ಚಿನ್ನ ಪರಿಶೀಲಕರಿಗೆ ಜೀವನ ಭದ್ರತೆ ಒದಗಿಸಲು ಆಗ್ರಹ
ಕ.ಪ್ರ.ವಾರ್ತೆ , ಚಿಂತಾಮಣಿ , ಆ.30
ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಚಿನ್ನಾಭರಣ ಕೆಲಸ ಮಾಡುವ ಪರಿಶೀಲಕರಿಗೆ ಸೂಕ್ತ ಜೀವನ ಭದ್ರತೆ ಒದಗಿಸಬೇಕೆಂದು ಅಖಿಲ ಭಾರತ ಕೆನರಾ ಬ್ಯಾಂಕ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಮತ್ತು ಅಖಿಲ ಕರ್ನಾಟಕ ಚಿನ್ನಾಭರಣ ಪರಿಶೀಲಕರ ಸಂಘಗಳು ಆಗ್ರಹಿಸಿವೆ.
ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಹಲವಾರು ಮಂದಿ ಸುಮಾರು ವರ್ಷಗಳಿಂದ ಚಿನ್ನ ಪರಿಶೀಲನೆ ಕೆಲಸ ಮಾಡುತ್ತಿದ್ದು, ಅವರಿಗೆ ಸೂಕ್ತ ಅವಕಾಶ ನೀಡದೆ ಬ್ಯಾಂಕುಗಳು ತಮ್ಮ ಇಚ್ಛೆಯಂತೆ ನಡೆದುಕೊಳ್ಳುತ್ತಿದ್ದು, ಮೊದಲಿನಿಂದಲೂ ಕಾರ್ಯ ನಿರ್ವಹಿಸುತ್ತಿರುವವರಿಗೆ ಅವಕಾಶ ಬೀಡದೆ ಆಗಾಗ್ಗೆ ಬದಲಾವಣೆ ಮಾಡಿ ಇತರರನ್ನು ಪರಿಶೀಲಕರನ್ನಾಗಿ ಮಾಡಿಕೊಳ್ಳುತ್ತಿರುವುದರಿಂದ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಚಿನ್ನ ಪರಿಶೀಲಕರಿಗೆ ತೊಂದರೆ ಉಂಟಾಗಿ ಅಭದ್ರತೆ ಕಾಡುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ಜೆ. ಶ್ರೀನಿವಾಸಾಚಾರಿ ವಿವರಿಸಿದ್ದಾರೆ.
ಬ್ಯಾಂಕುಗಳ ಯಾವುದೇ ಶಾಖೆಯ ವ್ಯವಸ್ಥಾಪಕರು ನಿಗದಿಪಡಿಸಿರುವ ವೇಳೆಯಲ್ಲಿ ಯಾವ ಸಂದರ್ಭದಲ್ಲೂ ಪರಿಶೀಲಕರು ಚಿನ್ನ ಪರಿಶೀಲನೆ ಮಾಡಲು ಸಿದ್ಧವಾಗಿದ್ದು, ಶಾಖೆಯ ಮೇಲಧಿಕಾರಿಗಳು ದಿನನಿತ್ಯ ಬ್ಯಾಂಕಿಗೆ ಬಂದು ಕಾರ್ಯನಿರ್ವಹಿಸಬೇಕೆಂದು ಆದೇಶ ಮಾಡಿರುತ್ತಾರೆ. ಆದರೆ, ವಾರದ ಕೆಲವು ದಿನಗಳಲ್ಲಿ ಗ್ರಾಹಕರು ಇರುವುದಿಲ್ಲ. ಒಂದೇ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸಿ ಜೀವನ ಸಾಗಿಸಲು ಬಹಳ ತೊಂದರೆಯಾಗುತ್ತಿದೆ.
ಆದ್ದರಿಂದ ಚಿನ್ನ ಪರಿಶೀಲಕರಿಗೆ ಕನಿಷ್ಠ ಎರಡು ಶಾಖೆಗಳಲ್ಲಾದರೂ ಚಿನ್ನ ಪರಿಶೀಲನೆ ಕೆಲಸ ಮಾಡುವುದು ಅನಿವಾರ್ಯವಾಗಿದೆಯೆಂದು ತಿಳಿಸಿರುವ ಶ್ರೀನಿವಾಸಾಚಾರಿ ಅವರು ಈ ಸಂಬಂಧವಾಗಿ ಕೇಂದ್ರ ಸರ್ಕಾರವು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಕೋರಿ ಕೇಂದ್ರ ಸಚಿವರಾದ ಕೆ.ಎಚ್. ಮುನಿಯಪ್ಪ ಹಾಗೂ ಎಂ.ವೀರಪ್ಪ ಮೊಯ್ಲಿ ಅವರಿಗೆ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಗಿದೆ ಎಂದಿದ್ದಾರೆ.