ಭೂ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
ಚಿಕ್ಕಬಳ್ಳಾಪುರ; ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ರಸ್ತೆ ನಿರ್ಮಾಣ ಮತ್ತು ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಕೃಷಿ ಭೂಮಿಗೆ ಇನ್ನೂ ಪರಿಹಾರ ಸಮರ್ಪಕವಾಗಿ ವಿತರಣೆ ಮಾಡದಿರುವುದನ್ನು ಖಂಡಿಸಿ ರೈತ ಮುಖಂಡರು ಜಿಲ್ಲಾಡಳಿತ ಭವನದ ಮುಂದೆ ಸೀಮೆಹಸುಗಳು ಮತ್ತು ಕುರಿಗಳ ಸಮೇತ ಪ್ರತಿಭಟನೆ ನಡೆಸಿದರು.
ನಗರದ ಹೊರ ವಲಯದಲ್ಲಿರುವ ನೂತನ ಜಿಲ್ಲಾಡಳಿತ ಭವನದೊಳಗೆ ಸೀಮೆಹಸುಗಳು ಮತ್ತು ಕುರಿಗಳನ್ನು ತಂದು ಪ್ರತಿಭಟನೆ ನಡೆಸಲು ರೈತರು ಮುಂದಾದರು. ಆದರೆ,ಪೊಲೀಸರು ರಾಸುಗಳನ್ನು ಒಳಗಡೆಗೆ ಬಿಡಲು ಒಪ್ಪಲಿಲ್ಲ. ಇದರಿಂದ ವಿಧಿಯಿಲ್ಲದೇ ಭವನದ ಮುಂಭಾಗವೇ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ತಾರತಮ್ಯ ಏಕೆ: 2007 ರಲ್ಲಿ ಚಿಕ್ಕಬಳ್ಳಾಪುರದ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 7 ರ ಅಗಲೀಕರಣ ಮತ್ತು ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ಆಗ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಪರಿಹಾರ ಕೊಡದ ಕಾರಣ ಪ್ರತಿಭಟನೆ, ಹೋರಾಟ ಕೈಗೊಂಡು ಭೂಮಿ ಕೊಡಲು ನಿರಾಕರಿಸಲಾಯಿತು. ಇದರಿಂದ ಅಧಿಕಾರಿಗಳು ಎಕರೆಗೆ ತಲಾ 20 ಲಕ್ಷ ರು. ಪರಿಹಾರ ನೀಡುತ್ತೇವೆ ಎಂಬ ಭರವಸೆ ಕೊಟ್ಟು ಭೂಮಿಯನ್ನು ವಶಕ್ಕೆ ಪಡೆದು ರಸ್ತೆ ನಿರ್ಮಿಸಿದರು. ಈಗಾಗಲೇ ರಾಷ್ಟ್ರೀಯ ಹೆದ್ದಾರಿ 7 ನಿರ್ಮಾಣವಾಗಿ ವಾಹನಗಳು ಸಂಚರಿಸುತ್ತಿವೆ. ಆದರೆ,ಪರಿಹಾರ ಸಮರ್ಪಕವಾಗಿ ಸಿಕ್ಕಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳು ಅವೈಜ್ಞಾನಿಕ ಧೋರಣೆಯಿಂದ ರೈತರಿಗೆ ಭೂ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು, ಅಕ್ಕಪಕ್ಕದಲ್ಲಿ ಜಮೀನುಗಳಿದ್ದರೂ ಒಬ್ಬರಿಗೆ ಹೆಚ್ಚಿನ ಪರಿಹಾರ, ಮತ್ತೊಬ್ಬರಿಗೆ ಅಲ್ಪ ಪರಿಹಾರ ನೀಡಿದ್ದು ಇದರ ಬಗ್ಗೆ ಪ್ರಶ್ನಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಿದ್ದಾರೆ ಎಂದು ಅಳಲು ತೋಡಿಕೊಂಡರು.
ಈಗಾಗಲೇ ಭೂಮಿ ಕಳೆದುಕೊಂಡು 5 ವರ್ಷ ಕಳೆದಿದ್ದು ಅನೇಕ ರೈತರು ಭೂಮಿ ಇಲ್ಲದೇ, ಇತ್ತ ಪರಿಹಾರವೂ ಇಲ್ಲದೇ ಜೀವನ ನಡೆಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಿಂದೆ ನೀಡಿರುವ ಮಾತಿನಂತೆ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನೀವೇ ತೆಗೆದುಕೊಳ್ಳಿ: ಇದಕ್ಕೂ ಮುಂಚೆ ರಾಸುಗಳನ್ನು ಒಳಗೆ ಬಿಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆಯಿತು. ಒಳಗೆ ಹೋಗಲು ನಮಗೆ ಅವಕಾಶ ಕೊಟ್ಟು ರಾಸುಗಳನ್ನು ಒಳಗೆ ಬಿಡದಿದ್ದಾಗ ಅವುಗಳನ್ನು ಯಾರು ನೋಡಿಕೊಳ್ಳುತ್ತಾರೆ.
ನೀವೇ ನೋಡಿಕೊಳ್ಳಿ, ನಾವು ಪ್ರತಿಭಟನೆ ನಡೆಸುತ್ತೇವೆ ಎಂದ ರೈತರು, ತಮಗೆ ಬೆಂಬಲ ನೀಡಿ ಹೋರಾಟದಲ್ಲಿ ಭಾಗವಹಿಸುವಂತೆ ಪೊಲೀಸರಿಗೇ ಆಹ್ವಾನ ನೀಡಿದರು. ಯಲುವಹಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ಮನೋಹರ್, ರಾಮಕೃಷ್ಣಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್, ಬಾಬುರೆಡ್ಡಿ, ಸೋಮಶೇಖರ್, ಆನಂದಮೂರ್ತಿ ಇದ್ದರು.