ಮರಳು ಅಕ್ರಮ ದಂಧೆ ನಡೆಸಿದರೆ ಕ್ರಿಮಿನಲ್ ಕೇಸ್
ಮುಳಬಾಗಲು: ತಾಲೂಕಿನ ಹಲವಾರು ಗ್ರಾಮಗಳಿಂದ ಅಕ್ರಮವಾಗಿ ಮರಳು ಲಾರಿಗಳನ್ನು ಬೆಂಗಳೂರಿಗೆ ಸಾಗಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಹಿನ್ನಲೆಯಲ್ಲಿ ಜಿಲ್ಲಾಡಳಿತ ದೃಢ ನಿರ್ಧರ ತೆಗೆದುಕೊಂಡಿದ್ದು ಈಗಾಗಲೇ ನೂರಾರು ಲಾರಿಗಳನ್ನು ವಶಪಡಿಸಿಕೊಂಡು ಲಕ್ಷಾಂತರ ರುಪಾಯಿಗಳ ದಂಡ ವಿಧಿಸಿದೆ ಎಂದು ತಹಶೀಲ್ದಾರ್ ಡಿ.ವಿ.ರಾಮಮೂರ್ತಿ ತಿಳಿಸಿದ್ದಾರೆ.
ಇಷ್ಟರ ನಡುವೆಯೂ ಮರಳು ಸಾಗಾಣಿಕೆ ಮತ್ತು ಗಣಿಗಾರಿಕೆ ನಡೆಯುತ್ತಿರುವುದು ತಾಲೂಕು ಆಡಳಿತದ ಗಮನಕ್ಕೆ ಬಂದಿದ್ದು, ಇನ್ನು ಮುಂದೆ ಮುಳಬಾಗಲು ತಾಲೂಕಿನಲ್ಲಿ ಅಕ್ರಮವಾಗಿ ಮರಳು ಸಾಗಿಸಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.
ಕೆಎಂಆರ್ ಆಕ್ಟ್ ಹಾಗೂ ಕರ್ನಾಟಕ ಭೂಕಂದಾಯ ದಂಡ ಸಂಹಿತೆ ರೀತ್ಯಾ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಮರಳು ದಂಧೆಯಲ್ಲಿ ತೊಡಗಿರುವವರನ್ನು ರೌಡಿ ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.