ಪಠ್ಯದಷ್ಟೇ ಕ್ರೀಡೆಗೂ ಪ್ರಾಮುಖ್ಯತೆ ನೀಡಿ: ಶಾಸಕ
ಮಾಲೂರು: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯದಷ್ಟೇ ಪ್ರಾಮುಖ್ಯತೆ ಕ್ರೀಡೆಗಳಿಗೂ ಸಹ ಇದೆ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ತಮ್ಮ ವಿದ್ಯಾಭ್ಯಾಸದ ಕಾಲದಲ್ಲಿ ಪಠ್ಯದ ಜತೆಯಲ್ಲಿ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಪರಿಪೂರ್ಣರಾಗಲು ಸಾಧ್ಯ ಎಂದರು.
ಮುಂದಿನ ಐದು ವರ್ಷದಲ್ಲಿ ಇಲ್ಲಿನ ಕ್ರೀಡಾಂಗಣದಲ್ಲಿ ಆಧುನಿಕ ಸೌಲಭ್ಯಗಳನ್ನು ನಿರ್ಮಿಸಿಕೊಡಲು ಕಂಕಣಬದ್ಧನಾಗಿದ್ದೇನೆ. ಗ್ರಾಮಾಂತರ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗುವ ಇಂತಹ ಕ್ರೀಡಾಕೂಟಗಳು ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ರೀತಿಯಲ್ಲಿ ಆಯೋಜಿಸಬೇಕಾಗಿತ್ತು. ಆದರೆ ಸರ್ಕಾರದಿಂದ ಬರುವ ಅನುದಾನಕ್ಕೆ ತಕ್ಕವಾಗಿ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ. ಇನ್ನೂ ಮುಂದೆ ಕ್ರೀಡಾಕೂಟವನ್ನು ಮಾದರಿಯ ರೀತಿಯಲ್ಲಿ ಆಯೋಜಿಸುವಂತೆ ಬಿಇಒ ಅವರಿಗೆ ತಿಳಿಸಿದ ಶಾಸಕರು ಕ್ರೀಡಾಕೂಟಕ್ಕೆ ಸರ್ಕಾರ ನೀಡುವ ಹಣಕ್ಕಿಂತ ಹತ್ತು ಪಟ್ಟು ಹೆಚ್ಚು ಹಣ ನೀಡುವುದಾಗಿ ತಿಳಿಸಿದರು.
ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಪ್ರತಿಭೆಗಳನ್ನು ಗುರುತಿಸಲು ಇಂತಹ ಕ್ರೀಡಾಕೂಟ ಸಹಕಾರಿಯಾಗಿದೆ. ಆದರೆ ಸರ್ಕಾರಗಳು ತಾಲೂಕು ಮಟ್ಟದಲ್ಲಿ ಕ್ರೀಡಾಂಗಣ ನಿರ್ಮಿಸದಿರುವುದು ಗ್ರಾಮಾಂತರ ಪ್ರತಿಭೆಗಳಿಗೆ ರಾಷ್ಟ್ರ ಮಟ್ಟದಲ್ಲಿ ಗುರ್ತಿಸಲು ಸಾಧ್ಯವಾಗದೆ ಹೋಗುತ್ತಿದೆ. ಸ್ವಾತಂತ್ರ್ಯ ಬಂದು 67 ವರ್ಷವಾದರೂ ಕ್ರೀಡೆಯಲ್ಲಿ ತೋರುತ್ತಿರುವ ತಾರತಮ್ಯ ನೀತಿಗಳಿಂದ ದೇಶಿಯ ಕ್ರೀಡೆಗಳು ವಿದೇಶಿ ಕ್ರಿಕೆಟ್ ಮುಂದೆ ಮಂಕಾಗುತ್ತಿದೆ.ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರೀಡೆಗಾಗಿ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದರು.
ತಹಸೀಲ್ದಾರ್ ನಾಗರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುಂಡಪ್ಪ ಮಾತನಾಡಿದರು. ಜಿಪಂ ಸದಸ್ಯ ಯಲ್ಲಮ್ಮ ಸಂಪಂಗಿ, ಪುರಸಭೆ ಸದಸ್ಯ ಮುರಳೀಧರ್, ಪಚ್ಚಪ್ಪ, ಮಾಜಿ ಸದಸ್ಯ ಪ್ರದೀಪ್ ರೆಡ್ಡಿ, ಬಿಆರ್‌ಸಿ ಸಮನ್ವಯಾಧಿಕಾರಿ ಜಮೀರ್ ಪಾಷ, ಉಪ ಪ್ರಾಂಶುಪಾಲ ಎಲ್.ಪಾಪಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಆರ್. ಸುರೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆಂಪಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಮುನಿನಾರಾಯಣ, ವೈ.ಎ. ಸೂರ್ಯನಾರಾಯಣ್, ಪ್ರಾಂಶುಪಾಲ ರಾಮಕೃಷ್ಣ, ಶಿವಾನಂದ, ತಾಪ ಸಂಘದ ಅಧ್ಯಕ್ಷ ಎಂ.ವಿ. ರವೀಂದ್ರ, ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಆನೇಪುರ ಹನುಮಂತಪ್ಪ, ಚಿನ್ನಸ್ವಾಮಿ ಗೌಡ, ರವಿ, ನಾರಾಯಣಪ್ಪ, ಪ್ರಾಂಶುಪಾಲ ರಾಮಕೃಷ್ಣ, ಶಿವಾನಂದ್, ವಂಕಟೇಶ್ ಇದ್ದರು.