ಎಚ್ಐವಿ ಜಾಗೃತಿ ಕಾರ್ಯಾಗಾರ
ಗುಡಿಬಂಡೆ: ಪಟ್ಟಣದ ಸಾರ್ವಜನಿಕ ಆಸ್ಪೆತ್ರೆಯಲ್ಲಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸಾರ್ವಜನಿಕ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಎಚ್ಐವಿ ಏಡ್ಸ್ ಕುರಿತ ಜಾಗೃತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಎ.ಎನ್. ಮಹಿಮ, ಎಚ್ಐವಿ ಸೊಂಕಿನ ಕುರಿತು ನಾಗರಿಕರಲ್ಲಿ ಜಾಗೃತಿ ಹೆಚ್ಚುತ್ತಿದೆ. ಎಚ್ಐವಿ ಪೀಡಿತರನ್ನು ತಾರತಮ್ಯ ಮನೋಭಾವದಿಂದ ಕಾಣಬಾರದು ಎಂದರು. ತಾಲೂಕಿನಲ್ಲಿ 160 ಮಂದಿ ಎಚ್ಐವಿ ಪೀಡಿತರಿದ್ದು, ಪ್ರತಿಯೊಬ್ಬರೂ ಎಚ್ಐವಿ ಏಡ್ಸ್ ಕುರಿತು ಜಾಗೃತರಾಗಬೇಕು ಎಂದರು.
ವಕೀಲ ಜಿ.ವಿ. ವಿಶ್ವನಾಥ್, ಗ್ರಾಮೀಣ ಭಾಗಗಳಲ್ಲಿ ತಪ್ಪು ತಿಳುವಳಿಕೆಯಿಂದ ಯುವ ಜನತೆ ಏಡ್ಸ್ ರೋಗಕ್ಕೆ ತುತ್ತಾಗುತ್ತಿರುವುದು ನೋವಿನ ಸಂಗತಿ ಎಂದರು. ನಿವೃತ್ತ ಬಿಡಿಒ ದೇವುಡು ನಾರಾಯಣಸ್ವಾಮಿ, ಬ್ರಹ್ಮಚರ್ಯ ಪಾಲಿಸುವುದರಿಂದ ಏಡ್ಸ್ ನಂತಹ ಕಾಯಿಲೆಗಳಿಂದ ದೂರ ಉಳಿಯಬಹುದೆಂದರು. ಸಾರ್ವಜನಿಕ ಆಸ್ಪೆತ್ರೆಯ ಡಾ.ಯಶ್ ರಾಜ್, ಹಂಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸ್ವಾತಿ, ಜೆ. ವೆಂಕಟರಾಯಪ್ಪ, ಎನ್. ಸುರೇಶ್, ಸುದರ್ಮನ್, ನಾಗರಾಜ್ ಇದ್ದರು.