ಶಾದಿ ಭಾಗ್ಯಕ್ಕಿಂತ ವಿಕಲಾಂಗರ ಕಲ್ಯಾಣ ಮುಖ್ಯ
ಕ.ಪ್ರ.ವಾರ್ತ್ಣೆ ಕೋಲಾರ್ಣ ಡಿ. 3
ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಶಾದಿ ಭಾಗ್ಯ ಯೋಜನೆಯಿಂದ ಪ್ರಯೋಜನವೇನು. ಇದಕ್ಕೆ ಬದಲು ಅಂಗವಿಕಲರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ನೀಡುವುದು ಸೂಕ್ತವೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ರೇಣುಕಾ ಪ್ರಸಾದ್ ಸಲಹೆ ನೀಡಿದರು.
ನಗರದ ಅಂತರಗಂಗೆಯ ರಸ್ತೆಯಲ್ಲಿರುವ ಅಂತರಗಂಗೆ ಬುದ್ಧಿ ಮಾಂಧ್ಯ ಸಂಸ್ಥೆಯಲ್ಲಿ ಮಂಗಳವಾರ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದಿಂದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಲ್ಲಿನ ವಿಕಲಚೇತನರಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಮಾತನಾಡಿದರು.
ಶಾದಿ ಭಾಗ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಕೋಟ್ಯಂತರ ರುಪಾಯಿಗಳನ್ನು ವೆಚ್ಚ ಮಾಡಲು ಆಸಕ್ತಿ ತೋರುವ ಸರ್ಕಾರ ಅಂಗವಿಕಲರ ಕಲ್ಯಾಣಕ್ಕಾಗಿ ಪರಿಣಾಮಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮೀನ-ಮೇಷ ಎಣಿಸುತ್ತಿರುವುದು ವಿಷಾದಕರ ಸಂಗತಿ ಎಂದರು.
ಶಾದಿ ಭಾಗ್ಯದಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಕೋಟ್ಯಂತರ ರುಪಾಯಿಗಳನ್ನು ಅನಗತ್ಯವಾಗಿ ವೆಚ್ಚ ಮಾಡುವ ಬದಲು ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಪಡುವಂತಹ ಸಮುದಾಯದ ಕಲ್ಯಾಣಕ್ಕೆ ಸರ್ಕಾರ ಹಣವನ್ನು ವಿನಿಯೋಗಿಸಿದಲ್ಲಿ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಲ್ಲದೆ, ಬಡ ಜನರಿಗೂ ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.
ಅಂಗವಿಕಲರಲ್ಲಿ ಆತ್ಮವಿಶ್ವಾಸ ಮೂಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದ ಅವರು, ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಾಧ್ಯವಾಗುವ ಸಹಾಯವನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.
ದೇಣಿಗೆ ಸಲ್ಲಿಕೆ: ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಾಧೀಶರು ತಲಾ 500ನ್ನು ಸಂಗ್ರಹಿಸಿ ಒಟ್ಟು ನಾಲ್ಕು ಸಾವಿರ ರು.ಗಳನ್ನು ಅಂತರಗಂಗೆ ಬುದ್ಧಿಮಾಂಧ್ಯ ಸಂಸ್ಥೆಯ ಕಾರ್ಯದರ್ಶಿ ಎಂ. ಶಂಕರಪ್ಪನವರಿಗೆ ನೀಡಿ ಈ ಹಣದಿಂದ ಮಕ್ಕಳಿಗೆ ಇಷ್ಟವಾದ ಸಿಹಿ ಮತ್ತು ಸಲಕರಣೆಗಳನ್ನು ಖರೀದಿಸಿ ಕೊಡುವಂತೆ ಸೂಚಿಸಿದರು.
ಹಿರಿಯ ವಕೀಲ ಸ.ನಾ. ಮೂರ್ತಿ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಜನರ ಬಳಿ ಹಣವಿದ್ದರೂ ದಾನ ಮಾಡುವಂತಹ ಮನಸ್ಸುಗಳು ಇರುವುದಿಲ್ಲ, ಕನಿಷ್ಠ ಇಂತಹ ಮಕ್ಕಳ ಕಲ್ಯಾಣಕ್ಕಾದರೂ ಉಳ್ಳುವರು ಮುಂದೆ ಬಂದು ಸಹಾಯ ಮಾಡಬೇಕು, ನ್ಯಾಯಾಧೀಶರು ಸಂಸ್ಥೆಯ ಮಕ್ಕಳಿಗೆ ಕೈಲಾದಷ್ಟು ಸಹಾಯ ಮಾಡಿ ಇತರರಿಗೆ ಮಾದರಿ ಆಗಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂಗಣ್ಣ ಬಿ. ಪಾಟೀಲ್, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಕಿಣಿಕೇರಿ, ನ್ಯಾಯಾದೀಶರಾದ ಮನಗೋಳಿ ಪ್ರೇಮಾವತಿ ಮಲ್ಲಿಕಾರ್ಜುನ್, ಬಿ.ವಿ.ರೇಣುಕಾ, ಕೆಂಗಬಾಲಯ್ಯ, ಜಿ.ಕುಮಾರ್, ಶಕುಂತಲಾ, ಆರ್. ನಟೇಶ್, ವಕೀಲ ಧನರಾಜ್ ಇದ್ದರು. ಅಂತರಗಂಗೆ ಬುದ್ದಿಮಾಂಧ್ಯ ಸಂಸ್ಥೆಯ ಕಾರ್ಯದರ್ಶಿ ಎಂ.ಶಂಕರ್ ಇದ್ದರು.ಸಂಸ್ಥೆಯ ಶಿಕ್ಷಕ ಶಂಕರ ನಿರೂಪಿಸಿ, ಸ್ವಾಗತಿಸಿದರು.