ಚರಂಡಿಯಲ್ಲಿ ಪೈಪ್ ಲೈನ್ ಅಳವಡಿಕೆ
ಬಂಗಾರಪೇಟೆ ತಾಲೂಕು ಮಾಗೊಂದಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಆಗಿರುವ ವಿವಿಧ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಇದಕ್ಕೆ ಗ್ರಾಪಂ ಆಡಳಿತ ವೈಖರಿಯೇ ಕಾರಣ. ಈ ಅಕ್ರಮಗಳ ಕುರಿತು ಜಿಲ್ಲಾ ಲೋಕಾಯುಕ್ತರು ತನಿಖೆ ನಡೆಸಿದಲ್ಲಿ ಕಳಪೆ ಕಾಮಗಾರಿಗಳ ಮಾಹಿತಿ ಸಿಗುತ್ತದೆ. ಕೊಳೆತು ನಾರುತ್ತಿರುವ ಚರಂಡಿಗಳು, ಅಂತಹ ಚರಂಡಿಯಲ್ಲೇ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಮತ್ತು ಗೇಟ್ ವಾಲ್ ಅಳವಡಿಸಿರುವುದರಿಂದ ಗ್ರಾಮಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಜನತೆ ಅನೇಕ ಕಾಯಿಲೆಗಳಿಗೆ ತುತ್ತಾಗುವ ಭೀತಿ ಎದುರಿಸುವಂತಾಗಿದೆ. ಗ್ರಾಮಗಳ ಸ್ವಚ್ಛತಾ ಕಾರ್ಯಕ್ಕಾಗಿ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ದುರ್ಬಳಕೆಯಾಗಿದ್ದು, ಎಲ್ಲೆಲ್ಲೂ ಕಸದ ರಾಶಿಗಳು ಕಾಣುವಂತಾಗಿದೆ. ಶೌಚಾಲಯ ನಿರ್ಮಾಣದ ಫಲಾನುಭವಿಗಳಿಗೆ ಚೆಕ್ ನೀಡುವಾಗ ಲಂಚ ಸ್ವೀಕರಿಸಿ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದ ಬಿಲ್ ಕಲೆಕ್ಟರ್ ಒಬ್ಬರು ಈಗಲೂ ರಾಜಾರೋಷವಾಗಿ ಹಣವಸೂಲಿ ಮಾಡಿ ಕಚೇರಿ ಕೆಲಸ ನಿರ್ವಹಿಸುತ್ತಿದ್ದು ಇವರಿಂದ ಗ್ರಾಮದ ಅಭಿವೃದ್ಧಿಗೆ ಹಿನ್ನಡೆ ಆಗಿರುವುದರಿಂದ ಲೋಕಾಯುಕ್ತರು ತನಿಖೆ ಮಾಡಿ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕು.
ಟಿ ಗ್ರಾಮಸ್ಥರು, ಮಾಗೊಂದಿ ಗ್ರಾಮ, ಬಂಗಾರಪೇಟೆ ತಾ.
ಅಪ್ರಾಪ್ತರಿಂದ ಸಂಚಾರಿ ನಿಯಮ ಉಲ್ಲಂಘನೆ
ಕೋಲಾರ ನಗರದಲ್ಲಿ ಸಂಚಾರ ನಿಯಮಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಅಪ್ರಾಪ್ತ ವಯಸ್ಸಿನವರು ರಾಜಾರೋಷವಾಗಿ ವಾಹನಗಳ ಚಾಲನೆ ಮಾಡುತ್ತಿರುವುದಲ್ಲದೆ ವಾಹನ ಚಾಲನೆಯನ್ನು ಸರಿಯಾಗಿ ಕಲಿಯದೆ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸುವ ಮೂಲಕ ಜನತೆಯಲ್ಲಿ ಭೀತಿ ಮೂಡಿಸುತ್ತಿದ್ದಾರೆ. ಕೋಲಾರ ನಗರದ ಬ್ರಾಹ್ಮಣರ ಬೀದಿಯಲ್ಲಿ ಇತ್ತೀಚೆಗೆ ಶಾಲಾ ಬಾಲಕಿಯೊಬ್ಬಳು ದ್ವಿಚಕ್ರ ವಾಹನದಲ್ಲಿ ಮಗು ಹಾಗೂ ತಮ್ಮ ಸಹೋದರನೊಂದಿಗೆ ಹೋಗುವಾಗ ರಸ್ತೆಯ ಬದಿಯಲ್ಲಿದ್ದ ಕೈಗಾಡಿಗಳಿಗೆ ಡಿಕ್ಕಿ ಹೊಡೆದಳಲ್ಲದೆ, ರಸ್ತೆ ದಿಬ್ಬ ದಾಟಲಾಗದೆ ಕಷ್ಟಪಡಬೇಕಾಯಿತು. ಮಕ್ಕಳು ಕನಿಷ್ಠ 16 ರಿಂದ 18 ವರ್ಷದ ನಂತರ ಬೈಕ್ ಓಡಿಸಬೇಕೆಂದು ಕಾನೂನು ಜಾರಿ ಮಾಡಿದ್ದರೂ ಉಲ್ಲಂಘನೆ ಆಗುತ್ತಿದೆ. ಪೊಲೀಸರು ಬೈಕ್ ಓಡಿಸುವ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ನಿಗಾ ವಹಿಸಿ ವಾಹನಗಳನ್ನು ವಶಕ್ಕೆ ಪಡೆದು ಮಕ್ಕಳಿಗೆ ಸ್ವೇಚ್ಚಾಚಾರದಿಂದ ವಾಹನಗಳನ್ನು ಓಡಿಸಲು ಅನುಮತಿ ನೀಡುವ ಪೋಷಕರ ಮೇಲೆ ಕ್ರಮ ಜರುಗಿಸುವ ಮೂಲಕ ಮಕ್ಕಳ ಪ್ರಾಣ ಉಳಿಸುವುದರ ಜೊತೆಗೆ ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡಬೇಕು.
ಟಿ ಸಚ್ಚಿದಾನಂದ, ವ್ಯಾಪಾರಿ,ಕೋಲಾರ.