ಮತ್ತೆ ಟೀ ಸ್ಟಾಲ್ ಸೇರಿದ ಅಂಗವಿಕಲ
ಪಾ.ಶ್ರೀ. ಅನಂತರಾಮ್
ಕೋಲಾರ: ಕಳೆದ ನಾಲ್ಕು ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ವಿಕಲಚೇತನ ನಿಜಾಮ್ ಪಾಷ ಈಗ ಕೋಲಾರ-ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಟೀ ಸ್ಟಾಲ್ನಲ್ಲಿ ಅಂಗಡಿ ಮಾಲೀಕನಿಗೆ ಸಹಾಯಕನಾಗಿದ್ದಾನೆ.
ಮನೆಯಲ್ಲಿನ ಬಡತನ, ತಾಯಿ ಮಕ್ಕಳ ಪೋಷಣೆಗಾಗಿ ಪಡುತ್ತಿದ್ದ ಕಷ್ಟ ನೋಡಿದ್ದ ನಿಜಾಮ ತನ್ನ 10ನೇ ವಯಸ್ಸಿನಲ್ಲೇ ಪರಿಚಯವಿದ್ದ ಸ್ಟ್ಯಾಂಡರ್ಡ್ ಟೀಸ್ಟಾಲಿನ ಮಾಲೀಕ ಸೈಯಾಜ್ ಅಷ್ರತ್ ಅವರ ಬಳಿ ಕೆಲಸಕ್ಕೆ ಸೇರಿದ್ದ. ಸ್ನೇಹಿತರ ಸಹವಾಸದಿಂದಾಗಿ ಒಂದು ದಿನ ಮನೆಯಲ್ಲಿ ಯಾರಿಗೂ ಹೇಳದೆ ಸ್ನೇಹಿತರೊಂದಿಗೆ ಬೆಂಗಳೂರಿಗೆ ಹೋಗಿ ಊರಿಗೆ ವಾಪಸ್ ಬರುವುದಕ್ಕಾಗಿ ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಬಂದಾಗ ರೈಲು ಮುಂದೆ ಸಾಗಿತ್ತು.
ಇದೇ ರೈಲಿನಲ್ಲೇ ಊರಿಗೆ ಹೋಗಬೇಕೆಂಬ ಹಠದಿಂದ ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋದಾಗ ರೈಲಿನಡಿ ಸಿಕ್ಕಿ ಬಲಗಾಲು ಮತ್ತು ಬಲಗೈ ಎರಡನ್ನೂ ಕೆಳೆದುಕೊಂಡ. ವೈದ್ಯರು ನಿಜಾಮ ಬದುಕುವುದೇ ಕಷ್ಟವೆಂದು ಅನುಮಾನಪಟ್ಟಿದ್ದರು. ಆದರೆ, ಬದುಕುಳಿದ ಬಾಲಕ ಒಂದು ಕಾಲಿನಲ್ಲಿ ಓಡಾಡಲು ಆಗದೆ ಹಾಗೂ ಬಲಗೈ ಇಲ್ಲದೆ ಕೆಲಸ ಮಾಡುವುದು ಕಷ್ಟವಾಗಿದ್ದರಿಂದ ಕೆಲವು ತಿಂಗಳು ಮನೆಯಲ್ಲೇ ಇರಬೇಕಾಯಿತು.
ತಂದೆ ಇಲ್ಲದ ಮನೆಗೆ ತಾಯಿ ಗುಲಾಬ್ ಜಾನ್ ಆಶ್ರಯವಾಗಿದ್ದರು. ನಾಲ್ಕು ಮಂದಿ ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಸಾಕಬೇಕಾಗಿತ್ತು. ಮೊದಲ ಅಣ್ಣ ಮದುವೆಯಾದ ಬಳಿಕ ಬೇರೆ ಮನೆ ಮಾಡಿಕೊಂಡು ಹೋಗಿದ್ದರಿಂದ ಮನೆಯ ನಿರ್ವಹಣೆ ಇನ್ನಷ್ಟು ಕಷ್ಟವಾಯಿತು.
ಒಂದು ದಿನ ತಾಯಿಯ ಜೊತೆಗೆ ಬೆಂಗಳೂರಿಗೆ ಹೋಗಿ ಕೃತಕ ಕಾಲಿನೊಂದಿಗೆ ಕೋಲಾರಕ್ಕೆ ಬಂದ ನಿಜಾಮ ಟೀ ಸ್ಟಾಲ್ ಮಾಲೀಕನ ಬಳಿ ಹೋಗಿ ಕೆಲಸ ಕೇಳುವುದಕ್ಕೆ ಧೈರ್ಯವಿಲ್ಲದೆ ಪರದಾಡುತ್ತಿದ್ದಾಗ ಪರಿಚಿತರೊಬ್ಬರು ಕೋಲಾರದ ನಚಿಕೇತ ನಿಲಯದ ಮುಂದೆ ಇರುವ ಪೆಟ್ರೋಲ್ ಬಂಕ್ ಮಾಲೀಕರ ಬಳಿ ಕರೆದೊಯ್ದು ಸಣ್ಣ ಕೆಲಸ ನೀಡುವಂತೆ ಕೋರಿದಾಗ ಮಾಲೀಕರು ಅನುಕಂಪ ತೋರಿ ಕೆಲಸ ನೀಡಿದ್ದರು.
ಪ್ಲಾಷ್ ಬ್ಯಾಕ್; ಕಳೆದ ಮೂರುವರೆ ವರ್ಷಗಳ ಹಿಂದೆ ಪೆಟ್ರೋಲ್ ಬಂಕ್ ಬಳಿ ಕನ್ನಡಪ್ರಭ ಕಣ್ಣಿಗೆ ಬಿದ್ದ ನಿಜಾಮನ ಯಶೋಗಾಥೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಬಲಗಾಲಿನ ಕೃತಹ ಕಾಲು ಕಿತ್ತು ಹೋಗಿ ನಡೆಯಲು ಸಾಧ್ಯವಾಗದ ಸ್ಥಿತಿಯನ್ನು ಪ್ರಕಟಿಸಲಾಗಿ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯ ಪ್ರತಿನಿಧಿಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿ ಗಮನಿಸಿ ನಿಜಾಮನಿಗೆ ಹೊಸದೊಂದು ಕೃತಕ ಕಾಲು ಒದಗಿಸಿದ್ದರು.
ಡಿ.3 ರಂದು ನಡೆಯಲಿರುವ ಅಂಗವಿಕಲರ ದಿನಾಚರಣೆಯ ಸಂದರ್ಭದಲ್ಲಿ ನಿಜಾಮನ ಸ್ಥಿತಿ-ಗತಿ ಏನಾಗಿರಬಹುದೆಂದು ಕನ್ನಡಪ್ರಭ ತಡಕಾಡಿದಾಗ ಅಲ್ಲಿದ್ದ ಸಿಬ್ಬಂದಿ ನಿಜಾಮ ಇಲ್ಲಿ ಕೆಲಸ ಬಿಟ್ಟು ಅರಹಳ್ಳಿ ಸಮೀಪದ ಟೀ ಸ್ಟಾಲ್ನಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿಸಿದರು. ಅಲ್ಲಿಗೆ ಹೋಗಿ ನೋಡಿದಾಗ ಮಸೀದಿಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದ.
ಕಳೆದ ಮೂರುವರೆ ವರ್ಷಗಳ ಹಿಂದೆ ಕನ್ನಡಪ್ರಭ ತನ್ನನ್ನು ಸಂದರ್ಶಿಸಿದ್ದನ್ನು ನೆನಪು ಮಾಡಿಕೊಂಡು ಮಾತು ಮುಂದುವರೆಸಿದ. ಪೆಟ್ರೋಲ್ ಬಂಕ್ ಮಾಲೀಕ ನಿನ್ನ ಕೈಯಲ್ಲಿ ಕಷ್ಟದ ಕೆಲಸ ಆಗಲ್ಲವೆಂದು ಹೇಳಿದ. ವಿಧಿ ಇಲ್ಲದೆ ಮತ್ತೆ ಟೀ ಸ್ಟಾಲ್ ಸೇರಿಕೊಂಡೆ. ಹಿಂದೆ ಇದೇ ಅಂಗಡಿಯಲ್ಲಿ ಕೆಲವು ವರ್ಷ ಕೆಲಸ ಮಾಡಿದ್ದೇನೆ.
ಆಗ ಟೀ-ಕಾಫಿ ಮಾಡುವುದು ಕಲಿತಿದ್ದೆ, ಅಕ್ಕ-ಪಕ್ಕದ ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದೆ. ಈಗ ಗಲ್ಲಾ ಮುಂದೆ ಕುಳಿತು ಗಿರಾಕಿಗಳು ಕೇಳಿದ ಸಿಗರೇಟ್, ಬೀಡಿ ನೀಡಿ, ಸಂಗ್ರಹಣೆ ಆಗುವ ಹಣವನ್ನು ಮಾಲೀಕರಿಗೆ ಕೊಟ್ಟು ಆತ ನೀಡುವ ಸಂಬಳದಿಂದ ಜೀವನ ಸಾಗಿಸುತ್ತಿದ್ದೇನೆಂದು ಹೇಳಿಕೊಂಡ. ಎಲ್ಲಾ ಅಂಗಾಂಗಗಳು ಸರಿಯಿದ್ದರೂ ಕಷ್ಟಪಟ್ಟು ಕೆಲಸ ಮಾಡಿ ಜೀವನಕ್ಕೆ ಮಾರ್ಗ ಹುಡುಕಿಕೊಳ್ಳದೆ ಸೋಮರಿಗಳಾಗಿರುವವರಿಗೆ ನಿಜಾಮ್ ಪಾಷ ನಿಜಕ್ಕೂ ಸ್ಫೂರ್ತಿದಾಯಕನೆಂದರೆ ಅತಿಶಯೋಕ್ತಿ ಆಗಲಾರದು.