ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್ಕಾರದ ದಿಕ್ಕು ತಪ್ಪಿಸುತ್ತಿರುವ ಮೊಯ್ಲಿ, ಡಿವಿಎಸ್

Vishwanath S
Updated On : 31 Aug 2013, 12:29 pm

ಕ.ಪ್ರ.ವಾರ್ತೆ , ಬಾಗೇಪಲ್ಲಿ , ಆ.30
ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ನೀಡಿರುವ ಪರಮಶಿವಯ್ಯ ವರದಿಯ ದಿಕ್ಕು ತಪ್ಪಿಸುವಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರವರು ಪ್ರಮುಖ ಪಾತ್ರ ವಹಿಸುವ ಮೂಲಕ ರಾಜಕೀಯ ಪಿತೂರಿ ನಡೆಸುತ್ತಿದ್ದಾರೆಂದು ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಆರೋಪಿಸಿದರು.
ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಗಾನ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲೂಕು ಮಟ್ಟದ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ಬಯಲು ಸೀಮೆಯ  9 ಜಿಲ್ಲೆಗಳಲ್ಲಿ ಸತತವಾಗಿ ಮಳೆಯಿಲ್ಲದೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಎತ್ತಿನಹೊಳೆ ಅವೈಜ್ಞಾನಿಕ ಯೋಜನೆ. ಎತ್ತಿನಹೊಳೆಯಲ್ಲಿ 8-10 ಟಿಎಂಸಿ ನೀರು ಮಾತ್ರ ಸಿಗುತ್ತೆ. ಆದರೆ, ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿಯವರು 25 ಟಿಎಂಸಿ ನೀರು ಸಿಗುತ್ತೆ. ಇದರಿಂದ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸಲು ಈಗಾಗಲೇ 1500 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಟ್ಟಿರುವುದಾಗಿ ಪ್ರತಿನಿತ್ಯವೂ ಹೇಳಿಕೆ ನೀಡುತ್ತಾರೆ. ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂ.ಗ್ರಾಮಾಂತರ ಜಿಲ್ಲೆಗಳಿಗೆ ಸಂಪೂರ್ಣವಾಗಿ ನೀರನ್ನು ಹರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನೀರಿನ ಸಮಸ್ಯೆ ಕೇವಲ ಅವಿಭಜಿತ ಕೋಲಾರ ಜಿಲ್ಲೆಗೆ ಮಾತ್ರ ಸೀಮಿತವಲ್ಲ. ಮಧ್ಯ ಕರ್ನಾಟಕದ ಬಯಲುಸೀಮೆಯ ಎಲ್ಲಾ 9 ಜಿಲ್ಲೆಗಳಲ್ಲಿಯೂ ಈ ಸಮಸ್ಯೆ ಕಾಡುತ್ತಿದೆ. 66 ವರ್ಷಗಳಿಂದ ನಮ್ಮನ್ನು ಆಳಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ದೇಶ ಮತ್ತು ರಾಜ್ಯದಲ್ಲಿನ ನೀರನ್ನು ಹೇಗೆ ಬಳಸಬೇಕು, ಕೃಷಿ ಮತ್ತು ಕಾರ್ಖಾನೆಗಳಿಗೆ ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ರಾಷ್ಟ್ರೀಯ ಜಲ ನೀತಿಯನ್ನು ಇದುವರೆಗೂ ರೂಪಿಸಿಲ್ಲ. ಇದರ ಪರಿಣಾಮ ನೀರಿನ ಹಂಚಿಕೆಯಲ್ಲಿ ರಾಜ್ಯ ರಾಜ್ಯಗಳ ನಡುವೆ ಸಂಘರ್ಷ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನಮ್ಮ ದೇಶದಲ್ಲಿ ಕೇವಲ ಶೇ. 22ರಷ್ಟು ನೀರನ್ನು ಮಾತ್ರ ಉಪಯೋಗಿಸಿಕೊಂಡು ಉಳಿದ ಶೇ.78ರಷ್ಟು ನೀರನ್ನು ಉಪಯೋಗಿಸುವಲ್ಲಿ ನಮ್ಮ ಸರ್ಕಾರಗಳು ವಿಫಲವಾಗಿವೆ. ನಮ್ಮ ದೇಶದಲ್ಲಿ ಬ್ರಹ್ಮಪುತ್ರ ನದಿಯಲ್ಲಿ ಅತಿ ಹೆಚ್ಚಿನ ನೀರು ಅತಿ ರಭಸವಾಗಿ ಹರಿಯುವಂತಹ ನದಿ. ಈ ನದಿಯಲ್ಲಿ ಸುಮಾರು 7ಸಾವಿರ ಟಿಎಂಸಿ ನೀರು ಹರಿಯುತ್ತದೆ. ಆದರೆ, ಇದರಲ್ಲಿ ಕನಿಷ್ಠ 100 ಟಿಎಂಸಿ ನೀರನ್ನು ಬಳಸಿಕೊಳ್ಳುಲು ಸಾಧ್ಯವಾಗುತ್ತಿಲ್ಲ ಎಂದರು.
ಕೆಲವರು ಗೊತ್ತು- ಗುರಿಯಿಲ್ಲದೆ ತಮ್ಮ ಸ್ವ-ಲಾಭಗಳಿಗಾಗಿ ಹಾಗೂ  ರಾಜಕೀಯಕ್ಕಾಗಿ ನೀರಾವರಿ ಹೆಸರಿನಲ್ಲಿ ಹೋರಾಟ ಮಾಡುವ ಮೂಲಕ ಉಪಯೋಗಿಸಿಕೊಳ್ಳುತ್ತಿದ್ದಾರೆ. ನೀರಾವರಿ ಪ್ರಶ್ನೆಯನ್ನು ರಾಜಕೀಯ ಪ್ರಶ್ನೆಯನ್ನಾಗಿ ಮಾರ್ಪಾಟು ಮಾಡಿದ್ದಾರೆ. ಯಾವ ವಿಚಾರವನ್ನು ರಾಜಕೀಯಕ್ಕೆ ಉಪಯೋಗಿಸಬೇಕು ಹಾಗೂ ಯಾವ ವಿಚಾರವನ್ನು ಬಳಸಬಾರದು ಎಂಬ ಕನಿಷ್ಠ ಪ್ರಜ್ಞೆ ಇಲ್ಲದ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಇರುವುದು ನಮ್ಮ ದೇಶದ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಪ್ರಗತಿಪರ ರೈತ ಮುಖಂಡರಾದ ಪಿ.ವಿ.ರಾಮಿರೆಡ್ಡಿ, ಜಿಲ್ಲಾ ಶಾಶ್ವತ ಹೋರಾಟ ಸಮಿತಿಯ ಪ್ರ.ಕಾರ್ಯದರ್ಶಿ ಹೊನ್ನುಡಿ ಪ್ರಭಾಕರ್, ಡಾ. ಅನಿಲ್‌ಕುಮಾರ್, ಗೀತಾ, ಎಂ.ಪಿ ಮುನಿವೆಂಕಟಪ್ಪ, ತಾ.ಶಾ.ನೀ.ಹೋರಾಟ ಸಮಿತಿಯ ಗೌ.ಅಧ್ಯಕ್ಷ ಚಲಪತಿ, ನಂಜಿರೆಡ್ಡಿ, ಪುರಸಭೆಯ ಸದಸ್ಯ ಮಹಮದ್ ಆಕ್ರಂ, ಜಿಪಂ ಮಾಜಿ ಉಪಾಧ್ಯಕ್ಷ ಸಾವಿತ್ರಮ್ಮ, ಜಿಪಂ ಸದಸ್ಯೆ ನಾರಾಯಣಮ್ಮ, ತಾಪಂ ಅಧ್ಯಕ್ಷೆ ಮುನಿರತ್ನಮ್ಮ, ಮಂಜುನಾಥರೆಡ್ಡಿ ಹಾಗೂ ರೈತ ಸಂಘ, ಕಾರ್ಮಿಕ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement