ಅನಾಥ ಮಕ್ಕಳಿಗೆ ಮಾದರಿ ಈ ಬಾಲಕಿ
ಕೋಲಾರ: ರಾಜಲಕ್ಷ್ಮೀ ಬೆಂಕಿಯಲ್ಲಿ ಅರಳಿದ ಹೂವು ಎಂದರೆ ತಪ್ಪಾಗಲಾರದು. ಮೂಲತಃ ತಮಿಳುನಾಡಿನವಳಾದ ರಾಜಲಕ್ಷ್ಮೀ ಕನ್ನಡಿಗರು ಹೆಮ್ಮೆ ಪಡುವ ಅಪರೂಪದ ಪ್ರತಿಭೆ. ತಮಿಳುನಾಡಿನಿಂದ ಬೆಂಗಳೂರಿಗೆ ವಲಸೆ ಬಂದು ತಂದೆ-ತಾಯಿ, ಬಂಧು ಬಳಗದಿಂದ ದೂರವಾಗಿ ಅನಾಥೆಯಾಗಿದ್ದ ಈ ಹುಡುಗಿ ಈಗ ಗಡಿ ಭಾಗಕ್ಕೆ ಸೇರಿದ ಕೆಜಿಎಫ್ನಲ್ಲಿ ನೆಲಸಿದ್ದಾಳೆ. ಜಿಲ್ಲೆಯ ಕನ್ನಡಿಗರು ಮಾತ್ರವಲ್ಲದೆ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಗೆ ಈ ಹುಡುಗಿ ಮಾದರಿ ಆಗಿದ್ದಾಳೆ. ಜಿಲ್ಲಾ ಮಟ್ಟದ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆ ಆಗುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾಳೆ.
ರಾಜಲಕ್ಷ್ಮೀಯ ಕಥೆ-ವ್ಯಥೆ: ಕೂಲಿ ಕೆಲಸಕ್ಕಾಗಿ ತಂದೆ ಮುರುಗನ್ ಮತ್ತು ತಾಯಿ ಪಂಜಾ ಬೆಂಗಳೂರಿಗೆ ವಲಸೆ ಬಂದಾಗ ರಾಜಲಕ್ಷ್ಮೀ ತನ್ನ ಕುಟುಂಬ ಸದಸ್ಯರೊಂದಿಗೆ ಕರ್ನಾಟಕಕ್ಕೆ ಬರುವುದು ಅನಿವಾರ್ಯವಾಯಿತು. ಬಾಲ್ಯದಿಂದಲೇ ಪ್ರತಿಭೆ ಮೈಗೂಡಿಸಿಕೊಂಡಿದ್ದ ಮಗಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕೆಂಬ ಬಯಕೆ ತಂದೆಗಿತ್ತಾದರೂ ಕಡುಬಡತನದಿಂದಾಗಿ ಸಾಧ್ಯವಾಗಲಿಲ್ಲ. ತಂದೆ ಮತ್ತು ನಾಲ್ಕು ಮಕ್ಕಳನ್ನು ಸಾಕಲು ಮುರುಗನ್ ಕಷ್ಟಪಡುತ್ತಿದ್ದರು. ದುರಾದೃಷ್ಟವಶಾತ್ ಅನಾರೋಗಕ್ಕೆ ತುತ್ತಾಗಿ ಕೊನೆಯುಸಿರು ಎಳೆದಾಗ ಬಡತನ ಮತ್ತಷ್ಟು ಹೆಚ್ಚಾಯಿತು. ಗಂಡ ತೀರಿಕೊಂಡಿದ್ದರಿಂದ ಮಾನಸಿಕವಾಗಿ ಕುಗ್ಗಿದ ತಾಯಿ ಪಂಜಾ ಸಹ ಕಾಲವಾದಾಗ ರಾಜಲಕ್ಷ್ಮೀ ಹಾಗೂ ಒಡಹುಟ್ಟಿದವರು ತಬ್ಬಲಿಗಳಾದರು.
ರಾಜಲಕ್ಷ್ಮೀಗೆ ತಂದೆ-ತಾಯಿಯ ಕಷ್ಟ ಅರಿವಾಗಿತ್ತು. ತಾನು ಇದ್ದ ಪ್ರದೇಶದಲ್ಲಿ ಮಕ್ಕಳು ಬಣ್ಣ ಬಣ್ಣದ ಸಮವಸ್ತ್ರ, ಶೂ, ಟೈ, ಹೆಗಲಿಗೆ ಆಕರ್ಷಕವಾದ ಬ್ಯಾಗ್, ಕೈಯಲ್ಲಿ ಊಟದ ಕಿಟ್ ಹೊತ್ತು ತನ್ನ ಶಾಲೆಗೆ ಹೋಗುವುದನ್ನು ಕಂಡು ದುಖಃ ಪಡುತ್ತಿದ್ದಾಗ ದಾನಿಗಳ ಕಣ್ಣಿಗೆ ಬಿದ್ದ ರಾಜಲಕ್ಷ್ಮೀಗೆ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಓದುವುದಕ್ಕೆ ಅವಕಾಶ ಸಿಕ್ಕಿತು. ಬೆಂಗಳೂರಿನ ಅನಾಥಾಲಯೊಂದರಲ್ಲಿ ಇದ್ದುಕೊಂಡು 8ನೇ ತರಗತಿ ಮುಗಿಸಿದಳು, ಇದೇ ರೀತಿ ಅಣ್ಣ ಪಾರ್ಟ್ ಟೈಮ್ ಜಾಬ್ ಮಾಡಿಕೊಂಡು ಉನ್ನತ ವ್ಯಾಸಂಗ ಮುಂದುವರೆಸಿದ್ದಾರೆ. ಅಕ್ಕ ಮತ್ತು ತಮ್ಮ ಬೆಂಗಳೂರಿನಲ್ಲೇ ಬದುಕು ಮುಂದುವರೆಸಿದ್ದಾರೆ.
ಬಹುಮುಖ ಪ್ರತಿಭೆ: ರಾಜಲಕ್ಷ್ಮೀಯ ಮಾತೃಭಾಷೆ ತಮಿಳು ಆದರೂ ತನ್ನ ಸುತ್ತಮುತ್ತಲ ಪರಿಸರದಿಂದಾಗಿ ಕನ್ನಡ ಕಲಿಯಬೇಕೆಂಬ ಆಸೆಯಿಂದಾಗಿ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಕನ್ನಡವನ್ನೇ ಮೊದಲ ಭಾಷೆಯನ್ನಾಗಿ ಆಯ್ಕೆ ಮಾಡಿದ್ದರಿಂದ ಕನ್ನಡ ಚನ್ನಾಗಿ ಕಲಿತಿದ್ದಾಳೆ, ಅರಳು ಹುರಿದಂತೆ ಕನ್ನಡದಲ್ಲಿ ಭಾಷಣ ಮಾಡುತ್ತಾಳೆ, ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆ ಅನಾವರಣಗೊಳಿಸಿದ್ದಾಳೆ.
ಕನ್ನಡ ಮಾತ್ರವಲ್ಲ, ಇಂಗ್ಲಿಷ್, ಹಿಂದಿಯಲ್ಲೂ ಪರಿಣಿತಳಾಗಿದ್ದಾಳೆ. ಕೆಜಿಎಫ್ಗೆ ಬಂದ ಮೇಲೆ ತೆಲುಗು, ಮಾಲಿಯಾಳಂ ಕಲಿಯುತ್ತಿದ್ದಾರೆ. ಬಹುಮುಖ ಪ್ರತಿಭೆ ಎಂದು ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ಬೆಂಗಳೂರಿನಲ್ಲೇ ತನ್ನ ಭವಿಷ್ಯ ರೂಪಿಸಿಕೊಳ್ಳಬಹುದಾಗಿತ್ತಾದರೂ ಕಾರಣಾಂತರಗಳಿಂದ ಕಳೆದ ವರ್ಷ ಕೆಜಿಎಫ್ನ ಚಾಂಪಿಯನ್ ರಿಫ್ನಲ್ಲಿರುವ ಸಂತ ಜೋಸೆಪ್ ಶಾಲೆಗೆ ಸೇರಿದ್ದಾಳೆ. ಇದೇ ಶಾಲೆಗೆ ಸೇರಿದ ಹಾಸ್ಟೆಲ್ನಲ್ಲಿ ತಂಗಿದ್ದಾಳೆ.
ಇದಕ್ಕೆ ನೆರವು ನೀಡಿರುವುದು ಬೆಂಗಳೂರಿನ ಕೈಸ್ತ್ರ ಸಮುದಾಯಕ್ಕೆ ಸೇರಿದ ಸಮಾಜ ಸೇವಕರು. ರಾಜಲಕ್ಷ್ಮೀಗೆ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಯಾವುದೇ ರೀತಿಯ ತೊಂದರೆ ಇರಲಿಲ್ಲ, ಮುಂದಿನ ಭವಿಷ್ಯಕ್ಕಾಗಿ ಸೂಕ್ತ ಹಾಗೂ ಭದ್ರವಾದ ನೆಲೆ ಬೇಕೆಂಬ ಬಯಕೆಯಿಂದ ಕೆಜಿಎಫ್ ಸೇರಿದ್ದಾಳೆ. ಕೇವಲ ಎರಡು ವರ್ಷದಲ್ಲೇ ಶಾಲೆಯ ಆಡಳಿತ ಮಂಡಳಿಯ ಹಾಗೂ ವಿದ್ಯಾರ್ಥಿನಿಯರ ಅಚ್ಚು ಮೆಚ್ಚಿನ ಗೆಳತಿಯಾಗಿದ್ದಾಳೆ.
ಆಟ-ಪಾಠ ಎರಡಕ್ಕೂ ಸೈ: ಶಾಲೆಗೆ ಸೇರಿದ ಎರಡೇ ತಿಂಗಳಲ್ಲಿ ಶಾಲೆಯ ನಾಯಕಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸುವ ಮೂಲಕ ಗಮನ ಸೆಳೆದಿದ್ದಾಳೆ. ಕೇವಲ ಓದಿನಲ್ಲಿ ಮಾತ್ರವಲ್ಲದೆ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಶಾಲೆಗೆ ಮಾತ್ರವಲ್ಲ, ಜಿಲ್ಲೆಗೂ ಕೀರ್ತಿ ತಂದಿದ್ದಾಳೆ.
ಆತ್ಮವಿಶ್ವಾಸ, ಶ್ರದ್ಧೆ, ವಿನಯ, ಪ್ರಾಮಾಣಿಕತೆ, ಗುರು-ಹಿರಿಯರೊಂದಿಗೆ ಆತ್ಮೀಯತೆ, ಗೌರವ, ರಾಗ-ದ್ವೇಷಗಳಿಲ್ಲದೆ ಪ್ರತಿಯೊಬ್ಬರನ್ನು ಪ್ರೀತಿಸುವ ಗುಣ, ಏನಾದರೂ ಸಾಧಿಸಬೇಕು, ಸಮಾಜಕ್ಕೆ ನನ್ನಿಂದ ಏನಾದರೂ ಕೊಡುಗೆ ನೀಡಬೇಕೆಂಬ ಆಸೆಯೊಂದಿಗೆ ಗುರಿ ಸಾಧಿಸಲು ಪ್ರಯತ್ನಿಸುತ್ತಿರುವ ರಾಜಲಕ್ಷ್ಮೀಯನ್ನು ಪತ್ತೆ ಮಾಡಿ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೆಜಿಎಫ್ ವಿಶೇಷ ಘಟಕ ಒಳ್ಳೆಯ ಕೆಲಸ ಮಾಡಿದ್ದು, ಬೆಂಕಿಯಲ್ಲಿ ಅರಳಿರುವ ಈ ಪ್ರತಿಭೆಯ ಮೂಲಕ ಜಿಲ್ಲೆಯಲ್ಲಿ ಮತಷ್ಟು ಉತ್ತಮ ಪ್ರತಿಭೆಗಳು ಹೊರ ಹೊಮ್ಮುವಂತಾಗಲಿ ಎಂಬುದು ಎಲ್ಲರ ಆಶಯವಾಗಿದೆ.