ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಚಿಂತಾಮಣಿ: ಕರಿ ಜಾಲಿ ಮರಗಳ ಹರಾಜು ಪ್ರಕ್ರಿಯೆಯಿಂದ ಬಂದ ಆದಾಯ ಮೊತ್ತವನ್ನು ಕೋನಪ್ಪಲ್ಲಿ ಪಂಚಾಯ್ತಿಗೆ ನಿಯಮಾನುಸಾರ ಇದುವರೆಗೂ ನೀಡದೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ ವಿಭಾಗ) ನೀಡದೆ ಇರುವ ಬಗ್ಗೆ ಪಂಚಾಯ್ತಿಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.
ಚಿಂತಾಮಣಿ ತಾಲೂಕಿನ ಕೋನಪ್ಪಲ್ಲಿ ಗ್ರಾಮ ಪಂಚಾಯ್ತಿಗೆ ಸೇರಿರುವ ಬೊಮ್ಮನಕೆರೆ ಹಾಗೂ ನಾಯನಹಳ್ಳಿ ಗ್ರಾಮದ ನಾಯನಕೆರೆ ಅಂಗಳದಲ್ಲಿ ಕರಿಜಾಲಿ ಮರಗಳ ಬಹಿರಂಗ ಹರಾಜನ್ನು ಕಳೆದ ಜೂನನ್ತಿಂಗಳ 20 ರಂದು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಮತ್ತು ಚಿಕ್ಕಬಳ್ಳಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ ವಿಭಾಗ) ಸಮ್ಮುಖದಲ್ಲಿ ಬಹಿರಂಗ ಹರಾಜು ನಡೆದಿರುತ್ತದೆ.
ಹರಾಜಿನಲ್ಲಿ ಯಶಸ್ವಿಯಾದ ಬಿಡ್ಡುದಾರರು ಮೊಬಲಗಿನಲ್ಲಿ ಪೂರ್ಣ ಹಣ ಮತ್ತು ಅರಣ್ಯ ಅಭಿವೃದ್ಧಿ ತೆರಿಗೆ, ವ್ಯಾಟ್, ಐ.ಟಿ. ಮತ್ತು ಸೆಸ್ ಐ.ಟಿ ಹಣವನ್ನು ಪಾವತಿ ಮಾಡಿರುತ್ತಾರೆ. ನಾಯನಹಳ್ಳಿ ಮತ್ತು ಕೋನಪ್ಪಲ್ಲಿ ಕರಿ ಜಾಲಿ ಮರಗಳ ಹರಾಜು ಸವಾಲಿನಲ್ಲಿ ಬಂದ ಒಟ್ಟು ಹಣ 16 ಲಕ್ಷ 50 ಸಾವಿರ ರೂಪಾಯಿಗಳು ಆಗಿರುತ್ತದೆ.
ಗ್ರಾಮಸ್ಥರ ಅಸಮಾಧಾನ: ಸದರಿ ಈ ವಿಷಯವಾಗಿ ಜೂ.11 ರಂದು ನಡೆದ ಗ್ರಾಮ ಸಭೆ ಮತ್ತು ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿ ಅಭಿವೃದ್ಧಿ ನಿಧಿ ಕೋರಿ ಪತ್ರ ಬರೆದರೂ ಸಹ ಇದುವರೆಗೂ ಹಣ ನೀಡದೆ ಅಧಿಕಾರಿಗಳು ತೊಂದರೆ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಆಡಳಿತ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮ ಪಂಚಾಯ್ತಿಗೆ ನೀಡುವ ಅಭಿವೃದ್ಧಿ ಹಣ ನೀಡಿ ಪಂಚಾಯ್ತಿ ಅಭಿವೃದ್ಧಿಗೆ ಸಹಕರಿಸಬೇಕೆಂದು ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.