ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜನ ಜಾಗೃತಿಯಿಂದ ಏಡ್ಸ್ ನಿಯಂತ್ರಣ ಸಾಧ್ಯ

Rashmi Kasaragodu
Updated On : 2 Dec 2013, 12:24 pm

ಕೋಲಾರ: ಜನತೆಯಲ್ಲಿ ಇರುವ ತಪ್ಪು ಕಲ್ಪನೆ ನಿವಾರಿಸಿ ಏಡ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಶ್ರಮಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್. ರೇಣುಕಾ ಪ್ರಸಾದ್ ತಿಳಿಸಿದರು.
ಕೋಲಾರ-ಬಂಗಾರಪೇಟೆ ರಸ್ತೆಯಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಜನ ಜಾಗೃತಿಯ ಮೂಲಕ ಏಡ್ಸ್ ರೋಗ ನಿಯಂತ್ರಣಕ್ಕೆ ತರಲು ಸರ್ಕಾರ ಪ್ರಯತ್ನಿಸುತ್ತಿದ್ದು ಸಂಘ ಸಂಸ್ಥೆಗಳು ಮತ್ತು ಏಡ್ಸ್ ನಿಯಂತ್ರಣ ಘಟಕದ ಕಾರ್ಯಕರ್ತರು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಜನತೆಯಲ್ಲಿ  ಇರುವ ಭಯ, ಗೊಂದಲ ನಿವಾರಿಸಿದಲ್ಲಿ ಏಡ್ಸ್ ರೋಗ ದೂರವಾಗುವುದರಲ್ಲಿ ಅನುಮಾನವಿಲ್ಲವೆಂದರು.
ಏಡ್ಸ್ ರೋಗದಿಂದ ಬಳಲುತ್ತಿರುವ ರೋಗಿಗಳ ಬಗ್ಗೆ ತಾತ್ಸಾರ ಬೇಡ, ಕಾರಣಾಂತರಗಳಿಂದ ಅಥವಾ ತಿಳುವಳಿಕೆಯ ಕೊರತೆಯಿಂದ ಕೆಲವರು ಏಡ್ಸ್ ರೋಗಕ್ಕೆ ತುತ್ತಾಗಿರಬಹುದು, ಈ ರೋಗಿಗಳ ಬಗ್ಗೆ ಅನುಕಂಪ ಮುಖ್ಯ, ಯಾರು ಈ ರೋಗದಿಂದ ನೊಂದಿದ್ದಾರೋ ಅಂತಹ ಜನರಿಗೆ ಪುನರ್ವಸತಿ ಕಲ್ಪಿಸುವ ಮೂಲಕ ಸಾಮಾನ್ಯ ಜನರಂತೆ ಬದುಕಲು ಅವಕಾಶ ಕಲ್ಪಿಸಬೇಕೆಂದು ಸಲಹೆ ನೀಡಿದರು.
ಸರ್ಕಾರದಿಂದ ಸಹಾಯ: ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿ ಡಾ.ಎನ್. ರಾಜ್‌ಕುಮಾರ್, ಏಡ್ಸ್ ರೋಗಿಗಳ ಮಕ್ಕಳಿಗೆ ಸರ್ಕಾರ ಉಚಿತವಾಗಿ ಶಿಕ್ಷಣ ನೀಡಲು ನಿಶ್ಚಯಿಸಿದೆ. 5ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ಸಿಗುವುದರಿಂದ ಏಡ್ಸ್ ರೋಗಿಗಳು ಇದರ ಪ್ರಯೋಜನ ಪಡೆಯಲು 2014ರ ಫೆಬ್ರವರಿಯೊಳಗೆ ತಮ್ಮ ಹೆಸರನ್ನು ಏಡ್ಸ್ ನಿಯಂತ್ರಣ ಘಟಕದಲ್ಲಿ ನೋಂದಣಿ ಮಾಡಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಭಾರ ಜಿಲ್ಲಾ ಆರೋಗ್ಯಧಿಕಾರಿ ಡಾ. ನಾರಾಯಣಸ್ವಾಮಿ ಮಾತನಾಡಿ, ಏಡ್ಸ್ ರೋಗಕ್ಕೆ ಒಳಪಟ್ಟವರಿಗೆ ಆತ್ಮಸ್ಥೈರ್ಯ ತುಂಬಿ ಅವರಿಗೆ ಸಾಮಾನ್ಯ ಜನರಂತೆ ಬದುಕಲು ಅವಕಾಶ ನೀಡಬೇಕು. ಏಡ್ಸ್ ದಿನಾಚರಣೆ ಕೇವಲ ಒಂದು ದಿನ ಆಚರಣೆ ಮಾಡಿದರೆ ಸಾಲದು, ರೋಗ ಸಂಪೂರ್ಣ ನಿಯಂತ್ರಣಕ್ಕೆ ತರಲು ಅಭಿಯಾನ ಮುಂದುವರೆಯಬೇಕೆಂದರು. ಕೋಲಾರ ತಾಲೂಕು ಆರೋಗ್ಯಾಧಿಕಾರ ಡಾ. ಲತಾ, ಶ್ರೀನಿವಾಸಪುರ ತಾಲೂಕಿನ ಡಾ. ಶರೀಫ್ ಇದ್ದರು. ಏಡ್ಸ್ ದಿನಾಚರಣೆಯ ಜಾಥಾದಲ್ಲಿ ಉತ್ತಮವಾದ ಘೋಷಣೆಗಳನ್ನು ಕುಗಿ ಗಮನ ಸೆಳೆದ ಕೋಲಾರದ ಚಿನ್ನೇಗೌಡ ನರ್ಸಿಂಗ್ ಕಾಲೇಜಿಗೆ ಪ್ರಶಸ್ತಿ ನೀಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement