ಅನುಮೋದನೆ ನೀಡಿ 75 ಲಕ್ಷ, ಜಿಲ್ಲಾಡಳಿತದ ಭವನದ ಪೀಠೋಪಕರಣಗಳಿಗೆ 50 ಲಕ್ಷ, ರೈತರಿಗೆ ಪ್ರೋತ್ಸಾಹ ಧನ ನೀಡಲು ಇನ್‌ಪುಟ್ ಸಬ್ಸಿಡಿಯಲ್ಲಿ 2011-12ನೇ ಸಾಲಿನಲ್ಲಿ 9.47 ಕೋಟಿ ಮತ್ತು 2012-13ರಲ್ಲಿ 7.40 ಕೋಟಿ ಸೇರಿದಂತೆ 16.87 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿಶಾಲ್.ಆರ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

ಸಚಿವರ ಮುಂದೆ ಅನ್ನಭಾಗ್ಯ ಫಲಾನುಭವಿಗಳ ಅಳಲು
ಚಿಕ್ಕಬಳ್ಳಾಪುರ:
ರಾಜ್ಯದಲ್ಲಿ ಬಿಪಿಎಲ್ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಕೆ.ಜಿ.ಗೆ 1 ರು.ನಂತೆ ಗರಿಷ್ಠ 30 ಕೆ.ಜಿ.ಅಕ್ಕಿ ನೀಡುತ್ತಿರುವುದಕ್ಕೆ ಆಹಾರ, ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆಯ ಸಚಿವ ದಿನೇಶ್ ಗುಂಡೂ ರಾವ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರ ನಡುವೆ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಆಗುತ್ತಿರುವ ಮೋಸದ ಬಗ್ಗೆ ಗಮನ ಸೆಳೆದು ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜ್ಯ ಸರ್ಕಾರದ ನೂರು ದಿನಗಳ ಸಾಧನೆಯ ನೂರು ದಿನ ನೂರಾರು ನಿರ್ಣಯ ಕಿರುಹೊತ್ತಿಗೆ ಬಿಡುಗಡೆ ಮಾಡುತ್ತಿದ್ದ ಸಂದರ್ಭದಲ್ಲಿ ಆಗಮಿಸಿದ ಜನರು ಸಚಿವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲೂಕು ವ್ಯಾಪ್ತಿ ಸೇರಿದಂತೆ ಹಲವೆಡೆ ಪಡಿತರ ಪದಾರ್ಥಗಳನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ. ವಾಸ್ತವವಾಗಿ 1 ರು.ನಂತೆ 30 ಕೆ.ಜಿ. ಅಕ್ಕಿ ನೀಡಬೇಕಾದ್ದಲ್ಲಿ 27 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿದೆ. ಅಕ್ಕಿಯನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗಿ ತೂಕ ಹಾಕಿಸಿದಾಗ ಅದು 26 ಕೆ.ಜಿ.ಇರುತ್ತದೆ. ಹೀಗೆ ತೂಕದಲ್ಲೂ ಮೋಸ ಮಾಡಲಾಗುತ್ತಿದೆ.
ಇಷ್ಟೆಲ್ಲಾ ಆಗುತ್ತಿದ್ದರೂ ಕ್ರಮ ಕೈಗೊಳ್ಳುವವರೇ ಇಲ್ಲ. ಜನರೇನಾದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಅನ್ಯಾಯವನ್ನು ಪ್ರಶ್ನಿಸಿದರೆ ಮಾಲೀಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಬರುತ್ತಾರೆ. ಬಹಳಷ್ಟು ಬಾರಿ ದೂರು ನೀಡಿದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಧಮಕಿ: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪದಾರ್ಥಗಳ ಜತೆಗೆ ಖಾಸಗೀ ಕಂಪನಿಯ ಎಣ್ಣೆ, ಸೋಪು ಸೇರಿದಂತೆ ಬೇರೆ ಬೇರೆ ಪದಾರ್ಥಗಳನ್ನು ದುಬಾರಿ ಬೆಲೆಗೆ ಕೊಡಲಾಗುತ್ತಿದೆ. ಎರಡ್ಮೂರು ದಿನ ಬಾಗಿಲು ತೆಗೆಯುವ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಪದಾರ್ಥವನ್ನು ಕೇಳಲು ಹೋದರೆ ಪಡಿತರ ಪದಾರ್ಥ ಬಂದಿಲ್ಲ, ಹೊಸ ಕಾರ್ಡುಗಳಿಗೂ ನೀಡಬೇಕಾಗಿರುವುದರಿಂದ ಕಡಿಮೆ ಪ್ರಮಾಣದಲ್ಲಿ ಪದಾರ್ಥಗಳನ್ನು ತೆಗೆದುಕೊಂಡು ಹೋಗುವಂತೆ ಧಮಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕರಿಂದ ದೂರುಗಳನ್ನು ಆಲಿಸಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು. ಅಲ್ಲದೇ ನಿಯಮಬಾಹಿರವಾಗಿ ನಡೆದುಕೊಳ್ಳುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಜನರನ್ನು ಸಮಾಧಾನಪಡಿಸಿದರು.

'ಟಿಎಪಿಸಿಎಂಸ್‌ಗೆ ಕಮಿಷನ್ ಹೆಚ್ಚಳಕ್ಕೆ ಚರ್ಚೆ'
ಚಿಕ್ಕಬಳ್ಳಾಪುರ:
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳಿಗೆ ಪ್ರಸ್ತುತ ಪಡಿತರ ಪದಾರ್ಥಗಳಿಗೆ ನೀಡಲಾಗುತ್ತಿರುವ ಕಮಿಷನ್ ದರ ಹೆಚ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳು ಅಕ್ಕಿ, ಗೋಧಿ, ಸಕ್ಕರೆಯನ್ನು ದಾಸ್ತಾನು ಮಾಡಿಕೊಂಡು ನ್ಯಾಯಬೆಲೆ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದು, ಪ್ರಸ್ತುತ 'ಅನ್ನಭಾಗ್ಯ' ಯೋಜನೆಯಿಂದ ಪಡಿತರ ಪದಾರ್ಥಗಳ ದಾಸ್ತಾನು ಪ್ರಮಾಣ ಹೆಚ್ಚಾಗಿ ಬಂಡವಾಳ ಹೂಡಿಕೆಯೂ ಜಾಸ್ತಿಯಾಗಿದೆ. ಇದರಿಂದ ನಿರ್ವಹಣೆಗೆ ತೊಂದರೆಯಾಗಿ ಆರ್ಥಿಕ ಸಮಸ್ಯೆ ಎದುರಿಸುವಂತಹ ಪರಿಸ್ಥಿತಿ ಉದ್ಭವಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ನಿಟ್ಟಿನಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಕಮಿಷನ್ ದರವನ್ನು ಹೆಚ್ಚಿಸಲು ಚಿಂತಿಸಿ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಇನ್ನು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳಿಗೆ ಪಡಿತರ ಪದಾರ್ಥಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡಲು ತೊಂದರೆಯಾದರೆ, ನಮ್ಮ ಕೈಯಲ್ಲಿ ಆಗಲ್ಲ ಎಂದು ತಿಳಿಸಿದರೆ ಕರ್ನಾಟಕ ಆಹಾರ ನಿಗಮದಿಂದ ಪಡಿತರ ಪದಾರ್ಥಗಳನ್ನು ನೇರವಾಗಿ ಸರಬರಾಜು ಮಾಡಲಾಗುವುದು. ಅಲ್ಲದೇ ಪಡಿತರ ಪದಾರ್ಥಗಳನ್ನು ನಿಗಮದ ಗೋದಾಮಿನಲ್ಲಿ ದಾಸ್ತಾನು ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement