ಮತದಾರರ ಪಟ್ಟಿ ಪರಿಷ್ಕರಣೆ ಜಾಥಾಕ್ಕೆ ಚಾಲನೆ
ಕೆಜಿಎಫ್: ನಗರಸಭೆ ಕಾರ್ಯಾಲಯ ವತಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ 2014ರ ಜಾಥಾವನ್ನು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತ್ತು ನೂರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಜಾಥಾವನ್ನು ನಗರಸಭೆ ಮೈದಾನದಲ್ಲಿ ನಗರಸಭೆ ವ್ಯವಸ್ಥಾಪಕ ನಂಜುಂಡಸ್ವಾಮಿ ಚಾಲನೆ ನೀಡಿದರು.
ಕೆಜಿಎಫ್ ವಿಧಾನಸಭಾ ಕ್ಷೇತ್ರ(ಮೀಸಲು) ಎಲ್ಲಾ ಯುವಕ ಯುವತಿಯರು, ವಿದ್ಯಾರ್ಥಿಗಳು ಹಾಗೂ 18 ವರ್ಷ ತುಂಬಿದ ಸಾರ್ವಜನಿಕರರು ತಪ್ಪದೆ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಮುಂದಾಗಬೇಕು ಮತ್ತು ತಮ್ಮ ಮತ ಚಲಾವಣೆಯ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ಮತದಾರರ ಪಟ್ಟಿ ಪರಿಷ್ಕರಣೆ ಜಾಥಾವನ್ನು ನಗರದ ಸೂರಜ್ಮುಲ್ ವೃತ್ತ, ಗಾಂಧಿವೃತ್ತ, ಪ್ರಿಚರ್ಡ್ರಸ್ತೆ, ಗೀತಾ ರಸ್ತೆ ಸೇರಿದಂತೆ ನಗರದ ಇತರೆ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ನಗರಸಭೆ ವ್ಯವಸ್ಥಾಪಕ ನಂಜುಂಡಸ್ವಾಮಿ 18 ವರ್ಷ ತುಂಬಿದ ಎಲ್ಲಾ ಯುವಕರು ಮತ್ತು ವಿದ್ಯಾರ್ಥಿಗಳು ತಪ್ಪದೆ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು. ದೇಶದ ಮುಂದಿನ ಉತ್ತಮ ರಾಷ್ಟ್ರವನ್ನಾಗಿಸಲು ವಿದ್ಯಾರ್ಥಿಗಳ ಪಾತ್ರ ಮತ್ತು ಮತ ಅತ್ಯಮೂಲ್ಯವಾದದ್ದು ಎಂದರು.
ಜಾಥಾ ಪ್ರಾರಂಭಕ್ಕೆ ಮುನ್ನಾ ನಗರಸಭೆ ಮೈದಾನಕ್ಕೆ ಆಗಮಿಸಿದ ಕರ್ನಾಟಕ ಸಮತ ಸೈನಿಕ ದಳ ಜಿಲ್ಲಾ ಸಂಚಾಲಕ ಜಯಕುಮಾರ್(ಜರೀ)2013 ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಜಿಎಫ್ ಕ್ಷೇತ್ರದ ಸುಮಾರು 18 ಸಾವಿರ ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಮತದಾರರ ಪಟ್ಟಿಯಿಂದ ಕೈಬಿಡಲಾದವರ ಹೆಸರುಗಳನ್ನು ಮತದಾನ ಪಟ್ಟಿಯಲ್ಲಿ ಸೇರಿಸಲು ಅರ್ಜಿಗಳನ್ನು ನೀಡಿದ್ದರೂ ಚುನಾವಣೆ ಮುಗಿದು ಆರು ತಿಂಗಳು ಕಳೆದರೂ ಈವರೆಗೆ ಒಂದು ಗುರುತಿನ ಚೀಟಿಯನ್ನು ಸಹ ನಗರಸಭೆ ವತಿಯಿಂದ ನೀಡಿಲ್ಲ ಎಂದು ಆರೋಪಿಸಿದು. ಆದರೆ ಚುನಾವಣೆ ವೇಳೆ ಅಂದಿನ ಶಾಸಕರು ಮತ್ತು ಇತರೇ ರಾಜಕೀಯ ಮುಖಂಡರು ನೀಡಿದ ಅರ್ಜಿಗಳನ್ನು ಮಾತ್ರ ವಿತರಿಸಿದ್ದು ಬಡ ಕುಟುಂಬದ ಮತ್ತು ಅಮಾಯಕರಿಗೆ ಇಲ್ಲಿವರೆಗೂ ನೀಡಿಲ್ಲ. 300 ರಿಂದ 500 ರೂಗಳನ್ನು ನೀಡದೆ ಒಂದೆ ದಿನದಲ್ಲಿ ಮತದಾನ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ. ಆದರೆ ತೀರಾ ಬಂಡವರು ಬಂದರೆ ಅವರನ್ನು ತಿಂಗಳುಗಟ್ಟೆಲೆ ಸುತ್ತಾಡಿಸುತ್ತಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳು ಗಮನ ಹರಿಸಿ ಈ ಹಿಂದೆ ನೀಡಿರುವ ಅರ್ಜಿಗಳನ್ನು ಮೊದಲು ಪರಿಷ್ಕರಿಸಿ ಎಂದು ವ್ಯವಸ್ಥಾಪಕ ನಂಜುಂಡಸ್ವಾಮಿಗೆ ತಿಳಿಸಿದರು.
ಈ ವೇಳೆ ನಗರಸಭೆ ಹಿರಿಯ ಆರೋಗ್ಯಾಧಿಕಾರಿ ಸರಸ್ವತಿ, ಅಖಿಲಾ ಬಾನು, ಮುಖ್ಯ ಶಿಕ್ಷಕ ಅಶ್ವತ್, ಚಂದ್ರಶೇಖರ್ ಹಾಜರಿದ್ದರು.