ಆರೋಗ್ಯ ಅಧಿಕಾರಿಗಳ ತಂಡ ಭೇಟಿ
ಮಾಲೂರು: ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡ ಪಟ್ಟಣದ ಗಾಂಧೀ ವೃತ್ತದಲ್ಲಿರುವ ಮಣಿಪಾಲ್ ಹೆಲ್ತ್ ಸೆಂಟರ್ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನೆಡೆಸಿತು.
ನಿಯಮ ಉಲ್ಲಂಘಿಸಿ ಇಲ್ಲಿನ ಮಣಿಪಾಲ್ ಹೆಲ್ತ್ ಸೆಂಟರ್ನ ಆರ್ಯುವೇದ ವೈದ್ಯ ಡಾ.ಎಸ್.ಪಿ. ಅದಿತ್ಯ ಅಲೋಪತಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಜಿಲ್ಲಾ ವೈದ್ಯಾಧಿಕಾರಿ ಕುಪ್ಪಸ್ವಾಮಿ, ಆರ್ಯುವೇದಿಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮುರಳಿಧರ್ ಅವರನ್ನು ಒಳಗೊಂಡ ತಂಡ ಪರಿಶೀಲನೆ ನಡೆಸಿದಾಗ ಸಾರ್ವಜನಿಕರ ದೂರಿನಂತೆ ರೋಗಿಗಳಿಗೆ ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿತ್ತು. ಅದಲ್ಲದೇ ಆಸ್ಪತ್ರೆ ಕೋಣೆಯಲ್ಲಿ ಅಲೋಪತಿ ಔಷಧಿಗಳನ್ನು ದಾಸ್ತನು ಮಾಡಿರುವುದು ಕಂಡು ಬಂದಿತ್ತು. ಈ ಬಗ್ಗೆ ಆಸ್ವತ್ರೆ ವೈದ್ಯರಿಗೆ ಎಚ್ಚರಿಕೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಪ್ಪಸ್ವಾಮಿ ಮುಂದಿನ ವಾರ ಭೇಟಿ ನೀಡುವ ವೇಳೆಗೆ ಆಸ್ವತ್ರೆಯಲ್ಲಿ ಅರ್ಯುವೇದ ಚಿಕಿತ್ಸೆ ಮಾತ್ರ ನಡೆಯುತ್ತಿರಬೇಕು. ಒಂದು ವೇಳೆ ಅಲೋಪತಿ ಚಿಕಿತ್ಸೆ ಮುಂದುವರೆಸಿದ್ದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ನಂತರ ಪತ್ರಕರ್ತರೊಡನೆ ಮಾತನಾಡಿ, ತಾಲೂಕಿನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಎಲ್ಲ ಖಾಸಗಿ ವೈದ್ಯರ ವಿದ್ಯಾರ್ಹತೆ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ಪಡೆಯಲಾಗಿದ್ದು, ಒಂದಿಬ್ಬರು ವೈದ್ಯರ ಪ್ರಮಾಣ ಪತ್ರ ಪರಿಶೀಲಿಸಲು ನೀಡಿಲ್ಲ. ಹಲವರು ನಕಲಿ ಪ್ರಮಾಣ ಪತ್ರದೊಂದಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ನೋಂದಣಿಯಿಲ್ಲದೆ ನಕಲಿ ಪ್ರಮಾಣ ಪತ್ರದೊಂದಿದೆ ಸೇವೆ ಸಲ್ಲಿಸುತ್ತಿರುವ ನಕಲಿ ವೈದ್ಯರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು. ತಾಲೂಕು ವೈದ್ಯಾಧಿಕಾರಿ ಡಾ. ಅನುರಾಧ, ಡಾ. ಶ್ರೀನಿವಾಸ ಗೌಡ ಇದ್ದರು.