ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಗವಿಕಲರ ದಿನಾಚರಣೆ; ಶಿಕ್ಷಣ ಇಲಾಖೆ ಅವಾಂತರ

Rashmi Kasaragodu
Updated On : 5 Dec 2013, 1:11 am

ಕೋಲಾರ: ವಿಶ್ವ ವಿಕಲಚೇತನರ ದಿನಾಚರಣೆಯ ದಿನವೇ ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯ ಶಾಲೆಗಳಲ್ಲಿ ಓದುತ್ತಿರುವ ವಿಕಲಚೇತನ ಮಕ್ಕಳ ಬಗ್ಗೆ ಅಸಡ್ಡೆ ತೋರಿರುವುದು ಬೆಳಕಿಗೆ ಬಂದಿದೆ.
ನಗರದ ಕಠಾರಿಪಾಳ್ಯದಲ್ಲಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಮಂಗಳವಾರ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಅಂಗವಿಕಲ ಮಕ್ಕಳಿಗೆ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಮಟ್ಟದ ಶಾಲೆಗಳಲ್ಲಿ ಸುಮಾರು 32 ಸಾವಿರ ಮಕ್ಕಳು ಓದುತ್ತಿದ್ದು ಈ ಪೈಕಿ ಕನಿಷ್ಠ ಒಂದು ಸಾವಿರ ಮಕ್ಕಳು ವಿವಿಧ ರೀತಿಯ ಅಂಗವಿಕಲತೆಗೆ ಒಳಗಾಗಿದ್ದು ಇವರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅನುಕಂಪಕ್ಕೆ ಬದಲಾಗಿ ಆತ್ಮಸ್ಥೈರ್ಯ ತುಂಬಲು ಸೂಚಿಸಿದೆ.
ಶಿಕ್ಷಣ ಇಲಾಖೆಯು ಪ್ರಕಟಿಸುವ ತಿಂಗಳ ತಿರುಳು ಕಾರ್ಯಕ್ರಮದಡಿ ಡಿ.3ರಂದು ಕಡ್ಡಾಯವಾಗಿ ಎಲ್ಲಾ ಶಾಲೆಗಳಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಆಚರಿಸಬೇಕೆಂದು ಸೂಚಿಸಿದ್ದರೂ ಅನೇಕ ಶಾಲೆಗಳಲ್ಲಿ ಕಾರ್ಯಕ್ರಮಗಳು ನಡೆಸಿಲ್ಲ. ತಾಲೂಕು ಮಟ್ಟದಲ್ಲಿ ನಡೆದ ಕಾರ್ಯಕ್ರಮ ಅಂಗವಿಕಲ ಮಕ್ಕಳಲ್ಲಿ ಹೊಸ ಬೆಳಕು ನೀಡಬೇಕಾಗಿತ್ತು. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ತಾತ್ಸಾರದಿಂದಾಗಿ ಕಳೆಗುಂದಿತು.
ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಕೇವಲ 26 ಮಂದಿ ಅಂಗವಿಕಲ ಮಕ್ಕಳನ್ನು ಕರೆ ತರಲಾಗಿತ್ತು. ಈ ಮಕ್ಕಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳು ಸಹ ಬೇಕಾಬಿಟ್ಟಿಯಾಗಿ ನಡೆದವು. ಕಾಲು-ಕೈ ಸ್ವಾಧೀನ ಇಲ್ಲದ ಮಕ್ಕಳನ್ನು ಕುರ್ಚಿಯಲ್ಲಿ ಕೂರಿಸುವ ಬದಲು ನೆಲದಲ್ಲಿ ಜಮಖಾನ ಹಾಕಿ ಕೂರಿಸಲಾಗಿತ್ತು.
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಶಕ್ತಿ ತುಂಬುವ ಬದಲು ವಾಂಗಿಬಾತ್ ನೀಡಿ ಇದನ್ನೇ ಮೃಷ್ಠಾನ್ನ ಎಂದು ಭಾವಿಸುವಂತೆ ತಿಳಿಸಲಾಯಿತು. ಮಕ್ಕಳ ಜತೆ ಬಂದಿದ್ದ ಪೋಷಕರು ಪ್ರತಿಭಟನೆ ಮಾಡಲು ಧೈರ್ಯವಿಲ್ಲದೆ ಅಸಹಾಯಕತೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಸರ್ಕಾರ 20 ಸಾವಿರ ಬಿಡುಗಡೆ ಮಾಡಿದ್ದರೂ ವ್ಯವಸ್ಥಿತವಾಗಿ ಸ್ಪರ್ಧೆಗಳು ನಡೆಸಲಿಲ್ಲ. ಡಿಡಿಪಿಐ ಅಥವಾ ಬಿಇಒ ಸಹ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ಭೇಟಿ ನೀಡಿದ್ದ ಬಿಇಒ ಜಗದೀಶ್ ಅವರು ತಾಪಂ ಸಭೆಗೆ ಹೋಗುವುದಾಗಿ ಕಾರ್ಯಕ್ರಮದಿಂದ ದೂರ ಉಳಿಯಲು ಮಕ್ಕಳ ಸಂಖ್ಯೆ ಕಡಿಮೆ ಇದ್ದದ್ದು ಹಾಗೂ ನೀರಸವಾದ ವಾತಾವರಣವೇ ಕಾರಣವೆನ್ನಲಾಗಿದೆ. ಅಂಗವಿಕಲ ಮಕ್ಕಳಿಗೆ ಸರ್ಕಾರದಿಂದ ಸವಲತ್ತುಗಳು ನೀಡುವ ಕಾರ್ಯಕ್ರಮಕ್ಕೆ ಮಕ್ಕಳೊಂದಿಗೆ ಅತ್ಯಂತ ಉತ್ಸಾಹದಿಂದ ಭಾಗವಹಿಸುವ ಶಿಕ್ಷಕರು ವಿಶ್ವ ಅಂಗವಿಕಲ ದಿನಾಚರಣೆಗೆ ಮಾತ್ರ ಆಸಕ್ತಿ ತೋರದಿರುವುದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement