ಗಡಿ ಭಾಗದಲ್ಲಿ ನಿಲ್ಲದ ಆನೆ ಉಪಟಳ
ಬಂಗಾರಪೇಟೆ: 20 ದಿನಗಳ ಹಿಂದೆ ತಮಿಳುನಾಡಿನಿಂದ ಆಹಾರ ಹುಡಿಕಿಕೊಂಡು ಬಂದಿರುವ ಕಾಡಾನೆಗಳ ಹಿಂಡು ದಾಂಧಲೆ ಮುಂದುವರೆಸಿದ್ದು ಸೋಮವಾರ ರಾತ್ರಿ ಸಹ ಗಡಿ ಗ್ರಾಮಗಳ ತೋಟಗಳಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.
ಆನೆಗಳ ಹಿಂಡು ರಾಜ್ಯದ ಗಡಿ ಪ್ರದೇಶವಾದ ಬತ್ತಲಹಳ್ಳಿ, ತಳೂರು, ದೋಣಿಮಡಗು, ಕಾಳ್ಳಮ್ಮನ ಗುಡಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೀಡು ಬಿಟ್ಟು ರೈತರ ಅಪಾರ ಪ್ರಮಾಣದ ಬೆಳೆಗಳನ್ನು ಪ್ರತಿದಿನ ನಾಶ ಮಾಡುತ್ತಿವೆ. ಆದರೂ ಅರಣ್ಯ ಇಲಾಖೆ ಮಾತ್ರ ಅವುಗಳನ್ನು ನಿಯಂತ್ರಿಸದೆ ಹೆಸರಿಗೆ ಕಾರ್ಯಾಚರಣೆ ಮಾಡುತ್ತಿದೆ. ರೈತರು ಭಯ ಪಡುವ ಅಗತ್ಯವಿಲ್ಲ. ಎರಡು ಮೂರು ದಿನದೊಳಗೆ ಆನೆಗಳು ರಾಜ್ಯದ ಅರಣ್ಯ ಪ್ರದೇಶದಲ್ಲಿ ಇರುವುದಿಲ್ಲ ಎಂದು ಕಳೆದ 20 ದಿನಗಳಿಂದ ಹೇಳುತ್ತಿದೆ. ಆದರೆ, ಇದುವರೆಗೂ ಯಾವುದೂ ಯಶಸ್ವಿಯಾಗಿಲ್ಲ.
ಬತ್ತಲಹಳ್ಳಿ ಗ್ರಾಮದ ರಾಮಕೃಷ್ಣ, ಅಂಗಡಿ ಶ್ರೀನಿವಾಸ್, ನಾರಾಯಣಪ್ಪ,ತಿಮ್ಮೇಗೌಡ, ಲಕ್ಷ್ಮಮ್ಮ ಮತ್ತಿತರ ರೈತರ ಬಾಳೆ ತೋಟ, ರಾಗಿ ತೋಟ, ಕಲ್ಲಂಗಡಿ ತೋಟ, ಟೊಮೆಟೋ ಮತ್ತಿತರ ಕಟಾವಿಗೆ ಬಂದಿದ್ದ ಫಸಲನ್ನು ಆನೆಗಳು ತುಳಿದು ನಾಶಪಡಿಸಿವೆ. ಬರಗಾಲದಲ್ಲಿ ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ಈಗ ಕೈಗೆ ಬಾರದೆ ಕಣ್ಣ ಮುಂದೆಯೇ ನಾಶವಾಗುತ್ತಿರುವುದರಿಂದ ರೈತರು ಮತ್ತಷ್ಟು ಆರ್ಥಿಕವಾಗಿ ದಿವಾಳಿಯತ್ತ ಸಾಗಿದ್ದಾರೆ. ಸಂಜೆ 6 ಗಂಟೆಯಾಗುತ್ತಿದ್ದಂತೆ ಆನೆಗಳು ರೈತರ ಗದ್ದೆಗಳಿಗೆ ಲಗ್ಗೆ ಹಾಕುತ್ತಿವೆ. ಗ್ರಾಮಸ್ಥರು ಕತ್ತಲಾಗುತ್ತಿದ್ದಂತೆ ಮನೆಗಳನ್ನು ಸೇರುವಂತಾಗಿದೆ. ಅಲ್ಲದೆ 6 ಗಂಟೆ ನಂತರ ದೂರದ ಊರುಗಳಿಂದ ಈ ಗ್ರಾಮಗಳಿಗೆ ಬರಲು ಜನರೂ ಹೆದರುವಂತಾಗಿದೆ.
20 ದಿನಗಳಿಂದ ಆನೆಗಳು ಇಷ್ಟೆಲ್ಲಾ ರಾದ್ಧಾಂತ ಮಾಡುತ್ತಿದ್ದರೂ ಜನಪ್ರತಿನಿದಿಗಳು ಚಕಾರ ಎತ್ತದೆ ಮೌನಕ್ಕೆ ಶರಣಾಗಿರುವುದು ರೈತರನ್ನು ಕೆರಳುವಂತೆ ಮಾಡಿದೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತ್ರ ರೈತರು ಯಾವುದೇ ಭಯಪಡುವ ಅಗತ್ಯವಿಲ್ಲ. ಆನೆಗಳನ್ನು ಓಡಿಸುವ ತಂಡ ಬಂದಿದೆ. ಆದಷ್ಟು ಬೇಗ ರೈತರಿಗೆ ಮುಕ್ತಿ ಸಿಗಲಿದೆ ಹಾಗೂ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಕೊಡಿಸಲಾಗುವುದು ಹಾಗೂ ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವುದಾಗಿ ಹೇಳಿರುವುದು ಸ್ವಲ್ಪ ನೆಮ್ಮದಿ ತಂದಿದೆ.