ಬಜೆಟ್ ಮಾಹಿತಿಗೆ ಒತ್ತಾಯ
ಕೋಲಾರ: ಇನ್ನು ಮಂದೆ ರಾಜ್ಯ ಸರ್ಕಾರ ಪ್ರತಿ ಬಜೆಟ್ಗೂ ಮಂಡನೆಗೂ ಮುನ್ನ, ಕಳೆದ ಸಾಲಿನ ಬಜೆಟ್ನಲ್ಲಿ ಮೀಸಲಿರಿಸಿದ ಹಣದಲ್ಲಿ ಯಾವ ಯೋಜನೆಗೆ ಎಷ್ಟು ಅನುದಾನ ಖರ್ಚು ಮಾಡಲಾಗಿದೆ ಎಂಬ ವಿವರಗಳನ್ನು ಕಡ್ಡಾಯವಾಗಿ ಮಂಡಿಸಬೇಕೆಂದು ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆ ವತಿಯಿಂದ ಜಿಲ್ಲಾ ಆಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಜೆಟ್ನಲ್ಲಿ ಮೀಸಲಿರಿಸಿದ ಹಣವನ್ನು ಖರ್ಚು ಮಾಡದಿರುವ ಬಗ್ಗೆ ಸಂಬಂಧಿಸಿದ ಸಚಿವರು, ಇಲಾಖಾ ಅಧಿಕಾರಿಗಳ ವಿರುದ್ಧ ಕೈಗೊಂಡ ಶಿಸ್ತು ಕ್ರಮ ಜಾರಿ ಬಗ್ಗೆ, ಬಜೆಟ್ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ವೇದಿಕೆ ಮುಖಂಡರು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. ಬಜೆಟ್ನಲ್ಲಿ ಶೇ.10 ರಷ್ಟು ಹಣವನ್ನೂ ಖರ್ಚು ಮಾಡದಿರುವುದು ಜನಪ್ರತಿನಿಧಿಗಳ ಕರ್ತವ್ಯ ಲೋಪ ಹಾಗೂ ಇಚ್ಛಾಶಕ್ತಿ ಕೊರತೆಗೆ ಸಾಕ್ಷಿಯಾಗಿದೆ. ಇದರಿಂದ ಜನಸಾಮಾನ್ಯರಿಗೆ ಇದುವರೆಗೂ ಎಳ್ಳಷ್ಟೂ ಪ್ರಯೋಜನವಾಗದೇ ಬಜೆಟ್ ಮಂಡಿಸುವ ಉದ್ದೇಶವೇ ವಿಫಲವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮನವಿ ಪತ್ರ ನೀಡುವ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ನರೇಂದ್ರ ಬಾಬು, ಶ್ರೀನಿವಾಸಮೂರ್ತಿ, ಎನ್.ಡಿ. ಶ್ರೀನಿವಾಸ್, ದಿಂಬ ಜಯರಾಮ್, ಹೂಹಳ್ಳಿ ಶ್ರೀನಿವಾಸ್, ಲಕ್ಷ್ಮಿ, ಸುಮನ್, ಸೋಮಶೇಖರ್, ಬೆಗ್ಲಿ ನಾರಾಯಣಗೌಡ ಹಾಜರಿದ್ದರು.
ಬಡ್ತಿ ವಂಚಿತ ಕರ ವಸೂಲಿಗಾರರ ಅಳಲು
ಚಿಂತಾಮಣಿ: ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ ವಸೂಲಿಗಾರರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನಾಗಿ ಬಡ್ತಿ ಹೊಂದಿ ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಡ್ತಿಹೊಂದಲು ಸಾಧ್ಯವಾಗದೇ ಅನ್ಯಾಯವಾಗಿದೆ ಎಂದು ಹಲವಾರು ಮಂದಿ ಕರ ವಸೂಲಿಗಾರರ ಆರೋಪವಾಗಿದೆ. ಕರ ವಸೂಲಿಗಾರರಿಗೆ ಸರ್ಕಾರ ಸುತ್ತೋಲೆಯಂತೆ ರಾಜ್ಯ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉಪ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮುಖಾಂತರ ಕರ ವಸೂಲಿಗಾರರನ್ನು ಬಡ್ತಿ ನೀಡಿ ಲೆಕ್ಕ ಸಹಾಯಕರನ್ನಾಗಿ ನೇಮಕ ಮಾಡಲಾಗಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ ಗ್ರಾಮ ಪಂಚಾಯ್ತಿಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ ವಸೂಲಿಗಾರರಿಗೆ ಈ ಭಾಗ್ಯ ದೊರೆಯದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಹಲವು ಬಾರಿ ಧರಣಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಿಲ್ಲದೆ ಕರ ವಸೂಲಿಗಾರರಿಗೆ ನ್ಯಾಯ ದೊರೆಯದೆ ಹಾಗೂ ಕುಟುಂಬ ನಿರ್ವಹಿಸಲು ಸಂಬಳ ಸಾಕಾಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಳ್ಳಿಗಾಡಿನ ಪ್ರದೇಶಗಳಲ್ಲಿ ಕಷ್ಟ ಪಟ್ಟು ಕಾರ್ಯ ನಿರ್ವಹಿಸುವ ನೌಕರರಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದಾದರೂ ಇತ್ತ ಗಮನ ಹರಿಸಿ ನ್ಯಾಯ ದೊರಕಿಸಿಕೊಡಬೇಕೆಂದು ನೌಕರರು ಆಗ್ರಹಿಸಿದ್ದಾರೆ.
ಇಂದು ಗುಡಿಬಂಡೆಯಲ್ಲಿ ಬೀದಿ ನಾಟಕಗಳ ಪ್ರದರ್ಶನ
ಗುಡಿಬಂಡೆ: ಪಟ್ಟಣದ ಸಾರ್ವಜನಿಕರಲ್ಲಿ ಶಿಕ್ಷಣ, ನೈರ್ಮಲ್ಯ ಮತ್ತು ಘನತಾಜ್ಯ ವಸ್ತುಗಳ ವಿಲೇವಾರಿ ಕುರಿತಂತೆ ಅರಿವು ಮೂಡಿಸುವ ಸಲುವಾಗಿ ಸ್ಥಳೀಯ ಪ.ಪಂ.ನ ಶೇ.22.75 ಮತ್ತು ಶೇ.7.25 ಯೋಜನೆಯಡಿ ನುರಿತ ಸರ್ಕಾರೇತರ ಸಂಸ್ಥೆಗಳಿಂದ ಬೀದಿ ನಾಟಕಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ.31 ಬೆಳಿಗ್ಗೆ 8ಗಂಟೆಗೆ ಮಾರಮ್ಮ ದೇವಸ್ಥಾನದ ಬಳಿ, 9 ಗಂಟೆಗೆ ಮಾರುತಿ ಸರ್ಕಲ್ ಬಳಿ, 10 ಗಂಟೆಗೆ ಮಾಜಿ ಪ್ರಧಾನ್ ಅಶ್ವತ್ಥಪ್ಪ ಮನೆ ಬಳಿ, ಸಾಯಂಕಾಲ 10 ಗಂಟೆಗೆ ಸರ್ಕಾರಿ ಆಸ್ಪೆತ್ರೆ ಮುಂಭಾಗ, 5ಗಂಟೆಗೆ ರಾಮಪಟ್ಟಣ ಸರ್ಕಲ್ ಬಳಿ, 6 ಗಂಟೆಗೆ ಹಳೇ ಮಸೀದಿ ಮುಂದೆ ಬೀದಿ ನಾಟಕಗಳನ್ನು ಪ್ರದರ್ಶಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಪಟ್ಟಣದ ಜನತೆ ಹಾಗೂ ಸ್ತ್ರೀಶಕ್ತಿ ಗುಂಪುಗಳ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಗುಡಿಬಂಡೆ: ತಾಲೂಕಿನ ಬಲಿ ಸಂಘದ ನೂತನ ಪದಾಧಿಕಾರಿಗಳಾಗಿ ಈ ಕೆಳಕಂಡವರು ಆಯ್ಕೆಯಾಗಿದ್ದಾರೆಂದು ಸಂಘದ ಪ್ರಕಟಣೆ ತಿಳಿಸಿದೆ. ಅಧ್ಯಕ್ಷರಾಗಿ ಆರ್. ಬಾಲಪ್ಪ, ಗೌ. ಅಧ್ಯಕ್ಷರಾಗಿ ಎ. ಮಂಜುನಾಥ್, ಉಪಾಧ್ಯಕ್ಷರಾಗಿ ಜಿ.ಎಸ್. ಚಂದ್ರಶೇಖರ್, ಎ.ವಿ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಆರ್. ಪ್ರಕಾಶ್ಬಾಬು, ಸಹಕಾರ್ಯದರ್ಶಿಯಾಗಿ ಧರಣಿ ವೆಂಕಟೇಶ್, ಸಂಘಟನಾ ಕಾರ್ಯದರ್ಶಿಯಾಗಿ ವೆಂಕಟೇಶಪ್ಪ ಆಯ್ಕೆಯಾಗಿದ್ದು, ಮಹಿಳಾ ಸಂಘದ ಪದಾಧಿಕಾರಿಗಳಾಗಿ ಅಧ್ಯಕ್ಷೆ ನಂದಾದೇವಿ, ಉಪಾಧ್ಯಕ್ಷೆಯಾಗಿ ಲಕ್ಷ್ಮೀಕಾಂತಮ್ಮ, ಕಾರ್ಯದರ್ಶಿಯಾಗಿ ಜಿ.ಕೆ. ನಿರ್ಮಲಾ ನಾಯ್ಡು, ಸಹಕಾರ್ಯದರ್ಶಿಯಾಗಿ ಮೀನಾಕುಮಾರಿ, ಖಜಾಂಚಿಯಾಗಿ ಜಿ.ಕೆ. ಮಾಲಾ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.
ಇಂದು ಉದ್ಯೋಗ ಕೇಂದ್ರ ಉದ್ಘಾಟನೆ
ಚಿಕ್ಕಬಳ್ಳಾಪುರ: ನಗರದ ಅಂಬೇಡ್ಕರ್ ಭವನದಲ್ಲಿ ಆ. 31 ರಂದು ಬೆಳಗ್ಗೆ 11ಕ್ಕೆ ಉದ್ಯೋಗ ಉನ್ನತಿ ಕೇಂದ್ರ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಖಾತೆ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಡಾ.ಕೆ ಸುಧಾಕರ್ ವಹಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ವಿಶಾಲ್, ಗ್ಯಾಸ್ ಆಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರ ನಿರ್ದೇಶಕ ಬಿ.ಸಿ. ತ್ರಿಪಾಠಿ, ಡಾ.ಗಾಯಿತ್ರಿ ವಾಸುದೇವ್ ಮುಂತಾದವರು ಭಾಗವಹಿಸಲಿದ್ದಾರೆ.
ಇಂದು ಆರೋಗ್ಯ ತಪಾಸಣಾ ಶಿಬಿರ
ಚಿಕ್ಕಬಳ್ಳಾಪುರ: ಶ್ರೀ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ತಿಪ್ಪೇನಹಳ್ಳಿಯಲ್ಲಿ ಆ.31ರಂದು ಬೆಳಿಗ್ಗೆ 9.30 ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಸ್ಪಿ ಎನ್. ಶಿವಪ್ರಸಾದ್ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಹೃದಯ, ನರ, ಸ್ತ್ರೀರೋಗ, ಮೂಳೆ, ದಂತ, ಇಎನ್ಟಿ, ನೇತ್ರ, ಮೂತ್ರಪಿಂಡ, ಕ್ಯಾನ್ಸರ್ ಹಾಗೂ ಮಕ್ಕಳ ಸಮಸ್ಯೆಗೆ ಸಂಬಂಧಿಸಿದ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಅರ್ಹರಿಗೆ ಮೂರು ತಿಂಗಳ ಅವಧಿಗೆ ಬೇಕಾದ ಔಷಧವನ್ನು ಉಚಿತವಾಗಿ ನೀಡಲಾಗುವುದು. ಅಗತ್ಯವಿರುವವರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು. ಸಾರ್ವಜನಿಕರು ಶಿಬಿರವನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ಟ್ರಸ್ಟ್ ಅಧ್ಯಕ್ಷ, ಶಾಸಕ ಶಾಸಕ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯು 2013-14ನೇ ಸಾಲಿಗೆ ರಾಜ್ಯದಲ್ಲಿನ ಕಾರ್ಮಿಕರ ಅರ್ಹ ಮಕ್ಕಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಹಿಂದಿನ ಸಾಲಿನಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ.50 ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಶೇ.45 ಅಂಕ ಪಡೆದು ತೇರ್ಗಡೆಯಾಗಿರಬೇಕು. 2013-14 ನೇ ಸಾಲಿನಲ್ಲಿ ಪ್ರೌಢಶಾಲೆ, ಕಾಲೇಜು, ಸ್ನಾತಕೋತ್ತರ, ವೈದ್ಯಕೀಯ ಹಾಗೂ ತಾಂತ್ರಿಕ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳು ಬೇರೆ ಯಾವುದೇ ಮೂಲಗಳಿಂದ ವಿದ್ಯಾರ್ಥಿ ವೇತನ ಪಡೆದಿರಬಾರದು ಮತ್ತು ತಂದೆ, ತಾಯಿ, ಪೋಷಕರ ಮಾಸಿಕ ಸಂಬಳ 15 ಸಾವಿರ ರು. ಮೀರದಂತಹ ಹಾಗೂ ಮಂಡಳಿಗೆ ವಂತಿಗೆ ಪಾವತಿಸುವ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರು, ಹಿರಿಯ ಕಾರ್ಮಿಕ ನಿರೀಕ್ಷಕರು ಮತ್ತು ಜಿಲ್ಲೆಗಳಲ್ಲಿರುವ ಕಾರ್ಮಿಕ ಅಧಿಕಾರಿಗಳ ಕಚೇರಿಯಿಂದ ಸೆ.16 ರೊಳಗೆ ಪಡೆದುಕೊಳ್ಳಬಹುದು. ಅರ್ಜಿಗಳನ್ನು ಸಲ್ಲಿಸಲು ಸೆ.30 ಕೊನೆ ದಿನವಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ
ಶಿಡ್ಲಘಟ್ಟ: ತಾಲೂಕಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾಭಕ್ತಿಯಿಂದಆಚರಿಸಲಾಯಿತು. ಪಟ್ಟಣದ ಕೆ.ಕೆ.ಪೇಟೆಯ ಶ್ರೀಕೃಷ್ಣ ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಷ್ಟೋತ್ತರ ಸೇವೆ, ವೇದಪಾರಾಯಣ, ಮಹಾಮಂಗಳಾರತಿ, ತೊಟ್ಟಿಲು ಸೇವೆ, ತೀರ್ಥಪ್ರಸಾದ ವಿನಿಯೋಗಿಸಲಾಯಿತು. ಮಹಿಳೆಯರು ತಂಬಿಟ್ಟು ದೀಪಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಶ್ರೀಕೃಷ್ಣ ವೇಷಧಾರಿ ಮಕ್ಕಳೊಂದಿಗೆ ಮುತ್ತಿನ ಪಲ್ಲಕ್ಕಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ತಾಲೂಕು ಕಚೇರಿಯಲ್ಲಿ ಕಳವು ಯತ್ನ
ಶಿಡ್ಲಘಟ್ಟ: ತಾಲೂಕು ಕಚೇರಿಯ ನೋಂದಣಿ ಇಲಾಖೆ ಕಿಟಕಿ ಮುರಿದು ಹಾಗೂ ಆಹಾರ ಇಲಾಖೆಯ ಪಡಿತರ ಚೀಟಿ ವಿತರಣಾ ಕೊಠಡಿ ಬಾಗಿಲು ಮುರಿದು ಕಳ್ಳತನ ಪ್ರಯತ್ನ ನಡೆಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಗ್ರಾಮಾಂತರ ಪೊಲೀಸ್ ಠಾಣೆ, ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ, ನ್ಯಾಯಾಲಯ ಹಾಗೂ ತಾಲೂಕು ಪಂಚಾಯಿತಿ ಪಕ್ಕದಲ್ಲೇ ಇರುವ ತಾಲೂಕು ಕಚೇರಿಯಲ್ಲಿ ಕಳ್ಳತನದ ಘಟನೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ತಾಲೂಕು ಕಚೇರಿಯ ಮುಂದಿನ ದಿಬ್ಬೂರಹಳ್ಳಿ ರಸ್ತೆಯಲ್ಲಿ ಸಾಮಾನ್ಯವಾಗಿ ಮಧ್ಯರಾತ್ರಿಯಾದರೂ ಜನ ಹಾಗೂ ವಾಹನಗಳ ಸಂಚಾರವಿರುತ್ತದೆ. ಕಚೇರಿ ದಾಖಲಾತಿಯಂತೆ ಜಿ.ಬಸವರಾಜ್ ಹಾಗೂ ಡಿ.ಮುನಿಯಪ್ಪ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಹಣ ಅಥವಾ ಯಾವುದೇ ದಾಖಲಾತಿಗಳು ಕಳ್ಳತನವಾಗಿಲ್ಲವೆಂದು ತಾಲೂಕು ಕಚೇರಿ ಆಧಿಕಾರಿಗಳು ತಿಳಿಸಿದ್ದಾರೆ.