3 ಟನ್ ರಕ್ತಚಂದನ ವಶ
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಾಯಲ್ಪಾಡು ಪೊಲೀಸ್ ಠಾಣೆ ವ್ಯಾಪ್ತಿಯ ಮಂಡ್ಯಾಕ್ರಾಸ್ ಬಳಿ ಟೆಂಪೋ ಒಂದರಲ್ಲಿ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ 3 ಟನ್ ರಕ್ತ ಚಂದನವನ್ನು ಶ್ರೀನಿವಾಸಪುರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ರಕ್ತ ಚಂದನವನ್ನು ಸಾಗಾಣೆ ಮಾಡಲಾಗುತ್ತಿತ್ತು. ಪೊಲೀಸರು ವಿಷಯ ತಿಳಿದು ಮಂಡ್ಯಾ ಗ್ರಾಮದ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿದಾಗ ಟೆಂಪೋ ಚಾಲಕ ಮತ್ತು ಅದರಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದು ಸುಮಾರು 16 ಲಕ್ಷ ರು.ಬೆಲೆ ರಕ್ತ ಚಂದನವನ್ನು ಪೊಲೀಸರು ವಶಕ್ಕೆ ಪಡೆದು ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.