ಹಿರಿಯ ಭದ್ರತಾಧಿಕಾರಿ ಆನಂದ್ ಸಿಂಗ್ ಸೆರೆ
ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿಯ ಮೈಸೂರು ಮಿಲ್‌ನಲ್ಲಿ ಚಿನ್ನದ ಅದಿರು ಕಳವು ಮಾಡಲು ಆರೋಪಿಗಳಿಂದ ಹಣವನ್ನು ಪಡೆದು ಕಳವಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಬಿಜಿಎಂಎಲ್‌ನ ಹಿರಿಯ ಭದ್ರತಾಧಿಕಾರಿ (ಸಿಎಸ್‌ಓ) ಆನಂದ್‌ಸಿಂಗ್ ರಾವತ್‌ನನ್ನು ಮಾರಿಕುಪ್ಪಂ ಪೊಲೀಸರು ಸೋಮವಾರ ಮುಂಜಾನೆ 5 ಗಂಟೆಯಲ್ಲಿ ಬಿಜಿಎಂಎಲ್ ವಸತಿ ಗೃಹದಲ್ಲಿ ಬಂಧಿಸಿದ್ದಾರೆ.
ಕಳೆದ 16 ರಂದು ಶುಕ್ರವಾರ ಮಧ್ಯರಾತ್ರಿ ಬಿಜಿಎಂಎಲ್‌ನ ಮೈಸೂರು ಮಿಲ್‌ನೊಳಗೆ ಚಿನ್ನ ಮಿಶ್ರಿತ ಮಣ್ಣು ಕಳವು ಮಾಡಲು ಯತ್ನಿಸಿದ ನಾಲ್ವರು ಬಿಜಿಎಂಎಲ್ ಭದ್ರತಾ ಸಿಬ್ಬಂದಿ ಸೇರಿದಂತೆ 14 ಮಂದಿ ಆರೋಪಿಗಳನ್ನು ಪೊಲೀಸ್ ಉಪರಕ್ಷಣಾಧಿಕಾರಿ ಎಚ್.ಪಿ.ರಾಜಣ್ಣ ಅವರ ತಂಡ ದಾಳಿ ನಡೆಸಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸಲು ಎಸ್ಪಿ ಡಾ.ರೋಹಿಣಿಕಟೋಚ್ ಸೆಪಟ್ ಅವರು ಉಪರಕ್ಷಣಾಧಿಕಾರಿ ಎಚ್.ಪಿ.ರಾಜಣ್ಣ ಅವರಿಗೆ ವಹಿಸಿದ್ದರು. ತನಿಖೆಯನ್ನು ಚುರುಕುಗೊಳಿಸಿದ ಅವರು ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಮುತ್ತುಕುಮಾರ್ ತಂಡದವರಿಂದ ಬಿಜಿಎಂಎಲ್ ಮೈಸೂರು ಮಿಲ್‌ನಲ್ಲಿ ಕಳವು ಮಾಡಲು ಬಿಜಿಎಂಎಲ್‌ನ ಹಿರಿಯ ಭದ್ರತಾಧಿಕಾರಿ ಆನಂದ್‌ಸಿಂಗ್ ರಾವತ್ 50 ಸಾವಿರ ಹಣವನ್ನು ಪಡೆದುಕೊಂಡಿದ್ದು ಮಾರಿಕುಪ್ಪಂ ಠಾಣಾ ವೃತ್ತ ನಿರೀಕ್ಷಕರೊಂದಿಗೆ ಮೊಬೈಲ್ ಮೂಲಕ ಮಾತುಕತೆ ನಡೆಸಿ ಕಳವಿಗೆ ಸಹಕರಿಸಿದ ಆರೋಪದ ಮೇರೆಗೆ ಅವರನ್ನು ಪೊಲೀಸರು ಬಂಧಿಸಿ ಸಂಜೆ ಕೆಜಿಎಫ್ ಸಿವಿಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಹಿರಿಯ ನ್ಯಾಯಾಧೀಶರಾದ ಬಸವರಾಜ್ ಅವರು ಆ.31ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಆದೇಶಿಸಿದ್ದಾರೆ.
ಆನಂದ್‌ಸಿಂಗ್ ರಾವತ್ ಅವರ ಮನೆಯನ್ನು ಪರಿಶೀಲಿಸಿದ ಪೊಲೀಸರು 24 ಸಾವಿರ ನಗದು ವಶಪಡಿಸಿಕೊಂಡಿರುವುದಾಗಿ ಉಪರಕ್ಷಣಾಧಿಕಾರಿ ಹೆಚ್.ಪಿ.ರಾಜಣ್ಣ ತಿಳಿಸಿದ್ದಾರೆ. ಅಲ್ಲದೆ ಬಿಜಿಎಂಎಲ್ ಚಿನ್ನದ ಅದಿರು ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಂದ ಹಣ ಪಡೆದು ಕಳವಿಗೆ ಸಹಕರಿಸಿದ ಮಾರಿಕುಪ್ಪಂ ಪೊಲೀಸ್ ಠಾಣಾ ವೃತ್ತ ನಿರೀಕ್ಷಕರನ್ನು ಸಹ ವಿಚಾರಣೆಗೆ ಒಳಪಡಿಸಿ ಬಂಧಿಸುವ ಸಾಧ್ಯತೆಗಳಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದ್ದು ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಮುತ್ತುಕುಮಾರ್ ಸೇರಿದಂತೆ ಇನ್ನಿತರೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿ ಆನಂದ್ ಸಿಂಗ್ ರಾವತ್ ಸೇನೆಯಲ್ಲಿ ಸೆಕೆಂಡ್ ಇನ್ ಕಮಾಂಡೆಂಟ್ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದು, ಕೇಂದ್ರ ಸರ್ಕಾರ ಕಳೆದ ಒಂದು ವರ್ಷದ ಹಿಂದೆ ಕೆಜಿಎಫ್‌ನ ಬಿಜಿಎಂಎಲ್ ಚಿನ್ನದ ಗಣಿಯಲ್ಲಿ ಹೆಚ್ಚುವರಿ ಭದ್ರತಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು ಎಂದು ಹೇಳಲಾಗಿದೆ.
ಬಿಜಿಎಂಎಲ್ ಚಿನ್ನದ ಗಣಿ 2001ರಲ್ಲಿ ಮುಚ್ಚಿದ ನಂತರ ಬಿಜಿಎಂಎಲ್‌ನ ಮೈಸೂರು ಮಿಲ್ ಹಾಗೂ ನಂದಿ ದುರ್ಗ ಮಿಲ್‌ನಲ್ಲಿ ನಾಲ್ಕೈದು ಗ್ಯಾಂಗ್‌ಗಳು ಹಾಗೂ ಕಳ್ಳರ ಗುಂಪಿನ ನಾಯಕರೊಂದಿಗೆ ಲಕ್ಷಾಂತರ ಹಣವನ್ನು ಪಡೆದು ಬಿಜಿಎಂಎಲ್ ಭದ್ರತಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಶಾಮೀಲಾಗಿ ನಿರಂತರವಾಗಿ ಬಿಜಿಎಂಎಲ್ ಆಸ್ತಿಯನ್ನು ಕಳವು ನಡೆಸುಕೊಂಡು ಬರುತ್ತಿತ್ತು ಎನ್ನಲಾಗಿದೆ. ಆದರೆ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಯೂ ಕೇಂದ್ರ ಸರ್ಕಾರದ ಗಣಿ ಸಚಿವಾಲಯಕ್ಕಾಗಲೀ ಅಥವಾ ಪೊಲೀಸ್ ಅಧಿಕಾರಿಗಳಿಗಾಗಲೀ ದೂರನ್ನು ನೀಡುತ್ತಿರಲಿಲ್ಲ. ಒಂದು ವೇಳೆ ಕಳವಿನ ಬಗ್ಗೆ ವಿಚಾರಿಸಿದಾಗ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಜಾರಿಕೊಳ್ಳುತ್ತಿದ್ದರು.
ಕಳೆದ 16 ರಂದು ಮಧ್ಯರಾತ್ರಿ ಚಿನ್ನದ ಗಣಿ ಮೈಸೂರು ಮಿಲ್‌ನೊಳಗೆ ಕಳವಿಗೆ ಯತ್ನಿಸಿದ ಕಳ್ಳರನ್ನು ಪೊಲೀಸರು ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆ ಚಿನ್ನದ ಗಣಿಯಲ್ಲಿ ಕಳವು ಮಾಡುತ್ತಿದ್ದ ಕಳ್ಳರ ಗುಂಪುಗಳು ಮತ್ತು ಅವರ ನಾಯಕರು ಅಂದಿನಿಂದ ನಾಪತ್ತೆಯಾಗಿರುವುದು ಕೆಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.