ಎಪಿಎಂಸಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ: ಬೀರಪ್ಪ
ಮಾಲೂರು: ರೈತರ ಹಿತ ಕಾಯುವಲ್ಲಿ ಸ್ಥಳೀಯ ಎಪಿಎಂಸಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಸಮಿತಿಯ ಮಾಜಿ ಅಧ್ಯಕ್ಷ ಕೆ.ಆರ್. ಬೀರಪ್ಪ ಹೇಳಿದರು.
ಪಟ್ಟಣದ ವ್ಯವಸಾಯ ಉತ್ವನ್ನ ಮಾರುಕಟ್ಟೆ ಸಮಿತಿಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಹಕಾರಿ ಸಪ್ತಾಹದಲ್ಲಿ ಮಾತನಾಡಿ, ಎಪಿಎಂಸಿ ಯಾರ್ಡ್ ಇಲ್ಲದೇ ಸಮಿತಿಯ ವರಮಾನ ಕುಂಠಿತವಾಗುತ್ತಿದೆ. ಹಾಲಿ ಇರುವ ಚೆಕ್ಪೋಸ್ಟ್ಗಳಿಂದ ಸ್ವಲ್ಪ ಮಟ್ಟಿನ ವರಮಾನ ಬರುತ್ತಿದ್ದು, ಕೃಷಿಕರ ತೊಂದರೆಗಳಿಗೆ ಸ್ಪಂದಿಸಲು ಅಸಾಧ್ಯವಾಗುತ್ತಿದೆ ಎಂದರು.
ಸಮಿತಿ ಉಪಾಧ್ಯಕ್ಷ ಜಿ.ವಿ. ಕುಮಾರ್ ಮಾತನಾಡಿ, ಶಾಸಕ ಮಂಜುನಾಥ್ ಅವರ ಆಶಯದಂತೆ ರೈಲ್ವೇ ಸೇತುವೆ ಬಳಿ ತಾತ್ಕಲಿಕವಾಗಿ ಮಾರುಕಟ್ಟೆ ಯಾರ್ಡ್ ನಿರ್ಮಿಸಲು ತಯಾರಿ ನಡೆದಿದ್ದು, ತಹಸೀಲ್ದಾರ್ ಮೂಲಕ ಸರ್ವೆ ಕಾರ್ಯ ನಡೆಯುತ್ತಿದೆ ಎಂದರು. ಮಾರುಕಟ್ಟೆ ಸಮಿತಿಯ ಲೆಕ್ಕಾಧಿಕಾರಿ ವಿಜಯಲಕ್ಷ್ಮಿ ಲೋಕೇಶ್, ರೈತ ಪೆರಮಾಳ್ ಮಾತನಾಡಿದರು. ಸಮಿತಿ ಸದಸ್ಯ ಮಂಜುನಾಥ್ ರೆಡ್ಡಿ, ಮುನಿಶ್ಯಾಮಿ ಗೌಡ, ಹಂಸಕಲಾ, ಮುನಿರಾಜು, ವೆಂಕಟೇಶ್, ನಾರಾಯಣಪ್ಪ ಇದ್ದರು.