'ಅಂಗವಿಕಲರೆಡೆ ತಾರತಮ್ಯ ಬೇಡ'
ಗುಡಿಬಂಡೆ: ಅಂಗವಿಕಲತೆಯೆಂಬುದು ದೇಹದಲ್ಲಿನ ಒಂದು ನ್ಯೂನತೆಯೇ ವಿನಾ ಶಾಪವಲ್ಲ. ಅಂಥವರನ್ನು ತಾರತಮ್ಯ ಮನೋಭಾವದಿಂದ ಕಾಣದೆ ಅವರು ಉತ್ತಮ ಜೀವನ ನಡೆಸಲು ಸಮಾಜ ಸಹಕರಿಸಬೇಕೆಂದು ಜಿಪಂ ಸದಸ್ಯ ಎಂ.ವಿ.ಕೃಷ್ಣಪ್ಪ ಸಲಹೆ ನೀಡಿದರು.
ಪಟ್ಟಣದ ಬಿಸಿಎಂ ಹಾಸ್ಟೆಲ್ ಆವರಣದಲ್ಲಿ ತಾಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಪಂ ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಗುಡಿಬಂಡೆ ತಾಲೂಕು ಅಂಗವಿಕಲರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಅವರು ಹಸಿರು ನಿಶಾನೆ ತೋರಿ ಮಾತನಾಡಿದರು.
ಸರ್ಕಾರದ ಸವಲತ್ತುಗಳ ಗ್ರಾಮೀಣ ಅಂಗವಿಕಲರನ್ನು ತಲುಪಬೇಕು. ಹಲವರು ತಾವು ಅಂಗವಿಕಲರೆಂದು ಸುಳ್ಳು ಹೇಳಿ ಸರ್ಕಾರಿ ಸವಲತ್ತು ಪಡೆಯಲು ಮುಂದಾಗುತ್ತಿದ್ದಾರೆ. ಇಂತಹ ವಿಚಾರಗಳಲ್ಲಿ ಅಧಿಕಾರಿಗಳು ಜಾಗೃತೆ ವಹಿಸಿ ಅಂಗವಿಕಲರ ಹಕ್ಕುಗಳನ್ನು ರಕ್ಷಿಸಬೇಕೆಂದರು.
ಈ ವೇಳೆ ಮಾತನಾಡಿದ ತಹಸೀಲ್ದಾರ್ ಶೈಲಜಾ, ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿದ್ದು, ಅಂಗವಿಕಲರಲ್ಲಿ ಹಲವು ಮಂದಿ ಇತರರಿಗೆ ಮಾದರಿಯಾಗಿ ವಿಶ್ವದ ಗಮನವನ್ನೇ ಸೆಳೆದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ ಕಾರ್ಯ ನಿರ್ವಹಣಾಧಿಕಾರಿ ಆರ್.ಇಂದ್ರೇಶ್, ತಾವು ಅಂಗವೈಕಲ್ಯ ಹೊಂದಿದ್ದರೂ ಮಾನಸಿಕವಾಗಿ ದೃಢಸಂಕಲ್ಪದಿಂದ ತಮ್ಮ ಮುಂದಿರುವ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಿ ಜೀವನ ನಡೆಸುತ್ತಿದ್ದು, ಪ್ರತಿಯೊಬ್ಬ ಅಂಗವಿಕಲ ತನ್ನ ದೈಹಿಕ ನ್ಯೂನ್ಯತೆಯನ್ನು ಲೆಕ್ಕಿಸದೇ ಮಾನಸಿಕವಾಗಿ ಸದೃಢರಾಗಿ ಬೆಳೆಯಬೇಕೆಂದರು.
ಈ ಸಂದರ್ಭದಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಈ ವೇಳೆ ಬಿಇಒ ರವಿಕುಮಾರ್, ಸಿಡಿಪಿಒ ಸಿದ್ದಲಿಂಗಪ್ಪ, ಡಿಸಿಸಿ ಬ್ಯಾಂಕ್ ನಿದೇಶಕ ಎಚ್.ನರಸಿಂಹರೆಡ್ಡಿ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ವಕೀಲ ಜಿ.ವಿ.ವಿಶ್ವನಾಥ್, ಪಪಂ ನೂತನ ಸದಸ್ಯರಾದ ದ್ವಾರಕನಾಥ ನಾಯ್ಡು, ರಾಜಣ್ಣ, ಲಕ್ಷ್ಮೀಕಾಂತಮ್ಮ, ಎನ್.ರಮೇಶ್ ಸೇರಿದಂತೆ ಹಲವರಿದ್ದರು.