ಗೃಹಿಣಿ ಮೇಲೆ ಹಲ್ಲೆ ನಡೆಸಿ ಮನೆ ಲೂಟಿ
ಗುಡಿಬಂಡೆ: ಪಟ್ಟಣದ ಬಾಪೂಜಿ ನಗರದ ಕ್ಯೂಬಾ ಮಸೀದಿ ಸಮೀಪದ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಮನೆಯೊಡತಿಯ ಮೇಲೆ ಮಾರಕಾಸ್ತ್ರಗಳಿಂದ ಬೆದರಿಸಿ 30 ಸಾವಿರ ನಗದು ಲೂಟಿ ಮಾಡಿರುವ ಘಟನೆ ಸೋಮವಾರ ನಡೆದಿದೆ. ಬಾಪೂಜಿನಗರ ನಿವಾಸಿ ಅಖಿಲ್ ಅಹಮದ್ ಎಂಬವರ ಮನೆಯಲ್ಲಿ ದರೋಡೆ ನಡೆದಿದ್ದು, ಈ ಸಂಬಂಧ ಅವರ ಪತ್ನಿ ನಾಜೀರಾ ಬೇಗಂ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಖಿಲ್ ಅಹಮದ್ ಹುಷಾರು ಇಲ್ಲದವರಿಗೆ ಮಂತ್ರ ಹಾಕುತ್ತಿದ್ದು, ಸೋಮವಾರ ಬೆಂಗಳೂರುಗೆ ಹೋಗಿದ್ದರು. ಅವರ ಪತ್ನಿ ನಾಜೀರಾ ಬೇಗಂ ಮಗ ಅಬ್ದುಲ್ಲಾ, ಮಗಳು ಹಬೀಬ ಮತ್ತು ಆಯೀಷಾ ತಬಸುಂ ಮನೆಯಲ್ಲಿದ್ದರು. ಮೂರುಜನ ಮಕ್ಕಳು ತರಕಾರಿ ತರಲು ಹೊರಗೆ ಹೋಗಿದ್ದ ಸಮಯದಲ್ಲಿ ಮಂತ್ರ ಹಾಕಿಸಿಕೊಳ್ಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಚಾಕು ತೋರಿಸಿ ಹಣ ಹಾಗೂ ಚಿನ್ನಾಭರಣ ನೀಡುವಂತೆ ಬೆದರಿಸಿ 30 ಸಾವಿರ ದೋಚಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ಆರಕ್ಷಕ ವೃತ್ತ ನಿರೀಕ್ಷಕ ಶಿವಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.