ಶಾಲೆಯಂಗಳದಲ್ಲಿ ಕವಿ-ಕಾವ್ಯ ಕಾರ್ಯಕ್ರಮ
ಚಿಂತಾಮಣಿ: ಕನ್ನಡ ಸಾಹಿತ್ಯ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನಿಂದ ತಾಲೂಕಿನ ದೊಡ್ಡಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಾಲೆಯ ಅಂಗಳದಲ್ಲಿ ಕವಿ-ಕಾವ್ಯ ಹಾಗೂ ಅಚ್ಚಗನ್ನಡ ಸ್ವಚ್ಛಗನ್ನಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಕುವೆಂಪು, ಡಾ. ಶಿವರಾಮಕಾರಂತ, ಪೂರ್ಣಚಂದ್ರ ತೇಜಸ್ವಿ ಮುಂತಾದವರ ಬದುಕು ಬರಹಗಳ ಕುರಿತು ಅರ್ಥಪೂರ್ಣವಾಗಿ ಮಾತನಾಡುವ ಮೂಲಕ ಕಾವ್ಯಲೋಕದ ದಿಗ್ಗಜರಿಗೆ ನುಡಿ ನಮನ ಸಲ್ಲಿಸಿದರು.
ಮತ್ತೆ ಕೆಲವರು ಅನಿಷ್ಟ ಪದ್ಧತಿಗಳಾದ ವರದಕ್ಷಿಣೆ, ಮೂಢನಂಬಿಕೆ ಹಾಗೂ ಬಾಲ್ಯವಿವಾಹದ ಕುರಿತು ಒಂದೇ ಒಂದು ಅನ್ಯಭಾಷಾ ಪದ ಬಳಸದೆ ಅಚ್ಚಕನ್ನಡದಲ್ಲಿ ಮಾತನಾಡಿ ವಿಷಯ ಮಂಡಿಸಿದರು. ಸ್ವರಚಿತ ಚುಟುಕು ಹಾಗೂ ವಚನಗಳನ್ನು ವಾಚಿಸುವ ಮೂಲಕ ಕಾವ್ಯ ಪ್ರೇಮ ಮೆರೆದರು. ಕೋಲಾಟ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಕರ್ಷಕವಾಗಿ ನಡೆಸಿಕೊಟ್ಟರು.
ಗಿಡ ನೆಡವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಪಂ ಅಧ್ಯಕ್ಷೆ ಗೌರಮ್ಮನಾಗರಾಜ್ ಅವರು ಗಡಿಭಾಗದ ತಾಲೂಕಿನ ಶಾಲೆಗಳಲ್ಲಿ ಹೆಚ್ಚಾಗಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಚು.ಸಾ.ಪ ಅಧ್ಯಕ್ಷ ಆರ್. ಶಿವಕುಮಾರ್ ಮಾತನಾಡಿದರು. ಜನಪದ ಕಲಾವಿದ ಸೀಕಲ್ ನರಸಿಂಹಪ್ಪ, ಚಂದ್ರಶೇಖರ್, ಹರಿಕಿಶೋರ್ ಹಲವು ಜನಪದ ಗೀತೆಗಳನ್ನು ಹಾಡಿದರು. ರಂಗಭೂಮಿ ಕಲಾವಿದ ಪೊಲೀಸ್ ವಿಶ್ವನಾಥ್ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಾಡಿನ ರಕ್ಷಣೆಗಾಗಿ ನೇಣಿನ ಕುಣಿಕೆಗೆ ಕೊರಳೊಡ್ಡುವ ಸನ್ನಿವೇಷ ಅಭಿನಯಿಸಿದರು. ಸಿರಿಗನ್ನಡ ವೇದಿಕೆಯ ಕೆ.ಎನ್. ಅಕ್ರಂಪಾಷ ಹಲವು ಹಾಸ್ಯ ಪ್ರಸಂಗಗಳನ್ನು ಪ್ರಸ್ತುತ ಪಡಿಸಿ ಎಲ್ಲರನ್ನು ನಗೆಗಡಲ್ಲಿ ತೇಲಿಸಿದರು. ವೇದಿಕೆ ಅಧ್ಯಕ್ಷ ಕಾಗತಿ ವಿ. ವೆಂಕಟರತ್ನಂ ಮಾತನಾಡಿದರು. ಸಾಹಿತಿ ಕೋಟಗಲ್ ನಾಗಸುಬ್ರಮಣ್ಯಂರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಪ್ರಕಾಶರೆಡ್ಡಿ, ರಾಘವೇಂದ್ರ, ನಾಗೇಶ್, ರಾಯ್ಲ ಶಿ.ಮ. ಮಂಜುನಾಥ್, ಕೆ.ಎಸ್. ನೂರುಲ್ಲಾ, ಎಸ್.ಸಿ. ಶ್ರೀನಿವಾಸರೆಡ್ಡಿ, ಸಿ. ವೆಂಕಟರವಣಪ್ಪ ಇದ್ದರು.