ಸ್ವಾತಂತ್ರ್ಯಕ್ಕಿಂತ ಸ್ವಚ್ಛತೆಯೇ ಶ್ರೇಷ್ಠ
ಕೋಲಾರ: ಸ್ವಾತಂತ್ರ್ಯಕ್ಕಿಂತಲೂ ಸ್ವಚ್ಛತೆಯೇ ಶ್ರೇಷ್ಠ. ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಪ್ರತಿ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಡಿ. ಜಾನಕಿರಾಮ್ ತಿಳಿಸಿದರು.
ತಾಲೂಕಿನ ಐತರಾಸನಹಳ್ಳಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ನಿರ್ಮಲ ಭಾರತ ಅಭಿಯಾನದ ಸ್ವಚ್ಛತಾ ಉತ್ಸವ ಮುಕ್ತಾಯ ಸಮಾರಂಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಈಗಾಗಲೇ ಗುರುತಿಸಿರುವ ಶೌಚಾಲಯ ರಹಿತ ಕುಟುಂಬಗಳಿಗೆ ಸರ್ಕಾರ ನೀಡುವ ಅನುದಾನ ಸಮರ್ಪಕವಾಗಿ ಬಳಸಿಕೊಂಡು ನಿಗದಿತ ಸಮಯದೊಳಗೆ ಶೌಚಾಲಯ ನಿರ್ಮಿಸುವ ಕಾರ್ಯ ಮುಗಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದರು.
ತಾಪಂ ನಿರ್ಮಲ ಭಾರತ ಅಭಿಯಾನ ಸಂಯೋಜಕ ಜಿ. ಶ್ರೀನಿವಾಸ ಮಾತನಾಡಿ, 1668ರಿಂದ ಕಡ್ಡಾಯವಾಗಿ ಸಂವಿಧಾನಿಕವಾಗಿ ಪ್ರತಿ ಮನೆಗಳಲ್ಲೂ ಶೌಚಾಲಯ ಪ್ರಾರಂಭಿಸುವ ಚಿಂತನೆ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸುವ ಕಾರ್ಯ ಜಾರಿಯಲ್ಲಿದೆ. ಇದಕ್ಕೆ ಪಂಚಾಯಿತಿಗಳು ನೆರವು ನೀಡುತ್ತಿವೆ. ಆದರೆ, ಕಾಮಗಾರಿ ಆರಂಭಿಸಲು ಮನೆಯ ಮನಸ್ಸುಗಳು ಕೆಲಸ ಮಾಡಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ಪಿ. ನಾಗಮಣಿ ಮಾತನಾಡಿ, ಐತರಾಸನಹಳ್ಳಿ ಗ್ರಾಪಂ ಸಂಪೂರ್ಣ ನೈರ್ಮಲ್ಯ ಗ್ರಾಮ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿಕ್ಕನರಸಿಂಹಯ್ಯ, ಲಕ್ಷ್ಮೀಷಕಾಮತ್, ತಾಪಂ ವೀರಭದ್ರಗುಪ್ತ, ಸುಬ್ರಮಣ್ಯಂ, ರಾಜೇಂದ್ರಬಾಬು, ಮುಖ್ಯ ಶಿಕ್ಷಕ ಕೃಷ್ಣಾರೆಡ್ಡಿ ಇದ್ದರು.