ಇಂದು ವಿಶೇಷ ಜಾತ್ರೆ ಪ್ರಯುಕ್ತ ಕಾರ್ಯಕ್ರಮ
ಮಾಲೂರು ಮಾಲೂರು ತಾಲೂಕು ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಕರ್ನಾಟಕ, ಆಂಧ್ರ, ತಮಿಳುನಾಡುಗಳಿಂದ ಅಸಂಖ್ಯಾತ ಭಕ್ತಾದಿಗಳು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸುತ್ತಾರೆ. ಈ ದೇವಾಲಯದಲ್ಲಿ ಶ್ರಾವಣ ಮಾಸದಲ್ಲಿ ವಿಶೇಷ ಜಾತ್ರೆ ನಡೆಯುತ್ತದೆ. ಇದೇ ಆಗಸ್ಟ್ 31ರಂದು ನಾಲ್ಕನೇ ಶ್ರಾವಣ ಶನಿವಾರವಾಗಿದ್ದು ಈ ಜಾತ್ರಾ ನಿಮಿತ್ತ ದೇವರಿಗೆ ಬೆಳಗ್ಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರವಿರುತ್ತದೆ. ಮಾಲೂರು ಕ್ಷೇತ್ರದ ಶಾಸಕ ಕೆ.ಎಸ್. ಮಂಜುನಾಥ್ರಿಂದ ಭಕ್ತಾದಿಗಳಿಗೆ ಸಿಹಿ ಹಂಚಿಕೆ ಇರುತ್ತದೆ. ಮಾಲೂರಿನ ಉದ್ಯಮಿ ಡಿ.ಟಿ. ಪುಟ್ಟಪ್ಪರವರಿಂದ ಪ್ರಸಾದ ಹಂಚಿಕೆ ವ್ಯವಸ್ಥೆಯಿರುತ್ತದೆ. ದೇವರಿಗೆ ಹೂವಿನ ಅಲಂಕಾರಕ್ಕೆ ಬೇಕಾಗುವ ಹೂವುಗಳನ್ನು ಬೆಂಗಳೂರಿನ ಶ್ರೀ ಮುದ್ದಪ್ಪ ಮತ್ತು ಮಕ್ಕಳು ಸರಬರಾಜು ಮಾಡಿರುತ್ತಾರೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಹಾಗೂ ಸುಸಜ್ಜಿತವಾದ ಸರತಿ ಸಾಲಿನ ವ್ಯವಸ್ಥೆಯನ್ನು ದೇವಾಲಯ ವತಿಯಿಂದ ಏರ್ಪಡಿಸಲಾಗಿರುತ್ತದೆ.
ನವಜಾತ ಹೆಣ್ಣು ಶಿಶು ಅಪಹರಣ
ಗೌರಿಬಿದನೂರು: ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನವಜಾತ ಹೆಣ್ಣು ಶಿಶುವೊಂದನ್ನು ಅಪಹರಿಸಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಜೋಗಿಹಳ್ಳಿ ಗ್ರಾಮದ ಶಿವಕುಮಾರ್ ಎಂಬುವರ ಪತ್ನಿ ಮಮತಾ(25). ತನ್ನ ತವರು ಆಲಗಾನಹಳ್ಳಿಗೆ ಹೆರಿಗೆಗಾಗಿ ಬಂದಿದ್ದರು. ಗುರುವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಮಮತಾ ಅವರಿಗೆ ಸಾಮಾನ್ಯ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಾತ್ರಿ ಪಾಳಿಯಲ್ಲಿದ್ದ ಶುಶ್ರೂಷಕಿಯರಾದ ಶಿವಮ್ಮ, ಸರಸ್ವತಮ್ಮ ಶಿಶುವನ್ನು ತಾಯಿ ಸಂಬಂಧಕರಿಗೆ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಸಂಬಂಧ ಶಿವಕುಮಾರ್ ದೂರಿನ ಅನ್ವಯ ಇಲ್ಲಿನ ಪುರಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇಂದು ಮೊಯ್ಲಿ ಅಹವಾಲು ಸ್ವೀಕಾರ
ಚಿಕ್ಕಬಳ್ಳಾಪುರ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಆ.31 ರಂದು ಜಿಲ್ಲೆಗೆ ಭೇಟಿ ನೀಡಲಿದ್ದು ಬೆಳಗ್ಗೆ 9.45 ಕ್ಕೆ ಚಿಕ್ಕಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ನಂತರ 10.30 ಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಖ್ಠಿಛ್ಡಟಛ ಈಜಟಿಡಿಜ್ಠ ನ ಉದ್ಘಾಟನೆ ಮತ್ತು ತುಮಕನಹಳ್ಳಿಯ ಡಿ.ಪ್ಲೋರೈಡೇಶನ್ ಪ್ಲಾಂಟ್ನ ಉದ್ಘಾಟನೆ ಮತ್ತು ನಗರದ ಅಂಬೇಡ್ಕರ್ ಭವನದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.15 ಕ್ಕೆ ಬಾಗೇಪಲ್ಲಿಯಲ್ಲಿ ಆರ್.ಇ.ಸಿ. ಏರ್ಪಡಿಸಿರುವ ಇಕೋಪಾರ್ಕಿನ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸುವರ್ಣ ಗ್ರಾಮ ಯೋಜನೆಗೆ ಚಾಲನೆ
ಕೋಲಾರ: ತಾಲೂಕಿನ ದೊಡ್ಡವಲ್ಲಬ್ಬಿ ಗ್ರಾಮದಲ್ಲಿ ರು. 21 ಲಕ್ಷ ವೆಚ್ಚದ ಸುವರ್ಣ ಗ್ರಾಮ ಯೋಜನೆಗೆ ಶಾಸಕ ವರ್ತೂರ್ ಪ್ರಕಾಶ್ ಶುಕ್ರವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ತಾವು ಮೊದಲ ಬಾರಿಗೆ ಶಾಸಕನಾದ ಅವಧಿಯಲ್ಲೇ ಕೋಟ್ಯಂತರ ರುಪಾಯಿ. ವೆಚ್ಚದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಮಾತ್ರವಲ್ಲ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ನಿವಾರಣೆಗೆ ಆದ್ಯತೆ ನೀಡಿದ್ದು, ಈ ಬಾರಿಯೂ ಮತ್ತಷ್ಟು ಉತ್ಸಾಹದಿಂದ ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸುದಾಗಿ ತಿಳಿಸಿದರು. ಬೆಗ್ಲಿ ಪ್ರಕಾಶ್,ಪಿಎಲ್ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷೆ ಮಾಲಾ ರಾಜೇಂದ್ರ, ಗ್ರಾಪಂ ಸದಸ್ಯ ಮೋಹನ್, ಸ್ಥಳೀಯರಾದ ರವಿಕುಮಾರ್, ಚನ್ನಕೇಶವ, ಮುನಿಯಪ್ಪ, ಅಶ್ವಥಪ್ಪ, ನಾರಾಯಣಸ್ವಾಮಿ, ನಾಗಾರ್ಜುನ್, ಮೂರ್ತಿ, ಪ್ರತಾಪ್ ಸಿಂಗ್, ದೇವರಾಜ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಲ್ಲೆ ಅಪರಾಧಿಗೆ 1 ವರ್ಷ ಜೈಲು
ಶಿಡ್ಲಘಟ್ಟ: 2012ರಲ್ಲಿ ಕನ್ನಮಂಗಲದಲ್ಲಿ ಕ್ಷುಲಕ ಕಾರಣಕ್ಕಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಂಎಫ್ಸಿ ನ್ಯಾಯಾಲಯವು ಅಪರಾಧಿಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಗ್ರಾಮಾಂತರ ಠಾಣೆ ವ್ಯಾಪ್ತಿಯ ಕನ್ನಮಂಗಲದಲ್ಲಿ ಮುನಿಕೃಷ್ಣ ಎಂಬಾತ ಕ್ಷುಲ್ಲಕ ಕಾರಣಕ್ಕಾಗಿ ವೆಂಕಟೇಶಪ್ಪ ಎಂಬುವರ ಮೇಲೆ ಹಲ್ಲೆ ಮಾಡಿ ಕೈ ಮುರಿದು ಹಾಕಿರುವುದರ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ನಿಟ್ಟಿನಲ್ಲಿ ಜೆಎಂಎಫ್ಸಿ ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿ ಮುನಿಕೃಷ್ಣನಿಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರು. 5 ಸಾವಿರ ದಂಡ ವಿಧಿಸಿದ್ದು, ದಂಡ ಕಟ್ಟದಿದ್ದ ಪಕ್ಷದಲ್ಲಿ 3 ತಿಂಗಳು ಹೆಚ್ಚುವರಿ ಶಿಕ್ಷೆ ವಿಧಿಸಿದೆ. ಗಾಯಾಳು ವೆಂಕಟೇಸ್ಗೆ ಪರಿಹಾರವಾಗಿ ರು. 3 ಸಾವಿರ ಪರಿಹಾರ ನೀಡಬೇಕೆಂದು ಆದೇಶ ಹೊರಡಿಸಿದೆ.
ದ್ವಿಚಕ್ರ ವಾಹನ ಸವಾರನಿಗೆ ಗಾಯ
ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮರದ ಕೊಂಬೆ ಮೇಲೆ ಬಿದ್ದು ವಾಹನ ಸವಾರನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಅಣಕನೂರು ಬಳಿ ಸಂಭವಿಸಿದೆ. ಗಾಯಾಳುವನ್ನು ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದ ಅಸ್ಲಾಂ (28) ಎಂದು ಗುರುತಿಸಲಾಗಿದೆ. ಶಿಡ್ಲಘಟ್ಟ ಕಡೆಯಿಂದ ಚಿಕ್ಕಬಳ್ಳಾಪುರ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿದ್ದ ಮರದ ಕೊಂಬೆ ಬಿದ್ದಿದ್ದು, ಇದರಿಂದ ಅಸ್ಲಾಂ ತೀವ್ರವಾಗಿ ಪೆಟ್ಟು ತಿಂದು ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳಪೆ ಕಾಮಗಾರಿ; ಆಕ್ರೋಶ
ಶಿಡ್ಲಘಟ್ಟ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಕಳಪೆ ಕಾಮಗಾರಿಯಿಂದಾಗಿ ಕಂಬಕ್ಕೆ ಅಂಟಿಸಿದ್ದ ಗ್ರಾನೈಟ್ ಕಂಬ ಕುಸಿದು ತಾಲೂಕಿನ ಕೊತ್ತನೂರಿನ ತಿಮ್ಮಕ್ಕ ಎಂಬುವರ ಕಾಲಿಗೆ ತೀವ್ರ ಪೆಟ್ಟಾಗಿರುವ ಘಟನೆ ಗುರುವಾರ ನಡೆದಿದೆ. ಪಟ್ಟಣದ ಸಾರಿಗೆ ಬಸ್ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಸುಮಾರು ರು. 75 ಲಕ್ಷ ಮೊತ್ತದ ಕಾಮಗಾರಿಗಳಿಗೆ ಜನವರಿ 2012 ರಲ್ಲಿ ಚಾಲನೆ ನೀಡಲಾಗಿತ್ತು. ಆಮೆಗತಿಯಲ್ಲಿ ಸಾಗಿದ ಕಾಮಗಾರಿಯ ನಂತರ ಇನ್ನೂ ಸಾರಿಗೆ ಬಸ್ನಿಲ್ದಾಣಕ್ಕೆ ಉದ್ಘಾಟನೆಗೆ ಭಾಗ್ಯ ಸಿಕ್ಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸದೆ, ಕಳಪೆ ಕಾಮಗಾರಿ ಮಾಡಿ ಜನರ ಪ್ರಾಣದೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ತೊಂದರೆಯಾಗದಂತೆ ಆದಷ್ಟು ಬೇಗ ಹೊಸ ಬಸ್ಸುಗಳನ್ನು ಬಿಡುತ್ತೇವೆ ಎಂಬ ಅಧಿಕಾರಿಗಳ ಭರವಸೆ ಹಾಗೆಯೇ ಉಳಿದಿದೆ ಎಂದು ಎಸ್ಎಫ್ಐ ಜಿಲ್ಲಾ ಸಂಚಾಲಕ ಮುನೀಂದ್ರ ಆರೋಪಿಸಿದ್ದಾರೆ.
ನಾಲ್ವರು ಸುಲಿಗೆಕೋರರ ಬಂಧನ
ಶಿಡ್ಲಘಟ್ಟ: ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ 4 ಮಂದಿ ಸುಲಿಗೆಕೋರರನ್ನು ಬಂಧಿಸಿ ನ್ಯಾಯಾಲಯ ವಶಕ್ಕೆ ಒಪ್ಪಿಸಿರುವ ಘಟನೆ ಶುಕ್ರವಾರ ನಡೆದಿದೆ. ವಿಜಯಪುರದ ನಿವಾಸಿಗಳಾದ ಇಮ್ರಾನ್ ಪಾಷ(22), ಪಿ.ರಿಯಾಜ್(23), ಸದ್ದಾಂ ಹುಸೇನ್(22) ಮತ್ತು ನವೀಜ್ ಜಮೀರ್(21) ಬಂಧಿತ ಆರೋಪಿಗಳು. ಕಳೆದ ವರ್ಷ ಪಟ್ಟಣದ ವೋಡಾಫೋನ್ ವಿತರಕ ಅನಿಲ್ ಎಂಬುವರನ್ನು ಹಿಂಬಾಲಿಸಿ ಅವರಿಂದ ಸಿನಿಮೀಯ ರೀತಿಯಲ್ಲಿ ರು. 3 ಲಕ್ಷ 20 ಸಾವಿರ ಲಪಟಾಯಿಸಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು. ಕಳೆದ ವರ್ಷ ಮೇ ತಿಂಗಳಿನಲ್ಲಿ ತಾಲೂಕಿನ ಜೆ.ವೆಂಕಟಾಪುರದ ಕೆರೆಯ ಮೋರಿಯ ಬಳಿ ತನ್ನ ಗಂಡನೊಂದಿಗೆ ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ 25 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದರು. ವಿಜಯಪುರದಲ್ಲಿ ಟಿವಿಎಸ್ ದ್ವಿಚಕ್ರ ವಾಹನ ಕಳವು ಮಾಡಿದ್ದರು. ಈ ಮೂರೂ ಪ್ರಕರಣಗಳಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ 25 ಗ್ರಾಂ ತೂಕದ ಚಿನ್ನದ ಸರ, ದ್ವಿಚಕ್ರ ವಾಹನ ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ದ್ವಿ ಚಕ್ರ ವಾಹನ ವಶಪಡಿಸಿಕೊಂಡಿರುವುದಾಗಿ ವೃತ್ತ ನಿರೀಕ್ಷಕ ಆರ್.ಜಗದೀಶ್ ತಿಳಿಸಿದ್ದಾರೆ.